ಮಹಾದಾಯಿ ಜಲ ವಿವಾದ : ಸುಪ್ರೀಂ ಮೋರೆ ಹೋಗಲು ನಿರ್ಧಾರ: ಮುಖ್ಯಮಂತ್ರಿ

ಬೆಂಗಳೂರು, ಆ.19: ಮಹಾದಾಯಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯ ಮಂಡಳಿ ನೀಡಿರುವ ಮಧ್ಯಂತರ ತೀರ್ಪು ಪ್ರಶ್ನಿಸಿ ಮುಂದಿನ ವಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ವಕೀಲರಾದ ಫಾಲಿ ನಾರಿಮನ್ ಮತ್ತು ಅವರ ತಂಡದ ಜೊತೆ ಸಮಾಲೋಚನೆ ನಡೆಸಿದ ಬಳಿಕವಷ್ಟೇ ಸರಕಾರ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ ಎಂದರು.
ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ನಾರಿಮನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಾರಿಮನ್ ಮತ್ತವರ ತಂಡ ವ್ಯಕ್ತಪಡಿಸಿರುವ ಅಭಿಪ್ರಾಯದ ಪ್ರಕಾರ ಸುಪ್ರೀಂಕೋರ್ಟಿನ ಮೊರೆ ಹೋಗುತ್ತಿದ್ದೇವೆ. ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ಮನವಿಯ ಕರಡು ಈಗಾಗಲೇ ಸಿದ್ಧವಾಗಿದೆ ಎಂದು ಅವರು ಹೇಳಿದರು. ತಮಿಳುನಾಡು ವಿರುದ್ಧ ಕಾನೂನು ಹೋರಾಟ
: ಕಾವೇರಿ ನದಿಯಲ್ಲಿ ನಮ್ಮ ಪಾಲಿನ ನೀರು ಬಿಡುತ್ತಿಲ್ಲ ಎಂದು ತಮಿಳುನಾಡು ಆರೋಪಿಸುತ್ತಿದೆ. ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿಯೂ ಹೇಳಿದೆ. ನಮ್ಮ ಸರಕಾರವೂ ಕಾನೂನು ಹೋರಾಟಕ್ಕೆ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಉಂಟಾಗಿರುವ ಕುರಿತು ಮತ್ತು ವಾಸ್ತವ ಚಿತ್ರಣ ಏನು ಎಂಬುದನ್ನು ವಿವರಿಸಿ ಪ್ರಧಾನಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಮಳೆ ಬಂದಾಗ ನಾವು ನೀರು ಕೊಟ್ಟಿದ್ದೇವೆ. ಆದರೆ, ಈಗ ಸಂಕಷ್ಟ ಸೂತ್ರದ ಅನ್ವಯವೂ ನೀರು ಕೊಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲವನ್ನೂ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ವಿವರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ವಸ್ತುಸ್ಥಿತಿಯನ್ನು ತಮಿಳುನಾಡು ಅರ್ಥ ಮಾಡಿಕೊಳ್ಳಬೇಕು. ನೀರಿಲ್ಲವೆಂದರೆ ನಾವಾದರೂ ಏನು ಮಾಡಬೇಕು. ಹೇಮಾವತಿ, ಹಾರಂಗಿ, ಕಬಿನಿ, ಕೆಆರ್‌ಎಸ್ ಅಣೆಕಟ್ಟುಗಳಲ್ಲಿ ಈ ವೇಳೆಗೆ ಒಟ್ಟು 114 ಟಿಎಂಸಿ ನೀರು ಸಂಗ್ರಹವಾಗಿರಬೇಕಿತ್ತು. ಆದರೆ, ಈಗ ಇರುವುದೆ 52 ಟಿಎಂಸಿ.ಅದರಲ್ಲಿ 40 ಟಿಎಂಸಿ ಕುಡಿಯುವ ನೀರಿಗಾಗಿ ಮೀಸಲಿಡಬೇಕು ಎಂದು ಅವರು ಹೇಳಿದರು.
ಈ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ಸ್ವಲ್ಪನೀರು ಬಿಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮಳೆಯಾದರೆ ಸಮಸ್ಯೆ ಪರಿಹಾರವಾಗುತ್ತದೆ. ಮಳೆಯೇ ಸಂಕಷ್ಟಕ್ಕೆ ಪರಿಹಾರ ಒದಗಿಸಬೇಕು. ಈ ವಿಚಾರದಲ್ಲಿ ತಮಿಳುನಾಡು ಜೊತೆ ಮಾತುಕತೆ ಮುಗಿದ ಅಧ್ಯಾಯ. ಅವರು ನ್ಯಾಯಾಲಯಕ್ಕೆ ಹೋದರೆ ನಾವೂ ಹೋಗುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಮೋಡ ಬಿತ್ತನೆ ಸಾಧ್ಯವಿಲ್ಲ
: ಮೋಡ ಬಿತ್ತನೆಗೆ ಸರಕಾರ ಮುಂದಾಗಿದ್ದು ನಿಜ. ಆದರೆ, ತಜ್ಞರ ಅಭಿಪ್ರಾಯ ಕೇಳಿದ ಬಳಿಕ ಆ ತೀರ್ಮಾನದಿಂದ ಹಿಂದೆ ಸರಿದಿದ್ದೇವೆ. ಜುಲೈ ತಿಂಗಳಲ್ಲಿ ಮೋಡ ಬಿತ್ತನೆ ಮಾಡುವುದು ಸೂಕ್ತ. ಈಗ ಮಾಡಿದರೂ ಅದಕ್ಕೆ ಪೂರಕವಾದ ಮೋಡಗಳು ಸಿಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದುದರಿಂದ ಜುಲೈ ತಿಂಗಳಲ್ಲಿ ಮೋಡ ಬಿತ್ತನೆ ಮಾಡಲಿಲ್ಲ ಎಂದು ಅವರು ಹೇಳಿದರು. ನಿಗಮ-ಮಂಡಳಿಗೆ ಶೀಘ್ರವೇ ಹೊಸ ಅಧ್ಯಕ್ಷರು: ನಿಗಮ-ಮಂಡಳಿಗಳಿಗೆ ನೇಮಕವಾಗಿರುವ ಅಧ್ಯಕ್ಷರ ಅವಧಿ ಆ.24ಕ್ಕೆ ಮುಗಿಯಲಿದೆ. ತಕ್ಷಣ ಹೊಸಬರನ್ನು ನೇಮಕ ಮಾಡಲಾಗುವುದು. ಕೆಪಿಸಿಸಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡುವುದು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರ ಎಂದು ಮುಖ್ಯಮಂತ್ರಿ ತಿಳಿಸಿದರು.







