ಶಿಕ್ಷಕರಿಲ್ಲದೇ ಶಾಲೆ ನಡೆಯುತ್ತಿದೆ!
ಮಾನ್ಯರೆ,
ಸರಕಾರವು ಪ್ರತಿಯೊಬ್ಬ ಮಗುವೂ ಪ್ರಾಥಮಿಕ ಶಿಕ್ಷಣ ಪಡೆಯಬೇಕೆಂಬ ಕಾನೂನನ್ನು ಜಾರಿಗೆ ತಂದಿದ್ದು, ಮಕ್ಕಳನ್ನು ಶಾಲೆಗೆ ಕರೆತರಲು ಹಲವಾರು ಯೋಜನೆಗಳನ್ನು ಮತ್ತು ಜಾಹೀರಾತುಗಳ ಮೂಲಕ ಶಾಲೆಗೆ ಬರುವಂತೆ ಆಕರ್ಷಿಸುತ್ತಿದೆ. ಆದರೆ ಕುಮಟಾ (ಉತ್ತರಕನ್ನಡ) ತಾಲೂಕು ಯಾಣದ ಅತ್ತಿಬೆಟ್ಟು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಬ್ಬರೂ ಶಿಕ್ಷಕರಿಲ್ಲದೆ ಇರುವುದರಿಂದ ಆ ಶಾಲೆಯಲ್ಲಿರುವ 13 ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಶಾಲೆಯಲ್ಲಿ ಮಕ್ಕಳಿದ್ದರೂ ಶಿಕ್ಷಕರಿಲ್ಲ. ಇಲ್ಲಿ ಒಂದನೆ ತರಗತಿಯಿಂದ ಐದನೆ ತರಗತಿವರೆಗೆ ಕಲಿಸಲಾಗುತ್ತಿದೆ. ಪ್ರತಿದಿನ ಮಕ್ಕಳು ಶಾಲೆಗೆ ವಿದ್ಯೆ ಕಲಿಯುವ ಉತ್ಸಾಹದಿಂದ ಬಂದರೂ ಸರಿಯಾದ ಶಿಕ್ಷಣವೇ ದೊರಕುತ್ತಿಲ್ಲ. ಇಲ್ಲಿಗೆ ಬರುವ ಪ್ರತಿಯೊಬ್ಬ ಶಿಕ್ಷಕರೂ ಡೆಪ್ಯುಟೇಶನ್ ಮೂಲಕ ಬೇರೆ ಶಾಲೆಗೆ ತೆರಳುತ್ತಿದ್ದಾರೆ. ಈ ಮಕ್ಕಳ ಜೀವನದ ಅರಿವಿಲ್ಲದೆ ಶಿಕ್ಷಕರು ತಮ್ಮ ಇಷ್ಟ ಪ್ರಕಾರ ವರ್ಗಾವಣೆ ತೆಗೆದುಕೊಳ್ಳುತ್ತಿದ್ದರೆ ಅಲ್ಲಿನ ಮಕ್ಕಳ ಗತಿ ಏನು? ಅವರ ಭವಿಷ್ಯದ ಬಗ್ಗೆ ಚಿಂತಿಸುವವರಾರು?! ಶಿಕ್ಷಕರಿಗೆ ಈ ರೀತಿ ವರ್ಗಾವಣೆ ಅವಶ್ಯವೇ? ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತನಿಖೆ ನಡೆಸಬೇಕು. ಈಗಾಗಲೇ ಎಲ್ಲಾ ಕಡೆ ತರಗತಿ ಆರಂಭಗೊಂಡಿದ್ದು ಆದಷ್ಟು ಬೇಗ ಕ್ರಮ ಕೈಗೊಂಡು ಎಚ್ಚೆತ್ತುಕೊಳ್ಳಬೇಕು.





