ಇಬ್ಬರು ಕುಲಪತಿ, ನಾಲ್ವರು ರಿಜಿಸ್ಟ್ರಾರ್‌ಗಳ ವಿರುದ್ಧ ಪ್ರಕರಣ ದಾಖಲು
ಮುಕ್ತ ವಿವಿಯಲ್ಲಿ ಕೋಟ್ಯಂತರ ರೂ. ಅವ್ಯವಹಾರ ಆರೋಪ
ಬೆಂಗಳೂರು, ಆ.20: ಮುಕ್ತ ವಿವಿಯಲ್ಲಿ ಕಂಪ್ಯೂಟರ್ ಖರೀದಿ ಹಾಗೂ ಇತರೆ ಟೆಂಡರ್ ಪ್ರಕ್ರಿಯೆಯಲ್ಲಿ ನಡೆದಿರುವ ಕೋಟ್ಯಂತರ ರೂ. ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಇಬ್ಬರು ವಿಶ್ರಾಂತ ಕುಲಪತಿಗಳು ಹಾಗೂ ನಾಲ್ಕು ರಿಜಿಸ್ಟ್ರಾರ್‌ಗಳ ವಿರುದ್ಧ ಮೈಸೂರಿನ ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2011-14 ರವರೆಗೆ ಮುಕ್ತ ವಿವಿಯಲ್ಲಿ ಕಂಪ್ಯೂಟರ್ ಖರೀದಿ ಹಾಗೂ ಇತರೆ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಕೆಎಸ್‌ಒಯು ಹಣಕಾಸು ಅಧಿಕಾರಿ ಖಾದರ್ ಪಾಷಾ, ಹಿಂದೆ ಕೆಎಸ್‌ಒಯು ವಿವಿಯಲ್ಲಿ ಕುಲಪತಿಯಯಾಗಿದ್ದ, ಹಾಲಿ ಮೈಸೂರು ವಿವಿಯ ಹಾಲಿ ಕುಲಪತಿಯಾಗಿರುವ ಪ್ರೊ.ಕೆ.ಎಸ್.ರಂಗಪ್ಪ ಹಾಗೂ ಮಾಜಿ ಕುಲಪತಿ ಕೃಷ್ಣನ್ ಸೇರಿದಂತೆ ನಾಲ್ವರು ರಿಜಿಸ್ಟ್ರಾರ್ ಮತ್ತು ಮೂವರು ಮಧ್ಯವರ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತನಿಖೆ ಮಾಡಲು ಈ ಹಿಂದೆ ರಾಜ್ಯಪಾಲರು ಭಕ್ತವತ್ಸಲಂ ನೇತೃತ್ವದಳ ಸಮಿತಿ ರಚಿಸಿತ್ತು. ಭಕ್ತವತ್ಸಲಂ ಸಮಿತಿಯು ಮುಕ್ತ ವಿವಿಯಲ್ಲಿ ಹಣ ದುರುಪಯೋಗವಾಗಿದೆ ಎಂದು ತಮ್ಮ ತನಿಖಾ ವರದಿಯನ್ನು ಉಲ್ಲೇಖಿಸಿ ರಾಜ್ಯಪಾಲರಿಗೆ ಸಲ್ಲಿಸಿದ್ದರು.
ಇದಾದ ಬಳಿಕ ಯಾರೂ ಈ ಹಗರಣ ಕುರಿತು ಚಕಾರ ಎತ್ತಿರಲಿಲ್ಲ. ಆದರೆ, ಇಂದು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.





