ಪೆಲೆಟ್ ಗನ್‌ಗಳನ್ನು ನಿಷೇಧಿಸಿದರೆ ಕಾಶ್ಮೀರದಲ್ಲಿ ಸಾವುಗಳು ಇನ್ನೂ ಹೆಚ್ಚು
ನ್ಯಾಯಾಲಯದಲ್ಲಿ ಸಿಆರ್‌ಪಿಎಫ್ ನಿವೇದನೆ
.jpg)
ಶ್ರೀನಗರ,ಆ.19: ಗುಂಪು ನಿಯಂತ್ರಣ ಕ್ರಮವಾಗಿ ಪೆಲೆಟ್ ಗನ್‌ಗಳ ಬಳಕೆಯನ್ನು ನಿಷೇಧಿಸಿದರೆ ಅತಿರೇಕದ ಸಂದರ್ಭಗಳಲ್ಲಿ ಗುಂಡುಗಳನ್ನು ಹಾರಿಸುವುದು ತನಗೆ ಅನಿವಾರ್ಯವಾಗಲಿದೆ ಮತ್ತು ಇದು ಸಾವುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯು ಜಮ್ಮು-ಕಾಶ್ಮೀರ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದೆ.
ಜು.8ರಂದು ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಹಿಝ್ಬುಲ್ ಮುಜಾಹಿದೀನ್ ಕಮಾಂಡರ್ ಬುರ್ಹಾನ್ ವಾನಿ ಕೊಲ್ಲಲ್ಪಟ್ಟ ಬಳಿಕ ಹಿಂಸಾತ್ಮಕ ಪ್ರತಿಭಟನೆಗಳಿಂದ ತತ್ತರಿಸಿರುವ ಕಾಶ್ಮೀರ ಕಣಿವೆಯಲ್ಲಿ ದಂಗೆ ನಿಯಂತ್ರಣ ಕ್ರಮವಾಗಿ ಪೆಲೆಟ್ ಗನ್‌ಗಳ ಬಳಕೆಯನ್ನು ನಿಷೇಧಿಸುವಂತೆ ಕೋರಿ ಉಚ್ಚ ನ್ಯಾಯಾಲಯದ ಬಾರ್ ಅಸೋಸಿಯೇಷನ್ ಜು.30ರಂದು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರವಾಗಿ ಸಿಆರ್‌ಪಿಎಫ್ ಈ ಪ್ರಮಾಣಪತ್ರವನ್ನು ಸಲ್ಲಿಸಿದೆ.
ಪೆಲೆಟ್ ಗನ್ 2010ರಲ್ಲಿ ಬಳಕೆಗೆ ಬಂದಿದ್ದು,ದಂಗೆ ನಿಯಂತ್ರಣ ಅಸ್ತ್ರವಾಗಿ ಅದನ್ನು ಒಪ್ಪಿಕೊಳ್ಳಲಾಗಿದೆ. ದಂಗೆ ನಿಯಂತ್ರಣ ಸಂದರ್ಭದಲ್ಲಿ ಗೋಲಿಬಾರ್ ಆದೇಶವಿದ್ದಾಗ ಜನರು ಓಡುವ,ಬಗ್ಗುವ ಮತ್ತು ತಿರುಗುವ ಸಂದರ್ಭಗಳಲ್ಲಿ ಸೊಂಟದ ಕೆಳಕ್ಕೆ ಮಾತ್ರ ಗುಂಡು ಹಾರಿಸಬೇಕೆಂಬ ನಿಯಮವನ್ನು ಪಾಲಿಸುವುದು ಕಷ್ಟವಾಗುತ್ತದೆ. ಹೀಗಾಗಿ ಪೆಲೆಟ್ ಗನ್‌ಗಳ ಬಳಕೆ ಸೂಕ್ತವಾಗಿದೆ ಎಂದು ಅದು ತಿಳಿಸಿದೆ. ಜ.9ರಿಂದ ಆ.11ರವರೆಗೆ ಕಣಿವೆಯಲ್ಲಿ ಪ್ರತಿಭಟನಾಕಾರರಿಂದ ಹಿಂಸಾಚಾರ ಸಂದರ್ಭಗಳಲ್ಲಿ ಸುಮಾರು 3,500 ಪೆಲೆಟ್ ಕಾರ್ಟ್ರಿಡ್ಜ್‌ಗಳನ್ನು ತಾನು ಹಾರಿಸಿರುವುದಾಗಿ ಅದು ಹೇಳಿದೆ.
ಪಿಐಎಲ್‌ಗೆ ಸಂಬಂಧಿಸಿದಂತೆ ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ತಮ್ಮ ಉತ್ತರಗಳನ್ನು ಸಲ್ಲಿಸಿದ್ದರೆ, ರಾಜ್ಯ ಸರಕಾರವು ಈವರೆಗೂ ಉತ್ತರಿಸಿಲ್ಲ.





