ಗ್ರಾಮ ಪಂಚಾಯತ್‌ಗಳ ಸಬಲೀಕರಣಕ್ಕೆ ‘ನಮ್ಮ ಗ್ರಾಮ ನಮ್ಮ ಯೋಜನೆ’: ಎಚ್.ಕೆ.ಪಾಟೀಲ್

ಬೆಂಗಳೂರು, ಆ. 20: ಗ್ರಾಮ ಪಂಚಾಯತ್‌ಗಳ ಸಬಲೀಕರಣ ದೃಷ್ಟಿಯಿಂದ ‘ನಮ್ಮ ಗ್ರಾಮ ನಮ್ಮ ಯೋಜನೆ’ಯಡಿ ರಾಜ್ಯದಲ್ಲಿ ಒಟ್ಟು 80 ಸಾವಿರ ಚಟುವಟಿಕೆಗಳನ್ನು ಗುರುತಿಸಿ, ಅವುಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಶನಿವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ‘ನಮ್ಮ ಗ್ರಾಮ ನಮ್ಮ ಯೋಜನೆ’ ಕಿರುಹೊತ್ತಿಗೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕ್ರಿಯಾ ಯೋಜನೆ ಸಿದ್ಧಪಡಿಸಿ, ಅವುಗಳ ಅನುಷ್ಠಾನ, ನಿರ್ವಹಣೆ ಹಾಗೂ ವೌಲ್ಯ ಮಾಪನ ಸಂಬಂಧ ರಾಜ್ಯದ 6,021 ಗ್ರಾಪಂಗಳ ಪೈಕಿ 5,500 ಗ್ರಾ.ಪಂ.ಗಳು ‘ಅಭಿವೃದ್ಧಿ ಮುನ್ನೋಟ’ ಸಿದ್ದಪಡಿಸಲಾಗಿದೆ ಎಂದರು.
ಶಾಲಾ ಹಾಜರಾತಿ ಹೆಚ್ಚಳ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆ ತರುವುದು ಸೇರಿದಂತೆ ಗ್ರಾಮಗಳ ಅಭಿವೃದ್ಧಿ ದೃಷ್ಟಿಯಿಂದ ಹಲವು ಕಾರ್ಯ ಚಟುವಟಿಗಳನ್ನು ಗುರುತಿಸಲಾಗಿದೆ ಎಂದ ಅವರು, ದೇಶದಲ್ಲೆ ಪ್ರಪ್ರಥಮ ಬಾರಿಗೆ ಗ್ರಾಮಸಭೆಯಿಂದ ಯೋಜನೆಗಳನ್ನು ಸಿದ್ದಪಡಿಸುವ ಮಹತ್ವದ ಕಾರ್ಯಕ್ಕೆ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ ಎಂದರು.
ಆಡಳಿತಸ್ಥರು ರೂಪಿಸುತ್ತಿದ್ದ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುತ್ತಿತ್ತು. ಆದರೆ, ಇದೀಗ ಗ್ರಾಮೀಣ ಜನರ ಸಹಭಾಗಿತ್ವದಲ್ಲಿ ಗ್ರಾಮಗಳ ‘ಅಭಿವೃದ್ಧಿಯ ಮುನ್ನೋಟ’ ಸಿದ್ಧಪಡಿಸಿದ್ದು, ಅನುಷ್ಠಾನಗೊಳಿಸಲು ಸರಕಾರ ಕ್ರಮ ಕೈಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರತಿಯೊಂದು ಗ್ರಾಪಂಗಳು ಐದು ವರ್ಷಗಳ ಅವಧಿಯಲ್ಲಿ ಗ್ರಾಮೀಣ ಅಭಿವೃದ್ಧಿಗೆ ಕೈಗೆತ್ತಿಕೊಳ್ಳಬೇಕಾದ ಯೋಜನೆಗಳ ಮಾಹಿತಿಯುಳ್ಳ ಮುನ್ನೋಟ ಸಿದ್ಧಪಡಿಸಲಾಗಿದೆ ಎಂದ ಅವರು, ಗ್ರಾಮೀಣ ಪ್ರದೇಶದ ಜನರ ಅಭಿವೃದ್ಧಿಗೆ ಅನುಕೂಲ ವಾಗಲಿದೆ ಎಂದರು. ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ‘ಮಾನವ ಅಭಿವೃದ್ಧಿ ಸೂಚ್ಯಂಕ’ದಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳು ಅತ್ಯಂತ ಹಿಂದುಳಿದಿರಲು ಹಲವು ಕಾರಣಗಳಿವೆ. ಹಿಂದುಳಿದ ಗ್ರಾಮಗಳನ್ನು ಅಭಿವೃದ್ಧಿ ದಿಕ್ಕಿನತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ನಮ್ಮ ಗ್ರಾಮ ನಮ್ಮ ಯೋಜನೆ ಸಹಕಾರಿಯಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
‘ಪಡಿತರ ಚೀಟಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸುವ ಅಧಿಕಾರವನ್ನು ಗ್ರಾಪಂಗಳಿಗೆ ನೀಡಲು ಕ್ರಮ ಕೈಗೊಂಡಿದ್ದು, ಪಂಚಾಯತ್‌ಗಳೇ ಅರ್ಹರನ್ನು ಆಯ್ಕೆ ಮಾಡಲಿವೆ. ಈ ಸಂಬಂಧ ದೂರುಗಳನ್ನು ಪರಿಹರಿಸಲು ಪ್ರತ್ಯೇಕ ವ್ಯವಸ್ಥೆಯನ್ನು ಶೀಘ್ರದಲ್ಲೆ ರೂಪಿಸಲಾಗುವುದು’
-ಎಚ್.ಕೆ.ಪಾಟೀಲ್, ಸಚಿವ







