ಜೈಸಲ್ಮೇರ್ : ಪೊಲೀಸರ ಬಲೆಗೆ ಬಿದ್ದ ಪಾಕ್ ಗೂಢಚಾರ ನಂದಲಾಲ್ ಮಹಾರಾಜ್

ಜೈಸಲ್ಮೇರ್, ಆ.20: ಪಾಕಿಸ್ತಾನದ ಗೂಢಚರನೊಬ್ಬನನ್ನು ರಾಜಸ್ಥಾನದ ಜೈಸಲ್ಮೇರ್ ನಗರದ ಹೊಟೇಲ್ ಒಂದರಿಂದ ಬಂಧಿಸಲಾಗಿದ್ದು ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.
ನಂದಲಾಲ್ ಮಹಾರಾಜ್ ಎಂಬ ಹೆಸರಿನ ಆರೋಪಿ ಬಳಿ ಗಡಿ ಪ್ರದೇಶದ ಹಲವಾರು ನಕ್ಷೆಗಳು ಹಾಗೂ ಫೋಟೋಗಳಿದ್ದವು. ‘‘ಪ್ರಾಯಶಃ ಆತ ದೊಡ್ಡ ಗೂಢಚರ್ಯೆ ಜಾಲದ ಸದಸ್ಯನಾಗಿರಬಹುದು,’’ಎಂದು ಎಸ್ಪಿ ಗೌರವ್ ಯಾದವ್ ಹೇಳಿದ್ದಾರೆ.
ಗುಪ್ತಚರ ಮೂಲಗಳ ಪ್ರಕಾರ ಆರೋಪಿ ಭಾರತಕ್ಕೆ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡಲು ಸಹಾಯ ಮಾಡುತ್ತಿದ್ದನೆನ್ನಲಾಗಿದೆ. ಆತ ಭಾರತಕ್ಕೆ ಸಕ್ರಮ ಪಾಸ್ ಪೋರ್ಟ್ ಹಾಗೂ ವೀಸಾ ಹೊಂದಿಯೇ ಪ್ರವೇಶಿಸಿದ್ದು ಆತನನ್ನು ಪಾಕಿಸ್ತಾನದ ಮುನಾಬೊ ಸಮೀಪದ ಗಡಿ ಪ್ರದೇಶದ ಚೆಕ್ ಪೋಸ್ಟ್ ನಿಂದ ಒಳ ಪ್ರವೇಶಿಸಲು ಅನುಮತಿಸಲಾಗಿತ್ತು.
ನಂತರ ಆತ ಜೈಸಲ್ಮೇರ್ ಪಕ್ಕದಲ್ಲಿರುವ 350 ಗ್ರಾಮಗಳಲ್ಲಿ ಒಂದು ಗ್ರಾಮದಲ್ಲಿ ಕಂಡು ಬಂದಿದ್ದ. ಸಾಧಾರಣವಾಗಿ ಈ ಪ್ರದೇಶಗಳಿಗೆ ವಿದೇಶೀಯರನ್ನು ಅನುಮತಿಸಲಾಗುವುದಲ್ಲ, ಭಾರತೀಯರಿಗೂ ಕೂಡ ಈ ಪ್ರದೇಶಕ್ಕೆ ಅನುಮತಿಸಲು ವಿಶೇಷ ಅನುಮತಿಯ ಅಗತ್ಯವಿದೆ. ಆತ ಭಾರೀ ಸುರಕ್ಷಾ ಕ್ರಮಗಳಿರುವ ಪ್ರದೇಶಗಳ ಬಗ್ಗೆ ಹಾಗೂ ಅಲ್ಲಿನ ಸುರಕ್ಷತಾ ಕ್ರಮಗಳ ಬಗ್ಗೆ ಗ್ರಾಮಸ್ಥರಿಗೆ ಹಣ ಕೊಟ್ಟು ಮಾಹಿತಿ ಸಂಗ್ರಹಿಸಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಆತ ಯಾರಿಗಾಗಿ ಕೆಲಸ ಮಾಡುತ್ತಿದ್ದನೆಂದು ಕಂಡು ಹಿಡಿಯುವ ಪ್ರಯತ್ನಗಳು ಮುಂದುವರಿದಿವೆ.







