ಯಮನ್‌ನಲ್ಲಿರುವ ಸೌದಿ ಪಡೆಗಳಿಗೆ ಅಮೆರಿಕನ್ ಸಲಹೆಗಾರರ ಕಡಿತ
ರಿಯಾದ್, ಆ. 20: ಯಮನ್‌ನಲ್ಲಿ ಸೌದಿ ಅರೇಬಿಯ ನೇತೃತ್ವದ ಮಿತ್ರಪಡೆಗಳು ನಡೆಸುತ್ತಿರುವ ವಾಯು ದಾಳಿಗೆ ಮಾರ್ಗದರ್ಶನ ನೀಡುವ ಗುಪ್ತಚರ ಸಲಹೆಕಾರರ ಸಂಖ್ಯೆಯನ್ನು ಅಮೆರಿಕದ ಸೇನೆ ಕಡಿತ ಮಾಡಿದೆ ಎಂದು ಅಮೆರಿಕದ ನೌಕಾಪಡೆ ಶನಿವಾರ ತಿಳಿಸಿದೆ.
ಈ ಸಿಬ್ಬಂದಿಗೆ ಜೂನ್ ತಿಂಗಳಲ್ಲಿ ಬೇರೆ ಜವಾಬ್ದಾರಿ ನೀಡಲಾಗಿದೆ. ಯಾಕೆಂದರೆ ಇದೇ ರೀತಿಯ ನೆರವಿಗಾಗಿ ಸೌದಿಯಿಂದ ಬೇಡಿಕೆ ಬಂದಿಲ್ಲ ಎಂದು ಫಿಫ್ತ್ ಫ್ಲೀಟ್ ವಕ್ತಾರ ಲೆಫ್ಟಿನೆಂಟ್ ಇಯಾನ್ ಮೆಕಾನೇ ಬಹರೈನ್‌ನಿಂದ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ಯಮನ್‌ನಲ್ಲಿ ಬಂಡುಕೋರರ ವಿರುದ್ಧ 17 ತಿಂಗಳುಗಳಿಂದ ನಡೆಯುತ್ತಿರುವ ಯುದ್ಧದ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ನಾಗರಿಕರು ಹತರಾಗಿದ್ದಾರೆ ಎಂಬ ಟೀಕೆಯನ್ನು ಸೌದಿ ಅರೇಬಿಯ ಎದುರಿಸುತ್ತಿದೆ.
ಯಮನ್‌ನಲ್ಲಿ ಯುದ್ಧದಲ್ಲಿ ತೊಡಗದವರಿಗೆ ಹಾನಿ ಮಾಡದಿರುವಂತೆ ಅಮೆರಿಕದ ಅಧಿಕಾರಿಗಳು ಸೌದಿಯನ್ನು ಒತ್ತಾಯಿಸುತ್ತಾ ಬಂದಿದ್ದಾರೆ.
ಆದಾಗ್ಯೂ, ಅಮೆರಿಕದ ಸೇನಾ ಸಿಬ್ಬಂದಿಯ ಮರುನಿಯೋಜನೆ ಸೌದಿ ನೇತೃತ್ವದ ಮಿತ್ರ ಪಡೆಗಳ ಹೋರಾಟದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಹೇಳಿರುವ ಅಮೆರಿಕ, ಇರುವ ಸಂಪನ್ಮೂಲವನ್ನು ದಕ್ಷವಾಗಿ ಹಂಚಿಕೆ ಮಾಡಲಾಗುತ್ತಿದೆ ಎಂದರು.





