ಪಿ.ಎ. ತಾಂತ್ರಿಕ ಮಹಾವಿದ್ಯಾಲಯ ಸಂಶೋಧನಾ ವಿಭಾಗದ ಲಾಂಛನ ಬಿಡುಗಡೆ

ಕೊಣಾಜೆ, ಆ.19: ನಡುಪದವಿನಲ್ಲಿರುವ ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ಸೆಂಟರ್ ಆಫ್ ಎಕ್ಸಲೆನ್ಸ್ ಪೋರ್ ರಿಸರ್ಚ್ ಆ್ಯಂಡ್ ಇನ್ನೋವೇಶನ್‌ನ ಲಾಂಛನ ಬಿಡುಗಡೆ ಸಮಾರಂಭವು ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಸಂಶೋಧನಾ ವಿಭಾಗದ ಲಾಂಛನವನ್ನು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಬ್ದುಲ್ಲಾ ಇಬ್ರಾಹೀಂ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ಸಂಶೋಧನಾ ವಿಭಾಗ ನೂತನ ಅವಿಷ್ಕಾರಗಳಿಗೆ ಹಾಗೂ ಸಮಾಜಕ್ಕೆ ಉಪಯೋಗವಾಗುವಂತಹ ಸಂಶೋಧನೆ ಮಾಡುವುದು, ಕೈಗಾರಿಕೆ ಮತ್ತು ಶೈಕ್ಷಣಿಕ ವಿಷಯದಲ್ಲಿ ಸಹಮತ ಮೂಡಿಸುವುದು ಹಾಗೂ ವಿದ್ಯಾರ್ಥಿಗಳನ್ನು ವೃತ್ತಿಪರರನ್ನಾಗಿ ರೂಪಿಸಲು ಸಹಕರಿಸುವ ವೇದಿಕೆಯಾಗಿ ಕಾರ್ಯಾಚರಿಸುತ್ತದೆ ಎಂದು ಅವರು ಹೇಳಿದರು.
ಈಗಾಗಲೇ ಸಂಸ್ಥೆಯಲ್ಲಿ ಹೈಪರ್ಫಾಮೆನ್ಸ್ ಕಂಪ್ಯೂಟಿಂಗ್ ಲ್ಯಾಬ್, ನ್ಯಾನೋ ಬಯೋಮೆಟಿರಿಯಲ್ಸ್ ಲ್ಯಾಬ್, ರೊಬೋಟಿಕ್ಸ್ ಆಟೋಮೇಶನ್ ಲ್ಯಾಬ್, ಮಿನಿ ಚಾನಲ್ಸ್ ಮುಂತಾದ ಪ್ರಯೋಗಾಲಯಗಳನ್ನು ಎಐಸಿಟಿಇ, ವಿಜಿಎಸ್‌ಟಿ ಕರ್ನಾಟಕ ಇದರ ಹಣಕಾಸಿನ ನೆರವಿನಿಂದ ಕಾಲೇಜಿನಲ್ಲಿ ಸ್ಥಾಪಿಸಲಾಗಿದೆ ಎಂದು ತಿಳಿಸಿದರು. ಈ ಸಂಶೋಧನಾ ವಿಭಾಗದ ಡಾ.ಝಾಹಿದ್ ಅನ್ಸಾರಿ, ಡಾ.ರಮೀಝ್ ಎಂ.ಕೆ. ಮತ್ತು ಡಾ.ಖಾಲಿದ್ ಪರ್ವೇಝ್‌ರಿಗೆ ಸುಮಾರು 50 ಲಕ್ಷ ಸಂಶೋಧನಾ ಅನುದಾನ ಲಭಿಸಿದೆ.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಅಬ್ದುಲ್ ಶರೀಫ್, ಉಪಪ್ರಾಂಶುಪಾಲ ಡಾ.ರಮೀಝ್ ಎಂ.ಕೆ., ಶೈಕ್ಷಣಿಕ ನಿರ್ದೇಶಕ ಪ್ರೊ.ಸರ್ಫರಾಝ್ ಹಾಶಿಂ ಜೆ. ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







