ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ: ಮತ್ತೆ ಮೂವರ ಬಂಧನ
ಉಡುಪಿ, ಆ.20: ಕೆಂಜೂರಿನ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬ್ರಹ್ಮಾವರ ಪೊಲೀಸರು ಇಂದು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇದರೊಂದಿಗೆ ಈ ಪ್ರಕರಣದಡಿ ಬಂಧಿಸಲ್ಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಬಂಧಿತರನ್ನು ಸಂದೀಪ್ ಪೂಜಾರಿ (25), ಪ್ರತೀಕ್(19), ಮಂಜೇಶ್ (22) ಎಂದು ಗುರುತಿಸಲಾಗಿದೆ. ಇವರನ್ನು ಇಂದು ಉಡುಪಿ ನ್ಯಾಯಾ ಲಯಕ್ಕೆ ಹಾಜರುಪಡಿಸಲಾಗಿದ್ದು, ಆ.31ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆ.18ರಂದು ಸಂತೆಕಟ್ಟೆಯ ಶ್ರೀಕಾಂತ್ ಕುಲಾಲ್(19), ಪ್ರದೀಪ್(22), ಶಿವಪುರ ಪಾಂಡುಕಲ್ಲುವಿನ ಸುದೀಪ್(24), ಸಂತೆಕಟ್ಟೆಯ ಪ್ರದೀಪ್(19), ರಾಜೇಶ್(21), ಕರ್ಜೆ ಕಡ್ಡಂಗೋಡಿನ ಉಮೇಶ್ ನಾಯ್ಕ (27), ಕುಂಭಾಶಿಯ ಅರವಿಂದ ಕೋಟೇಶ್ವರ(37) ಹಾಗೂ ಆ.19ರಂದು ಕುಚ್ಚೂರು ಬಾದ್ಲ್‌ನ ರಾಘವೇಂದ್ರ ಶೆಟ್ಟಿ(22), ಹೊಂಬಾಡಿ- ಮಂಡಾಡಿ ಗ್ರಾಮದ ಹುಣ್ಸೆಮಕ್ಕಿಯ ಪ್ರಕಾಶ ನಾಯ್ಕ(36), ಹೆಬ್ರಿ ಬಚ್ಚಪ್ಪುವಿನ ಸುಕುಮಾರ್ ಕುಲಾಲ್(22), ಕೊಕ್ಕರ್ಣೆ ಬೆನಗಲ್‌ನ ಸುಕೇಶ ಆಚಾರಿ(32), ಪ್ರಕಾಶ್ ಆಚಾರ್(30), ಪ್ರದೀಪ ಆಚಾರಿ(20), ದಿನೇಶ ಮೊಗವೀರ(28), ಪೇತ್ರಿ ಚೆರ್ಕಾಡಿಯ ಶಾಂತರಾಮ ನಾಯ್ಕ(21), ಮಂಜುನಾಥ ನಾಯ್ಕಿ(20), ಕೊಕ್ಕರ್ಣೆ ಮೊಗವೀರಪೇಟೆಯ ಗಣೇಶ ಮೊಗವೀರ(25), ಶಿವಪುರ ಕೆರೆಬೆಟ್ಟುವಿನ ಸುದೀಪ್ ಶೆಟ್ಟಿ(19) ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬಂಧಿತ ಒಟ್ಟು 21 ಮಂದಿಯಲ್ಲಿ ಏಳು ಮಂದಿಗೆ ಆ.30ರವರೆಗೆ ಹಾಗೂ 15 ಮಂದಿಗೆ ಆ.31ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಷ್ಣುವಧರ್ನ ಮತ್ತು ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ನಿರ್ದೇಶನದಲ್ಲಿ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್ ನೇತೃತ್ವದಲ್ಲಿ ಬ್ರಹ್ಮಾವರ, ಕೋಟ, ಹಿರಿಯಡಕ ಎಸ್ಸೈ ಹಾಗೂ ಸಿಬ್ಬಂದಿಯ ತಂಡ ಈ ಕಾರ್ಯಾಚರಣೆ ನಡೆಸಿದೆ.





