ಕಾಸರಗೋಡು: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಕಾಸರಗೋಡು, ಆ.20: ಖಾಸಗಿ ಹಣಕಾಸು ಕಂಪೆನಿಯೊಂದರಿಂದ ಸಾಲ ಪಡೆದು ನಾಪತ್ತೆಯಾಗಿದ್ದ ತ್ರಿಶ್ಶೂರ್ ನಿವಾಸಿಯೋರ್ವರ ಮೃತದೇಹ ಚಟ್ಟಂಚಾನ ರಸ್ತೆ ಬದಿ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾದೆ.
ತ್ರಿಶ್ಶೂರ್ ನಿವಾಸಿ ಬೇಬಿ (51) ಮೃತಪಟ್ಟವರು.
ಬೇಬಿಯವರು ಊರಲ್ಲಿರುವ ತನ್ನ ಸ್ನೇಹಿತನೋರ್ವನಿಗೆ ಆರ್ಥಿಕ ಸಹಾಯ ಒದಗಿಸಲು ಅನಧಿಕೃತ ಹಣಕಾಸು ಸಂಸ್ಥೆಯೊಂದರಿಂದ ಸಾಲ ಪಡೆದಿದ್ದರು. ಆದರೆ ಅದನ್ನು ಸಕಾಲದಲ್ಲಿ ಮರು ಪಾವತಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಣಕಾಸು ಸಂಸ್ಥೆಯವರು ಬೇಬಿಯವರಿಗೆ ನಿರಂತರ ಬೆದರಿಕೆಯೊಡ್ಡುತ್ತಿದ್ದರು. ಇದರಿಂದ ಮನನೊಂದ ಬೇಬಿ ಅವರು ಆ.18ರಂದು ಊರು ಬಿಟ್ಟು ತೆರಳಿದ್ದರು ಎನ್ನಲಾಗಿದೆ.
ಆ ಬಗ್ಗೆ ಮನೆಯವರು ನೀಡಿದ ದೂರಿನಂತೆ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿ ಶೋಧ ಆರಂಭಿಸಿದ್ದರು. ಈ ಮಧ್ಯೆ ಬೇಬಿಯವರ ಮೃತದೇಹ ಚಟ್ಟಂಚಾಲ್ 55ನೆ ಮೈಲನ ರಸ್ತೆ ಬದಿ ಶನಿವಾರ ಪತ್ತೆಯಾಗಿದೆ. ವಿಷ ಸೇವನೆಯಿಂದ ಸಾವು ಸಂಭವಿಸಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಸಾಕಷ್ಟು ಅನುಮಾನಗಳು ಮೂಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.





