ಜನ ಸಂಪರ್ಕ ಸಭೆಯಿಂದ ಸಾರ್ವಜನಿಕರಿಗೆ ಪ್ರಯೋಜನ: ಶಾಸಕ ಲೋಬೊ
ಮಂಗಳೂರು, ಆ.19: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಂಕನಾಡಿ ವೆಲೆನ್ಸಿಯಾ ವಾರ್ಡ್‌ನ ಜನ ಸಂಪರ್ಕ ಸಭೆಯು ಇಂದು ಗರೋಡಿ ಬಳಿಯಲ್ಲಿರುವ ಸರ್ವ ಮಂಗಳ ಹಾಲ್‌ನಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್. ಲೋಬೊ, ರಾಜ್ಯ ಸರಕಾರವು ಪ್ರತೀ ತಿಂಗಳಿಗೆ ಜನಸಂಪರ್ಕ ನಡೆಸಲು ಇಚ್ಛಿಸಿದೆ. ಗ್ರಾಮೀಣ ಭಾಗದಲ್ಲಿ ಗ್ರಾಮ ಸಭೆ ಇರುತ್ತದೆ. ಇಂತಹ ಸಭೆಯಲ್ಲಿ ಸರಕಾರಿ ಕೆಲಸ ಕಾರ್ಯಗಳ ಬಗ್ಗೆ ವಿಮರ್ಶೆ ನಡೆಯುತ್ತದೆ. ಎಲ್ಲಾ ಇಲಾಖೆಯ ಅಧಿಕಾರಿಗಳು ಒಂದೆಡೆ ಸೇರಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸ್ಪಂದನೆ ನೀಡಲಿಕ್ಕೆ ಈ ಸಭೆಯು ಬಹಳ ಸಹಕಾರಿಯಾಗುತ್ತದೆ ಎಂದರು.
ಪಂಪ್‌ವೆಲ್ ವೃತ್ತದಿಂದ ಪಡೀಲ್ ತನಕ ರಸ್ತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿದ್ದು, ಅದರ ಕಾಂಕ್ರೀಟಿಕರಣ ಕಾಮಗಾರಿ ಮಾಡಲಾಗುವುದು. ಕಾಮಗಾರಿಗೆ ಸುಮಾರು 25 ಕೋಟಿ ರೂ. ವೆಚ್ಚ ಆಗಲಿದ್ದು, ಅದನ್ನು ಸರಕಾರದ ವಿವಿಧ ಮೂಲಗಳಿಂದ ಬಳಸಲು ಚಿಂತಿಸಲಾಗಿದೆ. ನಾಗುರಿ ಬಳಿಯಲ್ಲಿರುವ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಯನ್ನು ಅಗಲೀಕರಣಗೊಳಿಸಲಾಗುವುದು. ಅಲ್ಲದೇ ಪಡೀಲ್ ರೈಲ್ವೆ ನಿಲ್ದಾಣಕ್ಕೆ ಹೋಗುವ ಮುಖ್ಯ ರಸ್ತೆಯನ್ನು ಶೀಘ್ರವೇ ಅಭಿವೃದ್ಧಿಗೊಳಿಸಲಾಗುವುದು. ಕಂಕನಾಡಿಯ ಕುದ್ಕೋರಿಗುಡ್ಡೆ ಹಾಗೂ ಮುಗಿಲಗುಡ್ಡೆಯಲ್ಲಿ ಒಳಚರಂಡಿ ಸಮಸ್ಯೆ ಇದ್ದು, ಅದನ್ನು ಮುಂದಿನ ಅಮೃತ್ ಯೋಜನೆಯಡಿಯಲ್ಲಿ ಆಯ್ದುಕೊಳ್ಳಲಾಗುವುದು. ಗೋರಿಗುಡ್ಡೆ, ವೆಲೆನ್ಸಿಯಾ ಬಳಿ ನೀರಿನ ಸಮಸ್ಯೆ ಇದ್ದು ಎ.ಡಿ.ಬಿ. 2ನೆ ಹಂತದ ಯೋಜನೆಯಡಿಯಲ್ಲಿ ಸರಿಪಡಿಸಲಾಗುವುದು ಎಂದರು.
ಸಭೆಯಲ್ಲಿ ರಾಷ್ಟ್ರೀಯ ಕುಟುಂಬ ಸಹಾಯಧನ ಯೋಜನೆಯಡಿಯಲ್ಲಿ 23 ಮಂದಿಗೆ 3,90,000 ರೂ. ವಿತರಿಸಲಾಯಿತು. ಅಲ್ಲದೇ ಪ್ರಾಕೃತಿಕ ವಿಕೋಪದಡಿಯಲ್ಲಿ ನಾಲ್ವರಿಗೆ 1,10,700 ರೂ.ನ್ನು ವಿತರಿಸಲಾಯಿತು.
ಸಭೆಯಲ್ಲಿ ಮಂಗಳೂರು ತಾಲೂಕು ತಹಶೀಲ್ದಾರ್ ಶಿವರುದ್ರಯ್ಯ, ಮಹಾನಗರ ಪಾಲಿಕೆಯ ಜಂಟಿ ಆಯುಕ್ತ ಗೋಕುಲ್‌ದಾಸ್ ನಾಯಕ್, ಕಾರ್ಪೊರೇಟರ್ ಆಶಾ ಡಿಸಿಲ್ವ, ಪ್ರವೀಣ್ ಆಳ್ವ, ಪ್ರಕಾಶ್ ಅಳಪೆ, ಕೇಶವ ಮರೋಳಿ, ಲತೀಫ್ ಕಂದಕ್, ಸಬಿತಾ ಮಿಸ್ಕಿತ್, ಪೊಲೀಸ್ ಅಧಿಕಾರಿ ಸುರೇಶ್, ಪಾಲಿಕೆಯ ಅಧಿಕಾರಿಗಳಾದ ನರೇಶ್ ಶೆಣೈ, ಡಾ.ಮಂಜಯ್ಯ ಶೆಟ್ಟಿ, ಮಾಲಿನಿ ರಾಡ್ರಿಗಸ್, ಶಿವರಾಜ್, ಯಶವಂತ ಕಾಮತ್, ರಘುಪಾಲ, ಕಾಂಗ್ರೆಸ್ ಪ್ರಮುಖರಾದ ಬಾಲಕೃಷ್ಣ ಶೆಟ್ಟಿ, ಹೇಮಂತ್, ನಮಿತಾ ರಾಜ್ ಮೊದಲಾದವರು ಉಪಸ್ಥಿತರಿದ್ದರು. ರೆವೆನ್ಯೂ ಇನ್ಸ್‌ಪೆಕ್ಟರ್ ಜೋಸೆಫ್ ಕಾರ್ಯಕ್ರಮ ನಿರೂಪಿಸಿದರು.







