ಗುಜರಾತ್: ಜಾನುವಾರುಗಳ ಶವ ಎತ್ತದ್ದಕ್ಕೆ ದಲಿತಬಾಲಕನಿಗೆ ಹಲ್ಲೆ

ಭಾವ್ರ(ಗುಜರಾತ್)ಆಗಸ್ಟ್ 21: ದಲಿತರು ಜಾನುವಾರುಗಳ ಶವವನ್ನುಎತ್ತುವುದಿಲ್ಲ ಎಂದು ತೀರ್ಮಾನಿಸಿದ್ದಕ್ಕಾಗಿ ಗುಜರಾತ್‌ನಲ್ಲಿ ದಲಿತ ಬಾಲಕನನ್ನು ಕ್ರೂರವಾಗಿ ಥಳಿಸಿರುವ ಘಟನೆ ವರದಿಯಾಗಿದೆ. ಕಳೆದ ಗುರುವಾರ ಅಹ್ಮದಾಬಾದ್ ನಗರದಿಂದ 40ಕಿ.ಮೀ. ದೂರದಲ್ಲಿರುವ ಭಾವ್ರ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಹತ್ತನೆ ಕ್ಲಾಸಿನಲ್ಲಿ ಕಲಿಯುತ್ತಿರುವ ಬಾಲಕನನ್ನು ಯಾಕಾಗಿ ನೀವು ಜಾನುವಾರುಗಳ ಶವ ಎತ್ತುವುದಿಲ್ಲ ಎಂದು ದುಷ್ಕರ್ಮಿಗಳು ಕೇಳಿದ್ದರು. ಅದಕ್ಕೆ ನಮ್ಮ ಸಮುದಾಯ ಹೇಳಿದ್ದರಿಂದ ನಾವು ಜಾನುವಾರುಗಳ ಶವ ಎತ್ತುವುದಿಲ್ಲ ಎಂದು ಬಾಲಕ ಉತ್ತರಿಸಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ದುಷ್ಕರ್ಮಿಗಳು ಬಾಲಕನನ್ನು ಕ್ರೂರವಾಗಿ ಹೊಡೆದಿದ್ದಾರೆ ಅಲ್ಲದೆ, ಅವನಿಗೆ ಕಲ್ಲೆಸೆದಿದ್ದಾರೆ. ತನ್ನನ್ನು ಸಾಹಿಲ್ ಠಾಕೂರ್, ಸರ್ವರ್ ಪಠಾಣ್ ಎಂಬವರು ಹೊಡೆದಿದ್ದಾರೆಂದು ಬಾಲಕ ಹೇಳಿದ್ದಾನೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ,"ನಮ್ಮ ಮೇಲಾದ ದಾಳಿಯನ್ನು ಪ್ರತಿಭಟಿಸಿ ನಾವು ಸತ್ತ ಜಾನುವಾರುಗಳ ಶವವನ್ನು ಎತ್ತುವುದಿಲ್ಲ. ಇದು ಇನ್ನೂ ಮುಂದುವರಿಯಲಿದೆ" ಎಂದು ಬಾಲಕನ ತಂದೆದಿನೇಶ್ ಪರ್ಮಾರ್ ಹೇಳಿದ್ದಾರೆ. ಆದರೆ ದಲಿತರ ಮೇಲಿನ ಹಲ್ಲೆ ಇನ್ನೂ ಮುಂದುವರಿಯುವ ಆತಂಕವನ್ನು ದಿನೇಶ್ ವ್ಯಕ್ತಪಡಿಸಿದ್ದಾರೆಂದು ವರದಿ ತಿಳಿಸಿದೆ.





