ಯುದ್ಧ ವಿಮಾನಗಳನ್ನು ನಿಯೋಜಿಸಿದ ಅಮೆರಿಕ
ಕುರ್ದಿಶ್ ಪಡೆಗಳ ಮೇಲೆ ಸಿರಿಯ ವಾಯು ದಾಳಿ
ವಾಶಿಂಗ್ಟನ್, ಆ. 20: ಉತ್ತರ ಸಿರಿಯದಲ್ಲಿ ಅಮೆರಿಕದ ಸೇನೆಯೊಂದಿಗೆ ಕೆಲಸ ಮಾಡುತ್ತಿರುವ ಕುರ್ದಿಶ್ ಪಡೆಗಳ ಮೇಲೆ ಸಿರಿಯದ ಸರಕಾರಿ ಪಡೆಗಳು ವಾಯು ದಾಳಿ ನಡೆಸಿದ ಬಳಿಕ, ಅಮೆರಿಕ ನೇತೃತ್ವದ ಮಿತ್ರ ಪಡೆಯು ತನ್ನ ಯುದ್ಧ ವಿಮಾನಗಳನ್ನು ನಿಯೋಜಿಸಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗಾನ್ ಶನಿವಾರ ತಿಳಿಸಿದೆ.
ಸಿರಿಯದ ಎರಡು ಎಸ್‌ಯು-24 ಯುದ್ಧ್ದ ವಿಮಾನಗಳು ನಿನ್ನೆ ಈಶಾನ್ಯದ ನಗರ ಹಸಾಕೆಹ್‌ನಲ್ಲಿ ಅಮೆರಿಕದ ವಿಶೇಷ ಯುದ್ಧ ಸಲಹೆಗಾರರಿಂದ ತರಬೇತಿ ಪಡೆಯುತ್ತಿರುವ ಕುರ್ದಿಶ್ ಪಡೆಗಳ ಮೇಲೆ ವಾಯು ದಾಳಿ ನಡೆಸಿದವು ಎಂದು ಪೆಂಟಗಾನ್ ವಕ್ತಾರ ಕ್ಯಾಪ್ಟನ್ ಜೆಫ್ ಡೇವಿಸ್ ತಿಳಿಸಿದರು.
‘‘ಮಿತ್ರ ಪಡೆಗಳನ್ನು ರಕ್ಷಿಸುವ ಕ್ರಮವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ’’ ಎಂದು ಡೇವಿಸ್ ನುಡಿದರು.
‘‘ಅವರ ರಕ್ಷಣೆಯ ಹೊಣೆಯನ್ನು ನಾವು ಹೊತ್ತಿದ್ದೇವೆ. ಅವರನ್ನು ಅಪಾಯಕ್ಕೆ ಗುರಿಮಾಡುವ ಯಾವುದೇ ಕೃತ್ಯವನ್ನು ಮಾಡಬೇಡಿ ಎಂಬುದಾಗಿ ಸಿರಿಯ ಆಡಳಿತಕ್ಕೆ ಎಚ್ಚರಿಕೆ ನೀಡಲಾಗುವುದು. ಮಿತ್ರಪಡೆಗಳನ್ನು ಅಪಾಯಕ್ಕೆ ಗುರಿಪಡಿಸುವ ಪ್ರಕರಣಗಳನ್ನು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ ಹಾಗೂ ನಮಗೆ ಸ್ವರಕ್ಷಣೆಯ ಜನ್ಮಸಿದ್ಧ ಹಕ್ಕಿದೆ’’ ಎಂದು ಡೇವಿಸ್ ತಿಳಿಸಿದರು.
ಆದರೆ, ಈ ಎಚ್ಚರಿಕೆಗೆ ಕಿವಿಗೊಡದ ಸಿರಿಯ ಆಡಳಿತ ಎರಡನೆ ದಿನವಾದ ಶುಕ್ರವಾರವೂ ಹಸಾಕೆಹ್ ಮೇಲೆ ದಾಳಿ ನಡೆಸಿದೆ.







