ಹೈನುಗಾರಿಕೆಯನ್ನೇ ನಂಬಿದ್ದ ಪ್ರವೀಣ್ ಪೂಜಾರಿ ಕುಟುಂಬ
ನಕಲಿ ಗೋರಕ್ಷಕರ ಮನೆಯಲ್ಲಿ ಗೋವುಗಳಿಲ್ಲ, ಇವರಿಗೆ ಅದರ ಪ್ರೀತಿ ಗೊತ್ತಿಲ್ಲ: ಸಂಬಂಧಿಯ ಆಕ್ರೋಶ

ಉಡುಪಿ, ಆ.19: ಗೋರಕ್ಷಕರಿಂದ ಕೊಲೆಯಾದ ಕೆಂಜೂರಿನ ಪ್ರವೀಣ್ ಪೂಜಾರಿ ಕುಟುಂಬ ಹಲವು ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಏಳೆಂಟು ಹಸುಗಳನ್ನು ಸಾಕುತ್ತಿರುವ ಈ ಕುಟುಂಬ ಇದರಿಂದ ಆದಾಯ ಗಳಿಸಿ ಜೀವನ ಸಾಗಿಸುತ್ತಿದೆ.
ಪ್ರವೀಣ್ ಪೂಜಾರಿಯದ್ದು ತೀರಾ ಬಡ ಕುಟುಂಬ. ಆರ್ಥಿಕ ಸಮಸ್ಯೆಯ ಕಾರಣದಿಂದ ಅರ್ಧದಲ್ಲೇ ತನ್ನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದ ಪ್ರವೀಣ್ ಜೀವನೋಪಾಯಕ್ಕಾಗಿ ಕೆಲಸಕ್ಕೆ ಸೇರಿದ್ದರು. ಇದರ ಜೊತೆಗೆ ಪ್ರವೀಣ್‌ರ ತಾಯಿ ಹಸುಗಳನ್ನು ಸಾಕಿ ಅದರಿಂದ ಗಳಿಸಿದ ಆದಾಯದಿಂದ ಮನೆ ನೋಡಿಕೊಳ್ಳುತ್ತಿದ್ದರು.
ಈಗಲೂ ಸುಮಾರು ಏಳೆಂಟು ದನ ಹಾಗೂ ಕರುಗಳನ್ನು ಹಲವು ವರ್ಷಗಳಿಂದ ಆರೈಕೆ ಮಾಡಿಕೊಂಡು ಬರುತ್ತಿದ್ದಾರೆ. ಇದರಿಂದ ಬರುವ ಹಾಲನ್ನು ಡೈರಿಗೆ ಮಾರಾಟ ಮಾಡಿ ಬರುವ ಹಣ ಇವರ ಕುಟುಂಬಕ್ಕೆ ಆದಾಯವಾಗಿ ಬಳಕೆಯಾಗುತ್ತಿದೆ. ಹಸುಗಳ ಬಗ್ಗೆ ತೀರಾ ಪ್ರೀತಿ ಹೊಂದಿದ್ದ ಪ್ರವೀಣ್ ಪೂಜಾರಿ ಗೋವುಗಳ ಹೆಸರಿನಲ್ಲಿ ಅವರು ಬಲಿಯಾಗಿರುವುದು ವಿಪರ್ಯಾಸ.
ಪ್ರವೀಣ್ ಪೂಜಾರಿಯ ತಾಯಿ ಬೇಬಿಯವರು ಹೆಚ್ಚಿನ ಸಮಯವನ್ನು ಮನೆಯ ಹಸುಗಳ ಆರೈಕೆಗಾಗಿಯೇ ಮೀಸಲಿರಿಸುತ್ತಾರೆ. ತನ್ನ ಮಗ ನಿನ್ನೆ ಗೋರಕ್ಷಕರ ದಾಳಿಗೆ ಬಲಿಯಾದರೂ ಇಂದು ಆ ತಾಯಿ ಮನೆಯ ಕೊಟ್ಟಿಗೆಯಲ್ಲಿದ್ದ ಹಸುಗಳಿಗೆ ಹುಲ್ಲು ಹಾಕಲು ಮರೆಯಲಿಲ್ಲ. ‘ಹಲವು ವರ್ಷಗಳಿಂದ ಈ ಕುಟುಂಬ ಹೈನುಗಾರಿಕೆಯಲ್ಲಿ ತೊಡಗಿಸಿ ಕೊಂಡಿದೆ. ದನ ಎಂದರೆ ಈ ಕುಟುಂಬದ ಎಲ್ಲರಿಗೂ ಪ್ರೀತಿ. ಪ್ರವೀಣ್ ಪೂಜಾರಿ ಕೂಡ ದನಗಳ ಆರೈಕೆ ಮಾಡುತ್ತಿದ್ದ. ಇದೀಗ ಅದೇ ಗೋವಿನ ಹೆಸರಿನಲ್ಲಿ ಅವರ ಜೀವವನ್ನು ಬಲಿ ತೆಗೆದುಕೊಳ್ಳಲಾಗಿದೆ’ ಎಂದು ಪ್ರವೀಣ್ ಪೂಜಾರಿಯ ಭಾವ ಪ್ರಸಾದ್ ಪೂಜಾರಿ ನೋವಿನಿಂದ ಹೇಳಿದರು.
‘ನಮ್ಮ ಮನೆಯ ಹುಡುಗನನ್ನು ಬಲಿ ತೆಗೆದುಕೊಂಡ ನಕಲಿ ಗೋರಕ್ಷಕರ ಮನೆಯಲ್ಲಿ ಗೋವುಗಳಿಲ್ಲ. ಇವರಿಗೆ ಅದರ ಪ್ರೀತಿ ಗೊತ್ತಿಲ್ಲ. ಪ್ರವೀಣ್ ಪೂಜಾರಿ ಮನೆಯವರು ಹಲವು ವರ್ಷಗಳಿಂದ ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದಾರೆ. ಹೀಗಿರುವಾಗ ಪ್ರವೀಣ್ ಪೂಜಾರಿ ಗೋಸಾಗಾಟದಲ್ಲಿ ತೊಡಗಿಸಿಕೊಂಡಿರಲು ಸಾಧ್ಯವೇ?’ ಎಂದು ಪ್ರವೀಣ್ ಪೂಜಾರಿ ಸಂಬಂಧಿ ಜಯಲಕ್ಷ್ಮೀ ಪ್ರಶ್ನಿಸಿದರು.
‘ಗೋರಕ್ಷಣೆ ಮಾಡುವವರು ರಾಡ್ ಹಿಡಿದುಕೊಂಡು ತಿರುಗಾಡುತ್ತಾರೆಯೇ, ಇವರು ಗೋರಕ್ಷಣೆ ಮಾಡುವುದು ಯಾರಿಗೋಸ್ಕರ, ಇವರಿಗೆ ಗೋವು ಮುಖ್ಯವಾಗಿದೆಯೇ ಹೊರತು ಮನುಷ್ಯರಲ್ಲ. ಮನುಷ್ಯರ ಜೀವಕ್ಕೆ ಇವರಲ್ಲಿ ಬೆಲೆಯೇ ಇಲ್ಲ, ಇವರ ಈ ಕೃತ್ಯದಿಂದ ಹೆತ್ತ ತಾಯಿಗೆ ಮಗ ಇಲ್ಲದಂತಾಗಿದೆ’ ಎಂದು ಅವರು ಆಕ್ರೋಶದಿಂದ ನುಡಿದರು.
ಜೀವನೋಪಾಯಕ್ಕಾಗಿ ದನದ ದಲ್ಲಾಳಿ ವೃತ್ತಿ
ಕೊಕ್ಕರ್ಣೆ, ಸಂತೆಕಟ್ಟೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಶೇ.90ರಷ್ಟು ಕೃಷಿಕರೇ ಇದ್ದಾರೆ. ಇವರಲ್ಲಿ ಹೆಚ್ಚಿನವರ ಮನೆಗಳಲ್ಲಿ ದನಗಳನ್ನು ಸಾಕಲಾಗುತ್ತದೆ. ಗಂಡು ಕರು, ವಯಸ್ಸಾದ ದನಗಳನ್ನು ಇವರು ಮನೆಯಲ್ಲಿ ಸಾಕಲಾಗದೆ ಬೇರೆಯವರಿಗೆ ಮಾರಾಟ ಮಾಡುತ್ತಾರೆ. ಇದನ್ನು ಖರೀದಿಸಿ ಇತರರಿಗೆ ಮಾರಾಟ ಮಾಡುವ ದಲ್ಲಾಳಿ ಕೆಲಸಗಳನ್ನು ಸ್ಥಳೀಯ ಹಿಂದೂಗಳೇ ಮಾಡುತ್ತಿದ್ದಾರೆ.
ಇದರಿಂದಲೇ ಾಕಷ್ಟು ಕುಟುಂಬಗಳು ಇಲ್ಲಿ ಜೀವನ ನಡೆಸುತ್ತಿವೆ. ಕೃಷಿಕರಿಂದ ಉಪಯೋಗಕ್ಕೆ ಬಾರದ ದನಗಳನ್ನು ಖರೀದಿಸಿ ಅದನ್ನು ಶಿವಮೊಗ್ಗ, ಭದ್ರಾವತಿ, ಮಂಗಳೂರು ಕಡೆಯವರಿಗೆ ಮಾರಾಟ ಮಾಡುತ್ತಾರೆ. ಇದರಿಂದ ಇವರಿಗೆ ಸಣ್ಣ ಮಟ್ಟದ ಆದಾಯ ಕೂಡ ಸಿಗುತ್ತದೆ. ಗೋರಕ್ಷಕರ ಭಯದಿಂದ ಹೆಚ್ಚಿನವರು ಈ ವೃತ್ತಿಯಿಂದ ದೂರ ಸರಿಯುತ್ತಿದ್ದಾರೆ. ಆದರೆ ಕೆಲವರು ಜೀವನೋಪಾಯಕ್ಕಾಗಿ ಈ ವೃತ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಬೆಳಗ್ಗೆ ಕೃಷಿಕರ ಮನೆಗಳಿಗೆ ತೆರಳಿ ದನಗಳನ್ನು ಖರೀದಿಸಿ ನಂತರ ಹೊರ ಜಿಲ್ಲೆಯವರಿಗೆ ಮಾರಾಟ ಮಾಡುತ್ತಾರೆ. ಇಂಜೆಕ್ಷನ್ ಬ್ರೀಡ್‌ನಿಂದ ಹುಟ್ಟುವ ಗಂಡುಕರುಗಳನ್ನು ಉಳುಮೆಗೆ ಬಳಸಲು ಆಗುವುದಿಲ್ಲ. ಅದನ್ನು ಸಾಕುವುದು ಹೊರೆಯಾಗಿರುವುದರಿಂದ ಅನಿವಾರ್ಯವಾಗಿ ಮಾರಾಟ ಮಾಡುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.







