ರಿಲೇಯಲ್ಲಿ ಚಿನ್ನ ಪಡೆದ ಉಸೇನ್ ಬೋಲ್ಟ್
ರಿಯೋದಲ್ಲಿ ಹ್ಯಾಟ್ರಿಕ್ ಸ್ವರ್ಣ *ಅಮೆರಿಕಕ್ಕೆ ತಪ್ಪಿದ ಕಂಚು

ರಿಯೋ ಡಿ ಜನೈರೊ, ಆ.20: ಶರವೇಗದ ಸರದಾರ ಉಸೇನ್ ಬೋಲ್ಟ್ ನೇತೃತ್ವದ ಜಮೈಕಾ ತಂಡ ರಿಯೋ ಒಲಿಂಪಿಕ್ಸ್‌ನ 4x100ರಿಲೇಯಲ್ಲಿ ಇಂದು ಚಿನ್ನ ಬಾಚಿಕೊಂಡಿದ್ದು, ಬೋಲ್ಟ್ ಈ ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಚಿನ್ನದೊಂದಿಗೆ ಒಲಿಂಪಿಕ್ಸ್‌ಗೆ ವಿದಾಯ ಹೇಳಿದ್ದಾರೆ.
ಬೀಜಿಂಗ್, ಲಂಡನ್ ಮತ್ತು ರಿಯೋ ಒಲಿಂಪಿಕ್ಸ್ ಕೂಟಗಳಲ್ಲಿ 4x100ಮೀಟರ್ ರಿಲೇಯಲ್ಲಿ 37.27 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಜಮೈಕಾ ತಂಡ ಚಿನ್ನ ಜಯಿಸಿದೆ. ಜಪಾನ್(37.60 ಸೆ.) ಬೆಳ್ಳಿ ಹಾಗೂ ಕೆನೆಡಾ (37.64 ಸೆ.) ಕಂಚು ಪಡೆಯಿತು.
ಅಮೆರಿಕ ಮೂರನೆ ಸ್ಥಾನ ಪಡೆಯುವ ಸಾಧ್ಯತೆ ಇದ್ದರೂ ತಂಡದ ಮೈಕ್ ರಾಡ್ರಿಗಸ್ ಅವರು ಜಸ್ಟಿನ್ ಗ್ಲಾಟಿನ್‌ಗೆ ರಿಲೇ ಬ್ಯಾಟನ್ ಹಸ್ತಾಂತರಿಸುವಾಗ ಮಾಡಿಕೊಂಡ ಎಡವಟ್ಟಿನಿಂದಾಗಿ ಅಮೆರಿಕ ತಂಡಕ್ಕೆ ಮೂರನೆ ಸ್ಥಾನ ಕೈ ತಪ್ಪಿ ಅನರ್ಹಗೊಂಡಿತ್ತು.
ಫೈನಲ್‌ನಲ್ಲಿ 8 ತಂಡಗಳು ಪದಕದ ಬೇಟೆ ನಡೆಸಿತ್ತು. ಅಮೆರಿಕದಂತೆ ಟ್ರನಿಡಾಡ್ ಆ್ಯಂಡ್ ಟೊಬಾಗೊ ತಂಡ ಅನರ್ಹಗೊಂಡಿತ್ತು. ಚೀನಾ, ಗ್ರೇಟ್ ಬ್ರಿಟನ್ ಮತ್ತು ಬ್ರೆಝಿಲ್ ಕ್ರಮವಾಗಿ 4, 5 ಮತ್ತು 6ನೆ ಸ್ಥಾಗಳಿಗೆ ತೃಪ್ತಿಪಟ್ಟುಕೊಂಡಿತು.
ಬೋಲ್ಟ್ ನೇತೃತ್ವದ ಜಮೈಕಾ ಮೂರನೆ ಬಾರಿ ರಿಲೇಯಲ್ಲಿ ಚಿನ್ನ ಬಾಚಿಕೊಳ್ಳುವಲ್ಲಿ ನಿಕೆಲ್ ಅಸ್ಮೆಡೆ, ಅಸಫಾ ಪೊವೆಲ್ ಮತ್ತು ಯೋಹಾನ್ ಬ್ಲಾಕ್ ನೆರವಾದರು.
ಬೋಲ್ಟ್ ರಿಯೋ ಒಲಿಂಪಿಕ್ಸ್‌ನಲ್ಲಿ 100 ಮೀಟರ್ ಮತ್ತು 200 ಮೀಟರ್ ಓಟದಲ್ಲಿ ಚಿನ್ನ ಪಡೆದುಕೊಂಡಿದ್ದರು.
ಬೋಲ್ಟ್ ಸತತ ಮೂರು ಒಲಿಂಪಿಕ್ಸ್‌ಗಳಲ್ಲಿ ಪಡೆದಿರುವ ಚಿನ್ನದ ಪದಕಗಳ ಸಂಖ್ಯೆಯನ್ನು 9ಕ್ಕೆ ಏರಿಸಿದ್ದಾರೆ.
ಐ ಆ್ಯಮ್ ದಿ ಗ್ರೇಟೆಸ್ಟ್
ಜಮೈಕಾದ ಗೋಲ್ಡನ್ ಕಿಂಗ್ 4x100 ರಿಲೇಯಲ್ಲಿ ಸ್ವರ್ಣ ಪದಕದ ಸಾಧನೆಯೊಂದಿಗೆ ಒಲಿಂಪಿಕ್ಸ್‌ಗೆ ವಿದಾಯ ಹೇಳಿದರು. ಎಂಟು ವರ್ಷಗಳ ಹಿಂದೆ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಆರಂಭಿಸಿದ ಪದಕ ಗಳಿಸುವ ಅಭಿಯಾನ ದಲ್ಲಿ ಮೂರು ಒಲಿಂಪಿಕ್ಸ್‌ಗಳಲ್ಲಿ ಚಿನ್ನವನ್ನು ಬಾಚಿಕೊಂಡಿದ್ದರು. ಒಲಿಂಪಿಕ್ಸ್‌ನಲ್ಲಿ ಅವರದ್ದು ಚಿನ್ನದ ಸಾಧನೆ. 3 ಒಲಿಂಪಿಕ್ಸ್‌ಗಳಲ್ಲಿ 100 ಮೀಟರ್, 200 ಮೀಟರ್ ಮತ್ತು 4x100 ರಿಲೇಯಲ್ಲಿ ಬೇರೆ ಯಾವುದೇ ದೇಶಕ್ಕೂ ಚಿನ್ನ ಬಿಟ್ಟುಕೊಟ್ಟಿಲ್ಲ ರಿಲೇಯಲ್ಲಿ ಫಿನಿಶ್ ಲೈನ್ ತಲುಪುತ್ತಿದ್ದಂತೆ ಅವರನ್ನು ಅಭಿನಂದಿಸಲು ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದರು. ಚಿನ್ನ ಜಯಿಸಿದಾಗ ಎಂದಿನಂತೆ ತನ್ನದೇ ಶೈಲಿಯಲ್ಲಿ ವಿಜಯದ ನಗೆ ಬೀರಿದರು. ಟ್ರಾಕ್‌ಗೆ ಮಂಡಿಯೂರಿ ಮುತ್ತಿಟ್ಟರು. ಕುಣಿದಾಡಿ ಅಭಿಮಾನಿಗಳನ್ನು ರಂಜಿಸಿದರು. ಜಮೈಕಾದ ಹಸಿರು ಮತ್ತು ಹಳದಿ ಬಣ್ಣದ ಧ್ವಜವನ್ನು ಹೊದ್ದುಕೊಂಡು ಕ್ರೀಡಾಂಗಣದಲ್ಲಿ ಗೆಲುವಿನ ಸಂಭ್ರಮಾಚರಿಸಿದ ಬೋಲ್ಟ್ ಶುಭ ವಿದಾಯ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ‘‘ನೀವು ಸರಿಯಾಗಿ ಹೇಳುತ್ತಿದ್ದೀರಿ ನಾನು ಯಾವಾಗಲೂ ಶ್ರೇಷ್ಠ’’( ಐ ಆ್ಯಮ್ ಗ್ರೇಟೆಸ್ಟ್). ನೀವು ಯಾವಾಗಲೂ ಇದನ್ನೇ ಬಯಸುವಿರಿ ಎಂದು ಹೇಳಿದರು. ಅಮೆರಿಕದ ಟ್ರಾಕ್ ಆ್ಯಂಡ್ ಅಥ್ಲೀಟ್ ಕಾರ್ಲ್ ಲೂವಿಸ್ ಐದು ಒಲಿಂಪಿಕ್ಸ್ ಕೂಟಗಳಲ್ಲಿ ಭಾಗವಹಿಸಿ 9 ಚಿನ್ನ ಪಡೆದಿದ್ದರು. ಇವರ ಸಾಧನೆಯನ್ನು ಬೋಲ್ಟ್ ಮೂರು ಒಲಿಂಪಿಕ್ಸ್‌ಗಳಲ್ಲಿ ಸರಿಗಟ್ಟಿದ್ದಾರೆ.
ಅಮೆರಿಕದ ಮಹಿಳೆಯರ ರಿಲೇ ತಂಡ 4x100ಮೀಟರ್ ರಿಲೇಯಲ್ಲಿ ಸತತ ಎರಡನೆ ಬಾರಿ ಚಿನ್ನ ಬಾಚಿಕೊಂಡಿತ್ತು. ಆದರೆ ಪುರುಷರ ತಂಡಕ್ಕೆ ಪದಕ ಗೆಲ್ಲಲು ಸಾಧ್ಯವಾಗಲಿಲ್ಲ. ಓರ್ವ ಅಥ್ಲೀಟ್ ಬ್ಯಾಟನ್ ಹಸ್ತಾಂತರಿಸುವಲ್ಲಿ ಮಾಡಿಕೊಂಡ ಎಡವಟ್ಟಿನಿಂದಾಗಿ ಪದಕ ತಪ್ಪಿತು. ಮಾತ್ರವಲ್ಲದೆ ಅಮೆರಿಕದ ರಿಲೇ ತಂಡ ಕೂಟದಿಂದ ಹೊರದಬ್ಬಲ್ಪಟ್ಟಿತು. ಕೆನಡಾಕ್ಕೆ ಮೂರನೆ ಸ್ಥಾನ ದೊರೆಯಿತು. ಜಪಾನ್ ತಂಡ ಬೆಳ್ಳಿ ಪಡೆಯಿತು.
,,,,,,,,
30ನೆ ಜನ್ಮದಿನದ ಉಡುಗೊರೆ
ರಿಯೋ ಡಿ ಜನೈರೊ, ಆ.20: ಶರವೇಗದ ಸರದಾರ ಉಸೇನ್ ಬೋಲ್ಟ್ ರವಿವಾರ(ಆ.21) ಹುಟ್ಟು ಹಬ್ಬವನ್ನು ಆಚರಿಸಲಿದ್ದಾರೆ.
ತನ್ನ 30ನೆ ಜನ್ಮದಿನದ ಮುನ್ನಾ ದಿನ ಹ್ಯಾಟ್ರಿಕ್ ಚಿನ್ನದೊಂದಿಗೆ ಬೋಲ್ಟ್ ಒಲಿಂಪಿಕ್ಸ್‌ಗೆ ವಿದಾಯ ಹೇಳಿದ್ದಾರೆ. ಮುಂದೆ ಅವರದ್ದು ಎರಡನೆ ಇನಿಂಗ್ಸ್.
‘‘ಉಸೇನ್ ಅವರ ಖ್ಯಾತಿ ಮತ್ತು ಸಾಧನೆಯ ಪ್ರಯೋಜನ ಜಮೈಕಾಕ್ಕೆ ದೊರೆಯಬೇಕು. ಎಂದು ಜಮೈಕಾದ ಪ್ರಧಾನಿ ಆ್ಯಂಡ್ರೊ ಹಾಲ್‌ನೆಸ್ ಹೇಳಿದ್ದಾರೆ.
ಬೋಲ್ಟ್ ಆಸಕ್ತಿ ಇದ್ದರೆ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲು ಸರಕಾರ ಸಿದ್ದವಿದೆ ಉಸೇನ್ ಬಯಸಿದರೆ ಸಚಿವರಾಗಬಹುದು ಎಂದು ಹಾಲ್‌ನೆಸ್ ತಿಳಿಸಿದ್ದಾರೆ.
ಬೋಲ್ಟ್ -‘ಟ್ರಿಪಲ್ ಟ್ರಿಪಲ್’
ಜನನ: 21 ಆಗಸ್ಟ್ 1986, ಜಮೈಕಾ
ಸ್ಪೋಟ್ಸ್: ಟ್ರಾಕ್ ಆ್ಯಂಡ್ ಫೀಲ್ಡ್
ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಬೋಲ್ಟ್ ಚಿನ್ನದ ಸಾಧನೆ
2008 ಬೀಜಿಂಗ್ 100 ಮೀಟರ್ ಓಟ
2008 ಬೀಜಿಂಗ್ 200 ಮೀಟರ್ ಓಟ
2008 ಬೀಜಿಂಗ್ 4x 100 ಮೀ ರಿಲೇ
2012 ಲಂಡನ್ 100 ಮೀಟರ್ ಓಟ
2012 ಲಂಡನ್ 200 ಮೀಟರ್ ಓಟ
2012 ಲಂಡನ್ 4x100 ಮೀ ರಿಲೇ
2016 ರಿಯೋ 100 ಮೀಟರ್ ಓಟ
2016 ರಿಯೋ 200 ಮೀಟರ್ ಓಟ
2016 ರಿಯೋ 4x100 ಮೀ ರಿಲೇ







