ಬಂಟ್ವಾಳವನ್ನು ಶಾಂತಿಯ ತಾಣವಾಗಿ ಮಾರ್ಪಡಿಸಲು ಸಹಕಾರ ನೀಡಿ: ಡಿವೈಎಸ್ಪಿ ರವೀಶ್
ವಿವಿಧ ಹಬ್ಬಗಳ ಹಿನ್ನೆಲೆಯಲ್ಲಿ ಶಾಂತಿ ಸಭೆ

ಬಂಟ್ವಾಳ, ಆ. 20: ದಕ್ಷಿಣ ಕನ್ನಡ ಜಿಲ್ಲೆಯ ಅತೀ ಕೋಮು ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವ ಬಂಟ್ವಾಳ ತಾಲೂಕು ಪ್ರಸಕ್ತ ದಿನಗಳಲ್ಲಿ ಶಾಂತಿಯ ತಾಣವಾಗಿ ಮಾರ್ಪಡುತ್ತಿದ್ದು, ಮುಂದಿನ ದಿನಗಳಲ್ಲೂ ಇದೇ ಸ್ಥಿತಿ ಮುಂದುವರಿಯಲು ಎಲ್ಲ ಧರ್ಮ, ವರ್ಗದ ಜನರು ಸಹಕಾರ ನೀಡಬೇಕು ಎಂದು ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್. ಮನವಿ ಮಾಡಿದರು.
ಅವರು ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ, ಶಾರದಾ ಹಬ್ಬ, ಈದುಲ್ ಅರಝ್ಹಾ, ಮೋಂತಿ ಹಬ್ಬ ಸಹಿತ ಮುಂದಿನ ದಿನಗಳಲ್ಲಿ ಬರುವ ವಿವಿಧ ಹಬ್ಬಗಳ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ಶನಿವಾರ ನಡೆದ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣೆ ವ್ಯಾಪ್ತಿಯ ವಿವಿಧ ಧರ್ಮ, ಸಂಘಟನೆಗಳ ಮುಖಂಡರ ಶಾಂತಿ ಸಭೆಯಲ್ಲಿ ಮಾತನಾಡಿದರು.
ಬಂಟ್ವಾಳ ವೃತ್ತ ನಿರೀಕ್ಷಕ ಮಂಜಯ್ಯ ಮಾತನಾಡಿ, ಹಬ್ಬ ಹರಿದಿನಗಳಿಗೆ ಶುಭ ಕೋರಿ ಬ್ಯಾನರ್, ಫ್ಲೆಕ್ಸ್ ಅಳವಡಿಸುವವರು ಸ್ಥಳೀಯ ಸಂಸ್ಥೆಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಕಾರ್ಯಕ್ರಮ ಮುಗಿದ ಮರು ದಿನವೇ ಬ್ಯಾನರ್, ಫ್ಲೆಕ್ಸ್‌ಗಳನ್ನು ತೆರವುಗೊಳಿಸಬೇಕು. ಕಾರ್ಯಕ್ರಮ ಸಂಯೋಜಕರು ಸಾರ್ವಜನಿಕರಿಗೆ ತೊಂದರೆಯಾಗದಂತೆ ಬ್ಯಾನರ್, ಫ್ಲೆಕ್ಸ್‌ಗಳನ್ನು ಅಳವಡಿಸಬೇಕು. ಪ್ರತಿಯೊಂದು ಕಾರ್ಯಕ್ರಮಗಳಿಗೆ ಹಾಗೂ ಧ್ವನಿವರ್ದಕಗಳಿಗೆ ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಉನ್ನತ ಅಧಿಕಾರಿಗಳ ಆದೇಶದಂತೆ ಶೋಭಾಯಾತ್ರೆಯಲ್ಲಿ ಡಿಜೆಯನ್ನು ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಡಿಜೆ ಹಾಕಬಾರದು ಎಂದು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಜೆಡಿಎಸ್ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಾರೂನ್ ರಶೀದ್, ಮುಂದಿನ ತಿಂಗಳು ನಡೆಯಲಿರುವ ಈದುಲ್ ಅರಝ್ಹಾ ಹಬ್ಬದ ಪ್ರಯುಕ್ತ ಸಂಪ್ರದಾಯದಂತೆ ಮುಸ್ಲಿಮರು ಮೂರು ದಿನಗಳ ಕಾಲ ಜಾನುವಾರುಗಳ ಬಲಿದಾನ ಕೊಡಲಿದ್ದಾರೆ. ಬಲಿದಾನಕ್ಕಾಗಿ ಕಾನೂನು ಪ್ರಕಾರ ಗೋವುಗಳನ್ನು ಖರೀದಿಸಿ ಸಾಗಾಟ ಮಾಡುವವರ ಮೇಲೆ ಹಲ್ಲೆ, ಕೊಲೆ ನಡೆಯುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಕಲಿ ಗೋ ರಕ್ಷಕರ ಮೇಲೆ ನಿಗಾವಹಿಸಿ ಅವರನ್ನು ಮಟ್ಟ ಹಾಕಬೇಕು. ಹಾಗೆಯೇ ಗೋ ಕಳ್ಳರನ್ನೂ ಮಟ್ಟ ಹಾಕಬೇಕು ಎಂದು ಸಭೆಯಲ್ಲಿ ಹೇಳಿದರು.
ಬಲಿದಾನಕ್ಕಾಗಿ ಕಾನೂನು ಪ್ರಕಾರ ಖರೀದಿಸಿ ತಂದು ಮನೆಯಲ್ಲಿ ಕಟ್ಟಿ ಹಾಕಿದ ಗೋವುಗಳನ್ನು ಪೊಲೀಸರು ದಾಳಿ ನಡೆಸಿ ಠಾಣೆಗೆ ಸಾಗಿಸಿರುವ ಕೆಲವು ಘಟನೆಗಳು ಈ ಹಿಂದೆ ನಡೆದಿದ್ದು ಇದರಿಂದ ಸಮಾಜದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುತ್ತದೆ. ಈ ರೀತಿಯಾಗದಂತೆ ಪೊಲೀಸರು ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ ಅವರು ಕಾನೂನು ಚೌಕಟ್ಟಿನಲ್ಲಿ ನಡೆಯುವ ಬಲಿದಾನಕ್ಕೆ ಪೊಲೀಸರು ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಜಿ.ಆನಂದ್ ಮಾತನಾಡಿ, ತಾಲೂಕಿನ ಆಯಕಟ್ಟಿನ ಪ್ರದೇಶದಲ್ಲಿ ಸಿಸಿ ಕ್ಯಾಮೆರಗಳನ್ನು ಅಳವಡಿಸುವ ಮೂಲಕ ಅಹಿತಕರ ಘಟನೆಗಳಿಗೆ ಕಾರಣವಾಗುವ ದುಷ್ಕರ್ಮಿಗಳನ್ನು ಪತ್ತೆಹಚ್ಚಬೇಕು ಎಂದರು.
ಹೋರಾಟಗಾರ ಪ್ರಭಾಕರ್ ದೈವಗುಡ್ಡೆ ಮಾತನಾಡಿ, ತಾಲೂಕಿನ ಕಾಲೇಜು ಕ್ಯಾಂಪಸ್‌ಗಳಲ್ಲಿ ಗಾಂಜಾ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಇದರ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ವಿವಿಧ ಧರ್ಮಗಳ, ಸಂಘಟನೆಗಳ, ಪಕ್ಷದ ಮುಖಂಡರು ಉಪಸ್ಥಿತರಿದ್ದು ಸಲಹೆಗಳನ್ನು ನೀಡಿದರು. ಬಂಟ್ವಾಳ ನಗರ ಠಾಣೆ ಉಪ ನಿರೀಕ್ಷಕ ನಂದಕುಮಾರ್, ಗ್ರಾಮಾಂತರ ಠಾಣೆ ಉಪ ನಿರೀಕ್ಷ ಎ.ಕೆ.ರಕ್ಷಿತ್ ಗೌಡ, ಅಪರಾಧ ವಿಭಾಗದ ಎಸ್ಸೈ ಗಂಗಾಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರ ಠಾಣೆಯ ಎಎಸ್ಸೈ ರಘುರಾಮ ಹೆಗ್ಡೆ ಸ್ವಾಗತಿಸಿದರು. ಟ್ರಾಫಿಕ್ ಠಾಣೆ ಎಸ್ಸೈ ಚಂದ್ರಶೇಖರಯ್ಯ ವಂದಿಸಿದರು.







