ಆಮ್ನೆಸ್ಟಿ ದೇಶದ್ರೋಹದ ಕೆಲಸ ಮಾಡಿಲ್ಲ: ಪರಮೇಶ್ವರ್
ಬೆಂಗಳೂರು, ಆ.20: ‘ಆಮ್ನೆಸ್ಟಿ ಇಂಟರ್ ನ್ಯಾಷನಲ್- ಇಂಡಿಯಾ’ ಸಂಸ್ಥೆ ದೇಶದ್ರೋಹದ ಕೆಲಸ ಮಾಡಿದೆ ಎಂದು ಅನ್ನಿಸುತ್ತಿಲ್ಲ. ಆದರೆ, ಎಬಿವಿಪಿ ವಿನಾಕಾರಣ ‘ಆಮ್ನೆಸ್ಟಿ’ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಪುರಭವನದಲ್ಲಿ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ದೇವರಾಜ ಅರಸು ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಬಿವಿಪಿಯು ಕಾಲೇಜು ವಿದ್ಯಾರ್ಥಿಗಳನ್ನು ಅಪಹರಿಸಿಕೊಂಡು ತಂದು ಬೆಂಗಳೂರಿನ ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ನಗರದ ಥಿಯೋಲಾಜಿಕಲ್ ಕಾಲೇಜಿನಲ್ಲಿ ಆಮ್ನೆಸ್ಟಿ ಏರ್ಪಡಿಸಿದ್ದ ಸಂವಾದದಲ್ಲಿ ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಿದ್ದಾರೆಂಬುದಕ್ಕೆ ಯಾವುದೇ ಸಾಕ್ಷಾಧಾರ ಇಲ್ಲ. ಆಮ್ನೆಸ್ಟಿ ಸಂಸ್ಥೆಗೆ ಉತ್ತಮ ಇತಿಹಾಸವಿದ್ದು, ಯಾವುದೇ ದೇಶ ವಿರೋಧಿ ಕಾರ್ಯವನ್ನು ಅದು ಮಾಡಿಲ್ಲ ಎಂದು ಪರಮೇಶ್ವರ್ ವಿವರ ನೀಡಿದರು.
ಎಬಿವಿಪಿಯಿಂದ ಅಶಾಂತಿ ಸೃಷ್ಟಿ: ಕಾಶ್ಮೀರದಲ್ಲಿ ಹಿಂಸಾಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರಿ ಜನತೆಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಆಮ್ನೆಸ್ಟಿ ಇಂಟರ್ ನ್ಯಾಷನಲ್-ಇಂಡಿಯಾ ಸಂವಾದ ಏರ್ಪಡಿಸಿತ್ತು. ಆದರೆ, ಇದನ್ನೇ ನೆಪ ಮಾಡಿಕೊಂಡು ಎಬಿವಿಪಿ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದೆ ಎಂದು ಪರಮೇಶ್ವರ್ ಗಂಭೀರ ಆರೋಪ ಮಾಡಿದರು.
ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಎಬಿವಿಪಿ ನಗರದ ಕಾಲೇಜುಗಳಿಗೆ ನುಗ್ಗಿ ಅಮಾಯಕ ವಿದ್ಯಾರ್ಥಿಗಳನ್ನು ಎಳೆದು ತಂದು ಪ್ರತಿಭಟನೆಗೆ ನಿಲ್ಲಿಸುತ್ತಿದೆ. ಆದ್ದರಿಂದ ಇದನ್ನು ಎಲ್ಲ ವಿದ್ಯಾರ್ಥಿಗಳು ಅರಿತು ಅವರಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡಬಾರದು ಎಂದು ಅವರು ಮನವಿ ಮಾಡಿದರು.
ಬಲವಂತವಾಗಿ ಕಾಲೇಜು ವಿದ್ಯಾರ್ಥಿಗಳನ್ನು ಬೀದಿಗೆ ಕರೆ ತಂದು ಪ್ರತಿಭಟನೆ ನಡೆಸಿ ದಾಂಧಲೆ ಸೃಷ್ಟಿಸುತ್ತಿದ್ದು, ವಿದ್ಯಾ ರ್ಥಿಗಳ ಅಪಹರಣ ಸಂಬಂಧ ಎಬಿವಿಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಎಬಿವಿಪಿ ಸಂಸ್ಕೃತಿ ಎಂತಹದ್ದು ಎಂಬುದು ಇದರಿಂದ ಗೊತ್ತಾಗುತ್ತದೆ. ಆದುದರಿಂದ ಎಬಿವಿಪಿ ವಿಚಾ ರಕ್ಕೆ ರಾಜ್ಯದ ಜನತೆ ಕಿವಿಗೊಡಬಾರದು ಎಂದು ಅವರು ಕೋರಿದರು.
ಮಹಾದಾಯಿ ನ್ಯಾಯಾಧಿಕರಣದ ಮಧ್ಯಾಂತರ ತೀರ್ಪು ವಿರೋಧಿಸಿ ರೈತರ ಪ್ರತಿಭಟನೆ ವೇಳೆ ಕೆಲ ಕಿಡಿಗೇಡಿಗಳು ತಾಲೂಕು ಕಚೇರಿ, ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಕ್ಕೆ ಬೆಂಕಿ ಹಚ್ಚಲು ಮುಂದಾಗಿದ್ದ ಹಿನ್ನೆಲೆಯಲ್ಲಿ ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಪೊಲೀಸರ ಕ್ರಮವನ್ನು ರಾಜ್ಯದ ಜನತೆ ಹಾಗೂ ಮಾಧ್ಯಮಗಳು ತೀವ್ರವಾಗಿ ಖಂಡಿಸಿವೆ. ಅದೇ ರೀತಿಯಲ್ಲಿ ಕಾಶ್ಮೀರಿ ಜನತೆಯ ಮೇಲಿನ ಹಿಂಸೆಯ ಬಗ್ಗೆ ಆಮ್ನೆಸ್ಟಿ ಸಂವಾದ ಏರ್ಪಡಿಸಿತ್ತು. ಆದರೆ ಎಬಿವಿಪಿ ವಿನಾಕಾರಣ ಆಮ್ನೆಸ್ಟಿ ವಿರುದ್ಧ ಆರೋಪ ಮಾಡುತ್ತಿದ್ದು, ಅದರಲ್ಲಿ ಯಾವುದೇ ಹುರುಳಿಲ್ಲ ಎಂದರು.
ಆಮ್ನೆಸ್ಟಿ ಇಂಟರ್ ನ್ಯಾಷನಲ್‌ಇಂಡಿಯಾ ಸಂಸ್ಥೆ ವಿರುದ್ಧ ವಿನಾಕಾರಣ ಆರೋಪ ಮಾಡಿ ಎಬಿವಿಪಿ ಪ್ರತಿಭಟನೆ ನಡೆಸುತ್ತಿದ್ದು, ಕಾಂಗ್ರೆಸ್ ಪಕ್ಷದ ಎಲ್ಲ ವಿಭಾಗಗಳ ಕಾರ್ಯಕರ್ತರು ಅದನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.
ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ
ರಾಜ್ಯದಲ್ಲಿ ಬಜರಂಗ ದಳ, ಹಿಂದೂ ಜಾಗರಣಾ ವೇದಿಕೆ ಹಿಂದುತ್ವದ ಹೆಸರಿನಲ್ಲಿ ಕೊಲೆ, ದರೋಡೆಗೆ ಇಳಿದಿದ್ದು, ಹಿಂಸಾಚಾರದ ಮೂಲಕ ಶಾಂತಿ ಕದಡುವ ಕೆಲಸ ಮಾಡುತ್ತಿವೆ. ಇಂತಹ ಸಂಘಟನೆಗಳ ವಿರುದ್ಧ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು.
ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ







