ಪ್ರತಿಭಾ ಕಾರಂಜಿ, ಕಲೋತ್ಸವದಲ್ಲಿ ಮುಗಿಯದ ಗೊಂದಲ: ಸ್ಪರ್ಧೆಯಿಂದ ಹೊರಗುಳಿದ ಖಾಸಗಿ ಶಾಲಾ ವಿದ್ಯಾರ್ಥಿಗಳು
ಸುಳ್ಯ, ಆ.19: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆ ಗಾಂಧಿನಗರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.
8ರಿಂದ 12ನೆ ತರಗತಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ನಡೆದವು. ಭರತನಾಟ್ಯ, ಛದ್ಮವೇಷ, ಆಶುಭಾಷಣ, ಮಿಮಿಕ್ರಿ, ಚರ್ಚಾ ಸ್ಪರ್ಧೆ, ರಂಗೋಲಿ, ಗಝಲ್, ಭಾವಗೀತೆ, ಜಾನಪದ ಗೀತೆ, ಧಾರ್ಮಿಕ ಪಠಣ, ಕಂಠಪಾಠ ಸ್ಪರ್ಧೆಗಳು ನಡೆದವು.
ಪ್ರತಿಭಾ ಕಾರಂಜಿ ನಿಯಮಗಳಲ್ಲಿ ಶಿಕ್ಷಣ ಇಲಾಖೆ ಈ ಬಾರಿ ಬದಲಾವಣೆ ತಂದಿದ್ದು, ಇದರಿಂದಾಗಿ ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಈ ಬಾರಿ ಪದವಿ ಪೂರ್ವ ವಿಭಾಗವನ್ನು ಸೇರಿಸಿಕೊಂಡು ಕಲೋತ್ಸವದ ಹೆಸರಿನಲ್ಲಿ ಸ್ಪರ್ಧೆಗಳನ್ನು ಶಿಕ್ಷಣ ಇಲಾಖೆ ವ್ಯವಸ್ಥೆ ಮಾಡಿದೆ. ಆಗಸ್ಟ್ 15ರ ಮುಂಚಿತವಾಗಿ ತಾಲೂಕು ಮಟ್ಟದ ಸ್ಪರ್ಧೆಗಳು, ಆಗಸ್ಟ್ 30ರ ಒಳಗೆ ಜಿಲ್ಲಾ ಮಟ್ಟದ ಸ್ಪರ್ಧೆಗಳು ಮತ್ತು ಸೆಪ್ಟಂಬರ್‌ನಲ್ಲಿ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಮುಗಿಸಬೇಕು ಎಂದು ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಪ್ರತಿ ವರ್ಷ ಕ್ಲಸ್ಟರ್ ಮಟ್ಟದಲ್ಲಿ ಸ್ಪರ್ಧೆ ನಡೆಸಿ, ಅದರಲ್ಲಿ ವಿಜೇತರಾದವರಿಗೆ ತಾಲೂಕು ಮಟ್ಟದಲ್ಲಿ ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಕ್ಲಸ್ಟರ್ ಮಟ್ಟದ ಸ್ಪರ್ಧೆ ನಡೆಸಲು ಇಲಾಖೆ ಯಾವುದೇ ಪ್ರಸ್ತಾವ ಮಾಡಿಲ್ಲ. ಬದಲಿಗೆ ನೇರವಾಗಿ ತಾಲೂಕು ಮಟ್ಟದ ಸ್ಪರ್ಧೆ ಏರ್ಪಡಿಸಲು ಸೂಚನೆ ನೀಡಿದೆ. ಮತ್ತು ಅದಕ್ಕೆ ಮಾತ್ರ ಅನುದಾನ ನೀಡಿದೆ. ಆದರೆ ತಾಲೂಕಿನ ಎಲ್ಲಾ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಗೆ ಆಗಮಿಸಿದರೆ ಸ್ಪರ್ಧೆ ಆಯೋಜಿಸಲು ಕಷ್ಟ ಸಾಧ್ಯ ಎಂದು ಅನುದಾನ ಇಲ್ಲದಿದ್ದರೂ ಅಧಿಕಾರಿಗಳು ಹಿಂದಿನಂತೆ ಕ್ಲಸ್ಟರ್ ಮಟ್ಟದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದಾರೆ.
ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಅಡಿ ಈ ಬಾರಿಯಿಂದ 11 ಹಾಗೂ 12ನೆ ತರಗತಿಯ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಂಗೀತ, ರಂಗಕಲೆ, ನೃತ್ಯ, ದೃಶ್ಯಕಲೆಗಳಲ್ಲಿ ಕಲಾ ಉತ್ಸವವನ್ನು ನಡೆಸುತ್ತಿದೆ. ಇದುವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ತನ್ನ ವ್ಯಾಪ್ತಿಯಲ್ಲಿ ಪ್ರತಿಭಾ ಕಾರಂಜಿಯನ್ನು ನಡೆಸುತ್ತಿದ್ದರೆ, ಈ ಬಾರಿ 11 ಹಾಗೂ 12ನೆ ತರಗತಿಯನ್ನು ಸೇರ್ಪಡೆ ಮಾಡಿದ್ದರಿಂದ ಸ್ಪರ್ಧೆ ನಡೆಸುವ ಕುರಿತು ಪದವಿ ಪರ್ವ ಶಿಕ್ಷಣ ಇಲಾಖೆಯೂ ಕಾಲೇಜುಗಳಿಗೆ ಸೂಚನೆಯನ್ನು ಕಳುಹಿಸಬೇಕಿತ್ತು. ಆದರೆ ಕ್ಲಸ್ಟರ್ ಮಟ್ಟದಲ್ಲಿ ಸ್ಪರ್ಧೆ ನಡೆಸುವ ಅವಕಾಶ ಇಲ್ಲದೆ ಇರುವುದಿಂದ ಪಿಯು ಇಲಾಖೆಯ ಸಹಾಯಕ ನಿರ್ದೇಶಕರು ಈ ಕುರಿತು ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಹಾಗಾಗಿ ಪದವಿ ಪೂರ್ವ ಶಾಲೆಗಳಿಗೆ ಈ ಕುರಿತು ಮಾಹಿತಿ ಕೊರತೆ ಎದುರಾಗಿತ್ತು.







