ಬಿಲ್ಲವರು ಬಲ್ಲವರಾಗಬೇಕಾದ ಸಮಯ

ಕರಾವಳಿಯ ಬಿಲ್ಲವರ ಸಾಂಸ್ಕೃತಿಕ ಹಿರಿಮೆ ಬಹುದೊಡ್ಡದು. ತುಳುವ ಸಂಸ್ಕೃತಿಯ ಜೊತೆಗೆ ಅವಿನಾಭಾವವಾಗಿ ಬಿಲ್ಲವ ಸಮುದಾಯ ಬೆರೆತಿದೆ. ದಕ್ಷಿಣ ಕನ್ನಡವನ್ನು ಕೋಟಿ-ಚೆನ್ನಯರ ನಾಡು ಎಂದೇ ಇಲ್ಲಿನ ಪರಂಪರೆ ಉಲ್ಲೇಖಿಸುತ್ತದೆ. ವೀರರೂ, ಉದಾತ್ತರೂ, ತ್ಯಾಗಿಗಳೂ ಎಂಬ ಇತಿಹಾಸ ಬಿಲ್ಲವರ ಬೆನ್ನಿಗಿದೆ. ಯಾವಾಗ ತುಳುನಾಡಿಗೆ ವೈದಿಕರು ವಲಸೆ ಬಂದರೋ ಅಲ್ಲಿಂದ ಬಿಲ್ಲವರ ಸಾಮಾಜಿಕ ಸ್ಥಿತಿ ಮತ್ತು ಅದರ ಜೊತೆಗೇ ಆರ್ಥಿಕ ಸ್ಥಿತಿ ಇಳಿಮುಖವಾಯಿತು. ಸೇಂದಿ ಇಳಿಸುವ ಕೆಲಸವನ್ನಷ್ಟೇ ಬಿಲ್ಲವರ ತಲೆಗೆ ಕಟ್ಟಿ, ಅವರನ್ನು ಮೇಲ್ವರ್ಗ ತುಳಿಯಲಾರಂಭಿಸಿತು. ಕೃಷಿಕರಾಗಿದ್ದರೂ ಭೂವಂಚಿತರಾದರು. ಬಹುಶಃ ನಾರಾಯಣ ಗುರುಗಳು ಮಂಗಳೂರಿಗೆ ಕಾಲಿಟ್ಟು ಬಿಲ್ಲವರೂ ಸೇರಿದಂತೆ ತುಳಿತಕ್ಕೊಳಗಾದ ಜನರಿಗಾಗಿ ಹೊಸತೊಂದು ದೇವಸ್ಥಾನಕ್ಕೆ ಅಡಿಗಲ್ಲು ಹಾಕುವವರೆಗೂ ಇವರು ಸಾಮಾಜಿಕವಾಗಿ ಕೀಳರಿಮೆಯಿಂದ ಬದುಕುವ ಸನ್ನಿವೇಶ ನಿರ್ಮಾಣವಾಗಿತ್ತು. 1912ರಲ್ಲಿ ನಾರಾಯಣ ಗುರು ಅವರು ಮಂಗಳೂರಿಗೆ ಕಾಲಿಡುವ ಮೂಲಕ ಬಿಲ್ಲವರ ಬದುಕಿನಲ್ಲಿ ಹೊಸ ಶಕೆ ಆರಂಭವಾಯಿತು. ನಾರಾಯಣ ಗುರುಗಳು ಮಂಗಳೂರಿಗೆ ಕಾಲಿಡುವುದಕ್ಕೂ ಒಂದು ಸಾಮಾಜಿಕ ಕಾರಣವಿದೆ.
ಬಿಲ್ಲವ ಸಮುದಾಯಕ್ಕೆ ಸೇರಿದ ಸಾಹುಕಾರ ಕೊರಗಪ್ಪ ಅವರೇ ನಾರಾಯಣ ಗುರುಗಳು ಮಂಗಳೂರಿಗೆ ಆಗಮಿಸುವುದಕ್ಕೆ ಮುಖ್ಯ ಕಾರಣವಾಗಿದ್ದವರು. ಅಬ್ದುಂಞ ರಝಾಕಾರ್ ಮತ್ತು ಸಾಹುಕಾರ್ ಕೊರಗಪ್ಪ ವ್ಯಾಪಾರದಲ್ಲಿ ಪಾಲುದಾರರಾಗಿದ್ದವರು. ಕೊರಗಪ್ಪರು ಸಾಹುಕಾರರಾಗಿದ್ದರೂ ಜಾತಿಯಲ್ಲಿ ಬಿಲ್ಲವರಾಗಿರುವುದರಿಂದ ಸಮಾಜದಲ್ಲಿ ಮೇಲ್ವರ್ಗದಿಂದ ಆಗಾಗ ಅವಮಾನ ಎದುರಿಸಬೇಕಾಗಿತ್ತು. ಒಮ್ಮೆ ಉತ್ತರಕನ್ನಡದ ಗೋಕರ್ಣದ ಪ್ರಸಿದ್ಧ ದೇವಸ್ಥಾನಕ್ಕೆ ಸಾಹುಕಾರ್ ಕೊರಗಪ್ಪರು ತೆರಳಿದ್ದರು. ಅಲ್ಲಿ ಇವರ ಘನತೆ, ಗಾಂಭೀರ್ಯ ನೋಡಿ ಮೇಲ್ಜಾತಿಯವರೇ ಇರಬೇಕು ಎಂದು ಅರ್ಚಕರು ತಪ್ಪು ತಿಳಿದು ಇವರನ್ನು ದೇವಸ್ಥಾನದ ಒಳ ಬಿಟ್ಟರು. ಪೂಜೆ ಸಲ್ಲಿಸುವ ಹಂತದಲ್ಲಿ ಕೊರಗಪ್ಪ ಕೆಳಜಾತಿಯ ಅದರಲ್ಲೂ ಸೇಂದಿ ಇಳಿಸುವ ಬಿಲ್ಲವ ಸಮುದಾಯಕ್ಕೆ ಸೇರಿದವರು ಎನ್ನುವುದು ಗೊತ್ತಾಯಿತು. ಇದು ಅಲ್ಲಿನ ಅರ್ಚಕರು, ಆಡಳಿತ ಮಂಡಳಿಯ ಮೇಲ್ವರ್ಗದ ಜನರನ್ನು ಕೆರಳಿಸಿತು. ತಕ್ಷಣ ಅವರನ್ನು ದೇವಸ್ಥಾನದಿಂದ ಹೊರ ಹಾಕಿದ್ದಲ್ಲದೆ, ಅವರಿಂದ ತಪ್ಪು ಕಾಣಿಕೆಯನ್ನೂ ಪಡೆದರು. ಇದು ಕೊರಗಪ್ಪ ಅವರಿಗೆ ಭಾರೀ ಅವಮಾನವನ್ನುಂಟು ಮಾಡಿತ್ತು. ಈ ಸಂದರ್ಭದಲ್ಲೇ ಅವರಿಗೆ ನಾರಾಯಣ ಗುರುಗಳ ಕುರಿತಂತೆ ವಿಷಯ ಸಿಕ್ಕಿತು. ಬಳಿಕ ಅವರು ನಾರಾಯಣ ಗುರುಗಳ ಬಳಿಗೆ ತೆರಳಿ ಮಂಗಳೂರಿಗೆ ಬರಬೇಕು ಎಂದು ಕೇಳಿಕೊಂಡರಂತೆ.
ಆಗ ನಾರಾಯಣ ಗುರುಗಳು ಅದಕ್ಕೆ ಮೂರು ಅಪೇಕ್ಷೆಯನ್ನು ಮುಂದಿಟ್ಟರಂತೆ.
1.ಬಿಲ್ಲವರು ಸೇಂದಿ ಇಳಿಸುವ ಪರಂಪರಾಗತ ವೃತ್ತಿಯನ್ನು ಬಿಟ್ಟು ಸಮಾಜದ ಇತರ ಕಸುಬುಗಳ ಕಡೆಗೆ ವಾಲಬೇಕು.
2.ಮಂಗಳೂರಿನಲ್ಲಿ ಎಲ್ಲ ಕೆಳಜಾತಿಯ ಜನರೂ ಕಲಿಯಲು ಅನುಕೂಲವಾಗುವಂತೆ ಒಂದು ಶಾಲೆಯನ್ನು ತೆರೆಯಬೇಕು.
3.ಮೇಲು-ಕೀಳುಗಳನ್ನು ಅಳಿಸಿ ಎಲ್ಲರೂ ಒಂದೆಡೆ ಆರಾಧನೆಗೆ ಸೇರುವಂತೆ ಒಂದು ದೇವಸ್ಥಾನವನ್ನು ನಿರ್ಮಾಣ ಮಾಡಬೇಕು.
ಈ ಮೂರೂ ಬೇಡಿಕೆಗಳನ್ನು ಸಾಹುಕಾರ ಕೊರಗಪ್ಪ ಅವರು ಒಪ್ಪಿದ ಬಳಿಕವೇ ನಾರಾಯಣ ಗುರುಗಳು ಮಂಗಳೂರಿಗೆ ಆಗಮಿಸಿದ್ದರು. 1912ರಲ್ಲಿ ಬಿಲ್ಲವರು ಆತ್ಮಾಭಿಮಾನವನ್ನು ತನ್ನದಾಗಿಸಿಕೊಂಡ ಕಾಲ. ಈ ವರ್ಷದಲ್ಲೇ ನಾರಾಯಣ ಗುರುಗಳು ಮಂಗಳೂರಿನಲ್ಲಿ ಬಿಲ್ಲವರ ದೇವಸ್ಥಾನಕ್ಕೆ ಅಡಿಗಲ್ಲು ಹಾಕಿದರು. ಗೋಕರ್ಣದಲ್ಲಿ ತನಗಾದ ಅವಮಾನವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸಾಹುಕಾರ ಕೊರಗಪ್ಪ ಅವರು ಮಂಗಳೂರಿನಲ್ಲಿ ಅಂದು ಸ್ಥಾಪನೆಗೊಂಡ ದೇವಸ್ಥಾನಕ್ಕೆ ಗೋರ್ಕಾನಾಥೇಶ್ವರ ದೇವಸ್ಥಾನ ಎಂದು ನಾಮಕರಣ ಮಾಡಿದರು. ಸಾಧಾರಣವಾಗಿ ದೇವಸ್ಥಾನದಲ್ಲಿ ಅರ್ಚಕರಿಗೆ ಜನಿವಾರ ಇರಬೇಕಾಗುತ್ತದೆ. ಆದರೆ ನಾರಾಯಣ ಗುರುಗಳು ಜನಿವಾರವಿಲ್ಲದ ಬಿಲ್ಲವ ಅರ್ಚಕರ ಪರಂಪರೆಯನ್ನು ಆರಂಭಿಸಿದರು. ಅವರಿಗೆ ಶಾಂತಿ ಎಂದು ಕರೆಯಲಾಯಿತು. ಇದಾದ ಬಳಿಕ ಕರಾವಳಿಯ ಬಿಲ್ಲವರ ಬದುಕಿನಲ್ಲಿ ಮಹತ್ವದ ಬದಲಾವಣೆಯಾದುದು ಇಂದಿರಾಗಾಂಧಿ ಮತ್ತು ದೇವರಾಜ ಅರಸರ ಕಾಲದಲ್ಲಿ ಜಾರಿಗೊಂಡ ‘ಭೂಸುಧಾರಣೆ’ ಕಾಯ್ದೆಯಿಂದ. ಬಂಟ ಸಮುದಾಯದ ಗೇಣಿದಾರರಾಗಿ ಬದುಕು ದೂಡುತ್ತಿದ್ದ ಸಾವಿರಾರು ಬಿಲ್ಲವರು ಈ ಕಾಯ್ದೆಯಿಂದ ಭೂಮಿಯನ್ನು ಪಡೆಯುವಂತಾಯಿತು. ಇವರ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆಯಾಗಲು ಭೂಸುಧಾರಣೆ ಕಾಯ್ದೆಯ ಕೊಡುಗೆ ಬಹುದೊಡ್ಡದು. ಹಾಗೆಯೇ, ನೂರಾರು ಸಂಖ್ಯೆಯ ಬಿಲ್ಲವರು ಮುಂಬೈಗೆ ವಲಸೆ ಹೋಗಿ ಅಲ್ಲಿ ಹೊಟೇಲುಗಳಲ್ಲಿ ದುಡಿದು, ಉದ್ಯಮಿಗಳಾಗಿ, ಬ್ಯಾಂಕು, ಶಾಲೆ ಎಂದು ಬದುಕನ್ನು ವಿಸ್ತರಿಸಿಕೊಂಡರು. ಬಿಲ್ಲವ ಸಂಘಟನೆಗಳನ್ನು ಕಟ್ಟಿಕೊಂಡು ಮೇಲ್ಜಾತಿಯ ಜನರೆದುರು ಆತ್ಮಾಭಿಮಾನದಿಂದ ಬದುಕ ತೊಡಗಿದರು. ಯಾವಾಗ ಬಿಲ್ಲವರು ಸಂಘಟಿತ ಶಕ್ತಿಯಾದರೋ, ಅಲ್ಲಿಂದ ವೈದಿಕ ಶಕ್ತಿಗಳು ಅವರಿಗೆ ತಲೆಬಾಗಿದವು ಮಾತ್ರವಲ್ಲ, ಅವರನ್ನು ದುರ್ಬಲಗೊಳಿಸಲು ಬೇರೆ ಹಾದಿಯನ್ನು ಹಿಡಿದವು. ಪರಿಣಾಮವಾಗಿ ಜಾತಿಯ ವಿರುದ್ಧ ಬಂಡಾಯವಾಗಿ ಹುಟ್ಟಿದ್ದ ಕುದ್ರೋಳಿ ದೇವಸ್ಥಾನವನ್ನೇ ವೈದಿಕ ಶಕ್ತಿಗಳು ಹೈಜಾಕ್ ಮಾಡಿದವು. ನಾರಾಯಣ ಗುರುಗಳ ಸಿದ್ಧಾಂತ ಆ ದೇವಸ್ಥಾನದಲ್ಲೇ ಹಳ್ಳ ಹಿಡಿಯಿತು.
ಅಷ್ಟೇ ಅಲ್ಲ, ತಮ್ಮ ಪರಂಪರೆಯ ಅರಿವಿರದ ಹೊಸ ತಲೆಮಾರಿನ ಯುವಕರನ್ನು ‘ಹಿಂದುತ್ವ’ದ ಹೆಸರಿನಲ್ಲಿ ಬಲಿ ಹಾಕಿದವು. ಬಿಲ್ಲವ ಸಂಘಟನೆಗಳೇ ತಮಗೆ ಆತ್ಮಾಭಿಮಾನದ ಬದುಕನ್ನು ಕೊಟ್ಟವು ಎನ್ನುವುದನ್ನು ಮರೆತ ಈ ಹೊಸ ತಲೆಮಾರು, ಪ್ರಭಾಕರಭಟ್ಟರಂತಹ ಸಮಯ ಸಾಧಕ ವೈದಿಕ ಶಾಹಿಯ ಹಿಂದೆ ಹೋಯಿತು. ಆರೆಸ್ಸೆಸ್ ಶಾಖೆಯಲ್ಲಿ ಕಲಿಸಿಕೊಟ್ಟ ‘ಹಿಂದುತ್ವ’ದ ಬಲೆಗೆ ಬಿದ್ದರು. ತಮಗೆ ಆತ್ಮಾಭಿಮಾನವನ್ನು ಕೊಟ್ಟಿರುವುದು ಅಂಬೇಡ್ಕರ್ ಸಂವಿಧಾನ ಮತ್ತು ನಾರಾಯಣ ಗುರು ಅವರ ಕ್ರಾಂತಿಕಾರಿ ಸಂದೇಶ ಎನ್ನುವುದರ ಅರಿವಿಲ್ಲದೆ, ಮನುವಾದವನ್ನು ನಂಬಿ ಬದುಕನ್ನು ಕಳೆದುಕೊಳ್ಳತೊಡಗಿದರು. ಇಂದು ಸಂಘಪರಿವಾರದ ಅಡಿಗಲ್ಲು ಈ ಕೆಳಜಾತಿಯಿಂದ ಬಂದ ಹುಡುಗರೇ ಆಗಿದ್ದಾರೆ. ನಾರಾಯಣಗುರುಗಳ ಆದರ್ಶವನ್ನು ಪಾಲಿಸಿ ಸಮಾಜದಲ್ಲಿ ಗಣ್ಯ ಸ್ಥಾನಗಳನ್ನು ತುಂಬಬೇಕಾಗಿದ್ದ ಬಿಲ್ಲವ ತರುಣರು, ಗೋಳ್ವಾಲ್ಕರ್, ಪ್ರಭಾಕರಭಟ್ಟರ ಆದರ್ಶ ಹಿಡಿದು ಕೋಮುಗಲಭೆ, ನಕಲಿ ಗೋರಕ್ಷಣೆ ಇನ್ನಿತರ ಕ್ರಿಮಿನಲ್ ಚಟುವಟಿಕೆಗಳಲ್ಲಿ ಗುರುತಿಸ ತೊಡಗಿದರು. ಇಂದು ಮಂಗಳೂರಿನ ಕೋಮುಗಲಭೆಗಳ ಇತಿಹಾಸವನ್ನು ಬಿಡಿಸಿದರೆ, ಗಲಭೆ ನಡೆಸಿದ ಆರೋಪದಲ್ಲಿ ಜೈಲಿಗೆ ಹೋದ ಶೇ.80ರಷ್ಟು ತರುಣರು ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮುಖ್ಯವಾಗಿ ಗಲಭೆಗೆ ಪ್ರೇರೇಪಿಸಿದ, ಹಿಂದುತ್ವ, ಗೋರಕ್ಷಣೆಯ ಹೆಸರಿನಲ್ಲಿ ಇವರ ತಲೆಕೆಡಿಸಿದ ಜಗದೀಶ್ ಕಾರಂತ್, ಪ್ರಭಾಕರ ಭಟ್ಟರ ಸಮುದಾಯಕ್ಕೆ ಸೇರಿದ ಒಬ್ಬನೇ ಒಬ್ಬ ವ್ಯಕ್ತಿ ಕರಾವಳಿಯಲ್ಲಿ ಜೈಲು ಪಾಲಾಗಿಲ್ಲ. ನಾರಾಯಣಗುರು ತಮ್ಮ ಸಮುದಾಯವನ್ನು ಮೇಲೆತ್ತಲು ಮಾಡಿದ ಎಲ್ಲ ಶ್ರಮಗಳನ್ನು ಪ್ರಭಾಕರ ಭಟ್ಟ, ಜಗದೀಶ ಕಾರಂತರಂತಹ ಮೇಲ್ಜಾತಿಯ ನಾಯಕರು ಉಪಾಯದಿಂದ ಮಣ್ಣು ಪಾಲು ಮಾಡಿದ್ದಾರೆ. ಗುರುವಾರ ಉಡುಪಿಯಲ್ಲಿ ನಡೆದ ಬಿಲ್ಲವ ತರುಣನೊಬ್ಬನ ಬರ್ಬರ ಹತ್ಯೆ ಇವೆಲ್ಲದರ ಪರಿಣಾಮವೇ ಆಗಿದೆ. ವಿಪರ್ಯಾಸವೆಂದರೆ ಕೊಲೆಗೀಡಾದವನೂ ಕೆಳಜಾತಿಗೆ ಸೇರಿದಾತ. ಕೊಂದವರೂ ಕೆಳಜಾತಿಗೆ ಸೇರಿದವರು. ಲಾಭ ಪಡೆಯುತ್ತಿರುವವರು ಮಾತ್ರ ಪ್ರಭಾಕರ ಭಟ್ಟ, ಜಗದೀಶ ಕಾರಂತರೆನ್ನುವ ಮನುವಾದಿ ವಕ್ತಾರರು.
ಈ ಕಾರಣದಿಂದಲೇ, ಬಿಲ್ಲವರ ಸಂಖ್ಯೆ ಅತಿ ದೊಡ್ಡದಾಗಿದ್ದರೂ, ಅದಕ್ಕೆ ಪೂರಕವಾದ ರಾಜಕೀಯ ಪ್ರಾತಿನಿಧ್ಯ ಬಿಲ್ಲವರಿಗೆ ಸಿಗುತ್ತಿಲ್ಲ. ಸುನೀಲ್ ಕುಮಾರ್, ರುಕ್ಮಯ ಪೂಜಾರಿಯಂತಹ ಬಿಲ್ಲವ ನಾಯಕರನ್ನು ಸಂಘಪರಿವಾರ ಬಳಸಿ ಎಸೆಯಿತು. ಒಂದು ಕಾಲದಲ್ಲಿ ಜನಾರ್ದನ ಪೂಜಾರಿಯಂತಹ ನಾಯಕರು ರಾಷ್ಟ್ರಮಟ್ಟದಲ್ಲಿ ಮಿಂಚಿದ್ದರು. ಇಂದು ಅಂತಹ ಒಬ್ಬನೇ ಒಬ್ಬ ನಾಯಕರು ಹುಟ್ಟದಂತೆ ಪ್ರಭಾಕರಭಟ್ಟ, ಜಗದೀಶ ಕಾರಂತರಂತಹ ನೋಡಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಿಲ್ಲವರ ನಡುವೆ ಮತ್ತೆ ನಾರಾಯಣ ಗುರುಗಳ ಆದರ್ಶಗಳನ್ನು ಬಿತ್ತಿ, ಅವರನ್ನು ಕ್ರಿಮಿನಲ್‌ಗಳಾಗದಂತೆ ತಡೆಯುವುದು, ಪ್ರಭಾಕರ ಭಟ್ಟ, ಜಗದೀಶ ಕಾರಂತರಂತಹ ವೈದಿಕ ಹಿತಾಸಕ್ತಿಗಳಿಗೆ ಬಲಿಯಾಗದಂತೆ ಉಳಿಸಿ ಬೆಳೆಸುವುದು ಬಿಲ್ಲವ ಸಂಘಟನೆಗಳ ಕರ್ತವ್ಯವಾಗಿದೆ. ಬಿಲ್ಲವರು ಬಲ್ಲವರಾಗುವ ಕಾಲ ಸನ್ನಿಹಿತವಾಗಿದೆ. ಸಂಘಪರಿವಾರದ ಸಂಚಿಗೆ ಬಲಿಯಾದ ಪ್ರವೀಣ್ ಪೂಜಾರಿ, ಹರೀಶ್ ಪೂಜಾರಿಯಂತಹ ತರುಣರಕ್ತವೇ ಬಿಲ್ಲವರಲ್ಲಿ ಆತ್ಮಾಭಿಮಾನವನ್ನು ಎಚ್ಚರಿಸಬೇಕಾಗಿದೆ. ವೈದಿಕ ಶಕ್ತಿಗಳಿಂದ ತಮ್ಮ ಯುವಕರನ್ನ್ನು ರಕ್ಷಿಸಿ, ಈ ದೇಶಕ್ಕೆ ಬೇಕಾದ ವೈದ್ಯರು, ಪೊಲೀಸ್ ಅಧಿಕಾರಿಗಳು, ಇಂಜಿನಿಯರ್‌ಗಳು, ಉದ್ಯಮಿಗಳಾಗಿ ಅವರನ್ನು ರೂಪಿಸಬೇಕಾಗಿದೆ.







