ಗುಜರಾತ್: 2012ರ ಪೊಲೀಸ್ ಗೋಲಿಬಾರ್‌ನಲ್ಲಿ ದಲಿತರ ಹತ್ಯೆ ತನಿಖೆಗೆ ವಿಶೇಷ ತಂಡ ರಚನೆ

ಅಹ್ಮದಾಬಾದ್,ಆ.20: ಗುಜರಾತಿನ ಸುರೇಂದ್ರ ನಗರ ಜಿಲ್ಲೆಯ ತಂಗಧ್‌ನಲ್ಲಿ ಪೊಲೀಸರ ಗೋಲಿಬಾರಿನಲ್ಲಿ ಮೂವರು ದಲಿತ ಯುವಕರು ಕೊಲ್ಲಲ್ಪಟ್ಟ ನಾಲ್ಕು ವರ್ಷಗಳ ಬಳಿಕ ಇದೀಗ ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡ(ಸಿಟ್)ವನ್ನು ರಚಿಸಲು ರಾಜ್ಯ ಸರಕಾರವು ನಿರ್ಧರಿಸಿದೆ. ಸಿಟ್ ರಚನೆಗಾಗಿ ಸಂಪುಟ ಸಚಿವ ಆತ್ಮಾರಾಮ ಪರಮಾರ್,ಮಾಜಿ ಸಚಿವ ರಮಣಲಾಲ ವೋರಾ ಮತ್ತು ರಾಜ್ಯಸಭಾ ಸದಸ್ಯ ಶಂಭುಪ್ರಸಾದ ತುಂಡಿಯಾ ಸೇರಿದಂತೆ ಹಲವಾರು ದಲಿತ ನಾಯಕರು ಮನವಿಗಳನ್ನು ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವಿಜಯ ರೂಪಾನಿ ಅವರು ಸಿಟ್ ರಚನೆಗೆ ನಿರ್ಧರಿಸಿದ್ದಾರೆ ಎಂದು ಸಹಾಯಕ ಗೃಹಸಚಿವ ಪ್ರದೀಪಸಿಂಹ ಜಡೇಜಾ ಶನಿವಾರ ಇಲ್ಲಿ ಹೇಳಿಕೆಯಲ್ಲಿ ತಿಳಿಸಿದರು.
ಪ್ರಕರಣದ ತ್ವರಿತ ವಿಚಾರಣೆಗಾಗಿ ವಿಶೇಷ ನಿಯೋಜಿತ ನ್ಯಾಯಾಲಯವನ್ನು ಸ್ಥಾಪಿಸಲು ಮತ್ತು ವಿಶೇಷ ಸಾರ್ವಜನಿಕ ಅಭಿಯೋಜಕರನ್ನು ನೇಮಿಸಲು ಸಹ ಸರಕಾರವು ನಿರ್ಧರಿಸಿದೆ. ಅಲ್ಲದೇ ಗೋಲಿಬಾರಿನಲ್ಲಿ ಮೃತರ ಕುಟುಂಬಗಳಿಗೆ ಈ ಹಿಂದೆ ನಿರ್ಧರಿಸಿದ್ದಕ್ಕಿಂತ ಎರಡು ಲಕ್ಷ ರೂ.ಹೆಚ್ಚುವರಿ ಪರಿಹಾರವನ್ನು ನೀಡಲಾಗುವುದು ಎಂದೂ ಅವರು ತಿಳಿಸಿದರು.
ಕಳೆದ ಜುಲೈ 11ರಂದು ಗಿರ್ ಸೋಮನಾಥ ಜಿಲ್ಲೆಯ ಉನಾ ತಾಲೂಕಿನ ಮೋಟಾ ಸಮಾಧಿಯಾಲಾ ಗ್ರಾಮದಲ್ಲಿ ಸತ್ತ ದನವೊಂದರ ಚರ್ಮವನ್ನು ಸುಲಿಯುತ್ತಿದ್ದ ದಲಿತ ಯುವಕರನ್ನು ಸ್ವಯಂಘೋಷಿತ ಗೋರಕ್ಷಕರ ತಂಡವೊಂದು ಅಮಾನುಷವಾಗಿ ಥಳಿಸಿದ ಘಟನೆ ಬೆಳಕಿಗೆ ಬಂದ ನಂತರ ತಂಗಧ್ ಗೋಲಿಬಾರ್ ಹೆಚ್ಚಿನ ಗಮನವನ್ನು ಸೆಳೆದಿತ್ತು.
ಇತ್ತೀಚೆಗೆ ಅಹ್ಮದಾಬಾದ್‌ನಿಂದ ಉನಾಕ್ಕೆ ಜಾಥಾವನ್ನು ಸಂಘಟಿಸಿದ್ದ ಉನಾ ದಲಿತ ಅತ್ಯಾಚಾರ ಪಡ್ಕರ್ ಸಮಿತಿಯು ಅಲ್ಲಿ ನಡೆಸಿದ್ದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ದಲಿತ ನಾಯಕರು ತಂಗಧ್ ಗೋಲಿಬಾರ್‌ನ ಬಲಿಪಶುಗಳಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದ್ದರು. ಮೃತರ ಕುಟುಂಬ ಸದಸ್ಯರು ಸಹ ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಗಾಂಧಿನಗರದಲ್ಲಿ ಉಪವಾಸ ಮುಷ್ಕರ ನಡೆಸಿದ್ದರು.







