ಮಧ್ಯಪ್ರಾಚ್ಯದ ಸಂಘರ್ಷಕ್ಕೆ ಹಿಲರಿಕ್ಲಿಂಟನ್ ಕ್ಷಮೆಯಾಚಿಸಬೇಕು: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಆಗಸ್ಟ್ 21: ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ಸಂಭವಿಸುವ ಸಾವುಗಳು ಮತ್ತು ದುರಂತಗಳಿಗೆ, ಅಮೆರಿಕ ಮಾಜಿ ರಾಜ್ಯಾಂಗ ಕಾರ್ಯದರ್ಶಿ ಹಾಗೂ ಡೆಮಕ್ರಾಟಿಕ್ ಪಾರ್ಟಿ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಕಾರಣವೆಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆಂದು ವರದಿಯಾಗಿದೆ. ಅಮೆರಿಕದ ರಾಜ್ಯಾಂಗ ಕಾರ್ಯದರ್ಶಿಯಾಗಿದ್ದಾಗ ಫಲಪ್ರದ ರೀತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಅವರಿಂದ ಸಾಧ್ಯವಾಗಿಲ್ಲ. ಇದು ಭಯೋತ್ಪಾದಕ ಸಂಘಟನೆ ಐಸಿಸ್ ಹುಟ್ಟುಪಡೆಯಲು ಕಾರಣವಾಯಿತು ಎಂದು ಟ್ರಂಪ್ ಆರೋಪಿಸಿದ್ದಾರೆ. ಇದಕ್ಕಾಗಿ ಹಿಲರಿ ಕ್ಷಮೆಯಾಚಿಸಬೇಕೆಂದು ಅವರು ಆಗ್ರಹಿಸಿದ್ದಾರೆ. ಈ ನಡುವೆ ಟ್ರಂಪ್‌ರ ಪ್ರಚಾರ ವಿಭಾಗದ ಅಧ್ಯಕ್ಷ ಪಾಲ್ ಮ್ಯಾನ್‌ಫೆಸ್ಟೊ ರಾಜಿನಾಮೆ ನೀಡಿದ್ದನ್ನು ಉದ್ಧರಿಸುತ್ತಾ ಹಿಲರಿ ಕ್ಲಿಂಟನ್ "ಇದು ಟ್ರಂಪ್ ಹಾಗೂ ರಷ್ಯನ್ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರ ನಡುವೆ ಇರುವ ಅನೈತಿಕ ಸಂಬಂಧಕ್ಕೆ ಪುರಾವೆಯಾಗಿದೆ" ಎಂದು ಆರೋಪಿಸಿದ್ದಾರೆಂದು ವರದಿ ತಿಳಿಸಿದೆ.
Next Story





