ಎಬಿವಿಪಿ ಸಮಾವೇಶದಲ್ಲಿ ವಿವೇಕಾನಂದರ ಚಿತ್ರಕ್ಕೆ ಅವಮಾನ
ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ವೈರಲ್

ಜೈಪುರ ಆ.21 : ಸ್ವಾಮಿ ವಿವೇಕಾನಂದರು ನಮಗೆ ಆದರ್ಶ ಎಂದು ಹೇಳಿಕೊಳ್ಳುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಇತ್ತೀಚೆಗೆ ನಡೆಸಿದ ರ್ಯಾಲಿಯೊಂದರಲ್ಲಿ ಸ್ವಾಮಿ ವಿವೇಕಾನಂದರ ಪೋಸ್ಟರ್ ನ್ನು ಕಾಲಿನಡಿಗೆ ಹಾಕಿ ಅವಮಾನಿಸಿರುವ ಫೋಟೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ .
ಬುಧವಾರ ರಾಜಸ್ಥಾನ ವಿವಿಯಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಬಿವಿಪಿ ರ್ಯಾಲಿ ಆಯೋಜಿಸಿತ್ತು . ಈ ಮೆರವಣಿಗೆಯಲ್ಲಿ ಎಬಿವಿಪಿ ಕಾರ್ಯ ಕರ್ತರ ಕೈಯಲ್ಲಿ ಸ್ವಾಮಿ ವಿವೇಕಾನಂದರ ಪೋಸ್ಟರ್ ಇತ್ತು .ಆದರೆ ಬಳಿಕ ಸಭಾ ಕಾರ್ಯಕ್ರಮ ನಡೆಯುವಾಗ ಈ ಪೋಸ್ಟರ್ ನೆಲಕ್ಕೆ ತಲುಪಿತ್ತು.
ಕಾರ್ಯಕ್ರಮದ ಬಳಿಕ ಎಬಿವಿಪಿ ಕಾರ್ಯಕರ್ತರು ಹಿಂದಿರುಗುವಾಗ ವಿವೇಕಾನಂದರ ಪೋಸ್ಟರ್ ಹಲವರ ಕಾಲ್ತುಳಿತಕ್ಕೆ ಒಳಗಾಗಿತ್ತು.
'ರಾಜಸ್ಥಾನ್ ಪತ್ರಿಕಾ' ವರದಿಯ ಪ್ರಕಾರ, ಎಬಿವಿಪಿ ಪದಾಧಿಕಾರಿಗಳು ವಿವಿ ಕುಲಪತಿ ಕಚೇರಿಯ ಎದುರು ಕಾರಿನ ಬೋನೆಟ್ ಮೇಲೆ ನಿಂತು ಭಾಷಣ ಮಾಡಿದ್ದರು. ಕಾರ್ಯಕ್ರಮ ನಡೆದ ಸುಮಾರು 2 ಗಂಟೆಗಳ ಕಾಲ ಇಡೀ ಕ್ಯಾಂಪಸ್ ನಲ್ಲಿ ಗದ್ದಲದ ವಾತಾವರಣ ಉಂಟಾಗಿತ್ತು .ಆದರೆ ಪೊಲೀಸರು ಮಾತ್ರ ಮೂಕ ಪ್ರೇಕ್ಷಕರಾಗಿ ನಿಂತಿದ್ದರು. ಇದೇ ಪೊಲೀಸರು ಮಂಗಳವಾರ ಎನ್ ಎಸ್ ಯು ಐನವರು ರ್ಯಾಲಿ ನಡೆಸಿದಾಗ ಇವರ ವಿರುದ್ದ ಲಾಠಿ ಚಾರ್ಜ್ ನಡೆಸಿದ್ದರು .








