ತನ್ನ ಕಾಲೆಳೆದ ಅಭಿಮಾನಿಗೆ ಸೈನಾ ಕೊಟ್ಟ ಉತ್ತರವೇನು ಗೊತ್ತೇ?

ಹೊಸದಿಲ್ಲಿ, ಆ.20: ಸೈನಾ ನೆಹ್ವಾಲ್ ಭಾರತ ಕಂಡ ಅದ್ವಿತೀಯ ಬ್ಯಾಡ್ಮಿಂಟನ್ ಆಟಗಾರ್ತಿಯೆಂಬುದಕ್ಕೆ ಎರಡು ಮಾತಿಲ್ಲ. ಆಕೆ ಮಾಜಿ ವಿಶ್ವ ನಂ.1 ಆಟಗಾರ್ತಿಯಲ್ಲದೆ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆಯೂ ಹೌದು.
ರಿಯೋ ಒಲಿಂಪಿಕ್ಸ್‌ನಲ್ಲಿ ಸಿಂಧು ಬೆಳ್ಳಿ ಪದಕ ಪಡೆದಿದ್ದೇ ತಡ, ಸೈನಾ ‘ಅಭಿಮಾನಿ’ ತಾನೆಂದು ಹೇಳಿಕೊಂಡಿರುವ ಟ್ವಿಟ್ಟರ್ ಬಳಕೆದಾರನೊಬ್ಬ ಈ ಅವಕಾಶವನ್ನು ಉಪಯೋಗಿಸಿ ಸೈನಾರನ್ನು ಅಪಹಾಸ್ಯ ಮಾಡಿಯೇಬಿಟ್ಟಿದ್ದ. ‘‘ಡಿಯರ್ ಸೈನಾ... ಪ್ಯಾಕ್ ಯುವರ್ ಬ್ಯಾಗ್ಸ್. ವಿ ಹ್ಯಾವ್ ಫೌಂಡ್ ಸಮ್ ಒನ್ ಹೂ ನೋಸ್ ಹೌ ಟು ಬೀಟ್ ದಿ ಬೆಸ್ಟ್ ಒನ್ಸ್’’ (ಪ್ರೀತಿಯ ಸೈನಾ ನಿಮ್ಮ ಗಂಟು ಮೂಟೆ ಕಟ್ಟಿಕೊಳ್ಳಿ. ಅತ್ಯುತ್ತಮ ಆಟಗಾರರನ್ನು ಸೋಲಿಸುವ ಒಬ್ಬರನ್ನು ನಾವು ಪಡೆದಿದ್ದೇವೆ)’’ ಎಂದು ಆತ ಸೈನಾರನ್ನು ಅಣಕಿಸಿ ಟ್ವೀಟ್ ಮಾಡಿದ್ದ.

ಆದರೆ ಪ್ರಸಕ್ತ ಹೈದರಾಬಾದ್ ಆಸ್ಪತ್ರೆಯೊಂದರಲ್ಲಿ ತನ್ನ ಮೊಣಕಾಲಿನ ಗಾಯಕ್ಕಾಗಿ ಶಸ್ತ್ರಚಿಕಿತ್ಸೆಗೊಳಗಾಗಿರುವ ಸೈನಾ ತನ್ನ ಟ್ವೀಟ್‌ಗೆ ಪ್ರತಿಕ್ರಿಯಿಸುತ್ತಾರೆಂದು ಕನಸು ಮನಸ್ಸಿನಲ್ಲೂ ಆತ ಅಂದುಕೊಂಡಿರಲೇ ಇಲ್ಲ. ಒಲಿಂಪಿಕ್ಸ್‌ನಲ್ಲಿ ಉಕ್ರೇನ್ ನಮರಿಯಾ ಉಲಿಟಿನಾ ಎದುರು ಸೋತು ಹೊರ ಬಿದ್ದ ಸೈನಾ ತನ್ನ ಮೊಣಕಾಲಿನ ಗಾಯದ ಚಿಕಿತ್ಸೆಗೆ ಭಾರತಕ್ಕೆ ಮರಳಿದ್ದರು.
ತನ್ನ ಅಭಿಮಾನಿಯ ಅಣಕಕ್ಕೆ ಪ್ರತಿಕ್ರಿಯಿಸಿದ ಆಕೆ ‘‘ಶ್ಯೂರ್, ಥಾಂಕ್ಯು. ಸಿಂಧು ಈಸ್ ಡೂಯಿಂಗ್ ವೆರಿ ವೆಲ್. ಇಂಡಿಯಾ ಈಸ್ ಡೂಯಿಂಗ್ ರಿಯಲಿ’’ ಎಂದು ಉತ್ತರಿಸಿದ್ದರು.

ಸೈನಾರ ಈ ಪ್ರತಿಕ್ರಿಯೆಯಿಂದ ಆಕೆಯ ‘ಅಭಿಮಾನಿ’ ದಂಗಾಗಿರಬೇಕು. ‘‘ಗೈಸ್, ಐ ಅಪಾಲಜೈಸ್ ಫಾರ್ ವಾಟ್ ಐ ಸೆಡ್. ಇಟ್ ವಾಸ್ ಇನ್ ಪೂರ್ ಟೇಸ್ಟ್. ಐ ಟೇಕ್ ಮೈ ವರ್ಡ್ಸ್ ಬ್ಯಾಕ್. ಐ ಹೇವ್ ಆಲ್ವೇಸ್ ಬೀನ್ ಎ ಸೈನಾ ಫ್ಯಾನ್ ಆ್ಯಂಡ್ ವಿಲ್ ಆಲ್ವೇಸ್ ಬಿ.’’ ಎಂದು ಟ್ವೀಟ್ ಮಾಡಿ ಸೈನಾರ ಕ್ಷಮೆ ಕೋರಿದ.

ಅದಕ್ಕೂ ಪ್ರತಿಕ್ರಿಯಿಸಿದ ಸೈನಾ ತಮ್ಮ ದೊಡ್ಡ ಗುಣವನ್ನು ತೋರಿಸಿದರು. ‘‘ನೋ ಪ್ರಾಬ್ಲೆಮ್ ಮೈ ಫ್ರೆಂಡ್, ಆಲ್ ದಿ ಬೆಸ್ಟ್‌ಟು ಯು’’ಎಂದು ಟ್ವೀಟ್ ಮಾಡಿದರು.








