ಪ್ರಧಾನಿಗೆ ಪತ್ರ ಬರೆದು ಸಾವಿಗೆ ಶರಣಾದ ರಾಷ್ಟ್ರೀಯ ಮಟ್ಟದ ಆಟಗಾರ್ತಿ

ಪಟಿಯಾಲ, ಆಗಸ್ಟ್ 21: ರಾಷ್ಟ್ರೀಯ ಮಟ್ಟದ ಮಹಿಳಾ ಹ್ಯಾಂಡ್‌ಬಾಲ್ ಆಟಗಾರ್ತಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟಿಯಾಲದಿಂದ ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಪಟಿಯಾಲದ ಕಾಲ್ಸಾ ಕಾಲೇಜಿನಲ್ಲಿ ಬಿಎ ಎರಡನೆ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಪೂಜಾ(20) ಎಂದು ಗುರುತಿಸಲಾಗಿದೆ. ಕಾಲೇಜು ಆಡಳಿತ ಶುಲ್ಕವಿಲ್ಲದೆ ಹಾಸ್ಟೆಲ್‌ಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದು, ಅವಳ ಆತ್ಮಹತ್ಯೆಗೆ ಕಾರಣವೆನ್ನಲಾಗಿದೆ. "ವಿಷಯ ತಿಳಿದು ಘಟನಾಸ್ಥಳಕ್ಕೆ ಪೊಲೀಸರು ತಲುಪಿದಾಗ ಪೂಜಾಳ ಶವ ಅವಳ ಕೋಣೆಯಲ್ಲಿ ತೂಗಾಡುವ ಸ್ಥಿತಿಯಲ್ಲಿತ್ತು. ವಿದ್ಯಾರ್ಥಿನಿಯನ್ನು ಕೂಡಲೇ ನಾವು ಆಸ್ಪತ್ರೆಗೆ ದಾಖಲಿಸಲಾದರೂ, ಅಲ್ಲಿ ಆಕೆ ಮೃತಳಾಗಿದ್ದಾಳೆಂದು ವೈದ್ಯರು ಘೋಷಿಸಿದರು" ಎಂದು ಪೊಲೀಸ್ ಎಸ್‌ಎಚ್‌ಒ ಗುರ್ಪ್ರೀತ್ ಸಿಂಗ್ ಭಿಂಡರ್ ತಿಳಿಸಿದ್ದಾರೆ. " ಪೂಜಾ ಆತ್ಮಹತ್ಯಾ ಪತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯನ್ನು ಉದ್ದೇಶಿಸಿ ಬರೆದಿದ್ದಾಳೆ. ’ ಹಾಸ್ಟೆಲ್‌ನ ಶುಲ್ಕ ಪಾವತಿಸುವ ಸ್ಥಿತಿಯಲ್ಲಿಲ್ಲದ ಬಡವಳಾಗಿರುವುದಕ್ಕೆ ಅವಳು ಖೇದ ವ್ಯಕ್ತಪಡಿಸಿದ್ದಾಳೆ. ಜೊತೆಗೆ ತನ್ನಂತಹ ಬಡಮಕ್ಕಳಿಗೆ ಶುಲ್ಕರಹಿತವಾಗಿ ಕಲಿಯುವ ವ್ಯವಸ್ಥೆ ಮಾಡಿಕೊಡುವಂತೆ ಪ್ರಧಾನಿಯನ್ನು ಅವಳು ವಿನಂತಿಸಿದ್ದಾಳೆ" ಎಂದು ಪೊಲೀಸಧಿಕಾರಿ ಗುರ್ಪ್ರೀತ್ ಸಿಂಗ್ ಹೇಳಿದ್ದಾರೆ.
ಪೂಜಾ ತನ್ನ ಆತ್ಮಹತ್ಯೆಗೆ ಕಾಲೇಜಿನ ಒಬ್ಬ ಪ್ರೊಫೆಸರ್ ಕಾರಣ ಎಂದು ಸೂಚಿಸಿದ್ದಾಳೆ. ಈ ಪ್ರೊಫೆಸರ್ ಅವಳನ್ನು ಶುಲ್ಕವಿಲ್ಲದೆ ಹಾಸ್ಟೆಲ್‌ಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದರು ಎನ್ನಲಾಗಿದೆ. ಹಾಸ್ಟೆಲ್ ಕೋಣೆ ಲಭಿಸದಿದ್ದುದರಿಂದಾಗಿ ಮನೆಯಿಂದ ಕಾಲೇಜಿಗೆ ಬಂದು ಹೋಗಲು ತುಂಬಾ ಕಷ್ಟ ಪಡುತ್ತಿದ್ದಳು. ಪ್ರತಿ ತಿಂಗಳು ಇದಕ್ಕಾಗಿ ಅವಳು 3,720 ರೂಪಾಯಿ ಖರ್ಚು ಮಾಡಬೇಕಿತ್ತು. ಅವಳ ತಂದೆ ಒಬ್ಬ ಬಡ ತರಕಾರಿ ವ್ಯಾಪಾರಿಯಾಗಿದ್ದರಿಂದ ಇಷ್ಟು ಹಣವನ್ನು ಹೊಂದಿಸಿ ಕೊಡಲು ಅವರಿಂದ ಸಾಧ್ಯವಿರಲಿಲ್ಲ ಎನ್ನಲಾಗಿದೆ.
ಆತ್ಮಹತ್ಯೆ ಪತ್ರವನ್ನು ಪೂಜಾ ರಕ್ತದಲ್ಲಿ ಬರೆದಿದ್ದು, " ಪಿಎಂ ನರೇಂದ್ರ ಮೋದಿ ಸಹಾಯಮಾಡಿ" ಎಂದು ವಿನಂತಿಸಿದ್ದಾಳೆ ಪೂಜಾಳ ತಂದೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದೇ ವೇಳೆ, ಪಾಟಿಯಾಲ ಕಾಲ್ಸಾ ಕಾಲೇಜಿನ ಪ್ರಾಂಶುಪಾಲರಾದ ಧರ್ಮೀಂದರ್ ಸಿಂಗ್ ಉಭಾ ಹೇಳಿಕೆ ನೀಡಿದ್ದು, ಪೂಜಾಳನ್ನು ಆಗಸ್ಟ್ 18ರ ನಂತರ ಶುಲ್ಕರಹಿತವಾಗಿ ಹಾಸ್ಟೆಲ್‌ಗೆ ಸೇರಿಸಿಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆಂದು ವರದಿಯಾಗಿದೆ.







