ಪಂಜಾಬ್ ಗೋರಕ್ಷಾದಳದ ಮುಖ್ಯಸ್ಥನ ಬಂಧನ

ಪಟಿಯಾಲ, ಆ.21: ಸ್ವಯಂ ಘೋಷಿತ ಗೋರಕ್ಷಾದಳದ ಪಂಜಾಬ್ ಘಟಕದ ಮುಖ್ಯಸ್ಥ ಸತೀಶ್ ಕುಮಾರ್ ಎಂಬಾತನನ್ನು ನಿನ್ನೆ ರಾತ್ರಿ ಪಟಿಯಾಲ ಪೊಲೀಸರು ಉತ್ತರ ಪ್ರದೇಶದಿಂದ ಬಂಧಿಸಿದ್ದಾರೆ. ಸತೀಶ್ ವೃಂದಾವನದಲ್ಲಿ ಅಡಗಿಕೊಂಡಿದ್ದನು. ಅಲ್ಲಿಂದ ಆತನನ್ನು ಬಂಧಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.
ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಒಂದರ ಚಾಲಕನಿಗೆ ಸತೀಶ್‌ನ ಸಹವರ್ತಿಗಳು ಥಳಿಸುತ್ತಿದ್ದ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾಗಿತ್ತು. ಅದರ ಆಧಾರದಲ್ಲಿ ಆತನ ವಿರುದ್ಧ ಎಫ್‌ಐಆರ್ ದಾಖಲಾದ ಬಳಿಕ ಸತೀಶ್ ತಲೆ ಮರೆಸಿಕೊಂಡಿದ್ದನು.
ಈ ತಿಂಗಳಾರಂಭದಲ್ಲಿ ಸತೀಶ್ ಮತ್ತು ಆತನ ಇಬ್ಬರು ಸಹಚರರ ವಿರುದ್ಧ ದಂಗೆ, ಸುಲಿಗೆ, ಅನೈಸರ್ಗಿಕ ಲೈಂಗಿಕತೆ ಹಾಗೂ ಇತರ ಆರೋಪಗಳಲ್ಲಿ ಮೊಕದ್ದಮೆ ಹೂಡಲಾಗಿತ್ತು. ಸತೀಶ್‌ನ ಸಹಚರರು ತನ್ನನ್ನು ಸಹ ಅಪಹರಿಸಿ ಅರ್ನೈಸರ್ಗಿಕ ಲೈಂಗಿಕ ದೌರ್ಜನ್ಯ ನಡೆಸಿದ್ದರೆಂದು ಟ್ರಕ್ ಚಾಲಕ ರಾಜ್‌ಪುರದ ಮ್ಯಾಜಿಸ್ಟ್ರೇಟ್‌ರೊಬ್ಬರ ಮುಂದೆ ನೀಡಿದ್ದ ಹೇಳಿಕೆಯೊಂದರಲ್ಲಿ ಆರೋಪಿಸಿದ್ದನು.
ಆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟವಾಗಿ ಹಲವು ತಿಂಗಳುಗಳೇ ಕಳೆದಿವೆ. ಆದರೆ, ನಕಲಿ ಗೋರಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಕರೆ ನೀಡಿದ ಬಳಿಕ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಸ್ವಯಂ ಘೋಷಿತ ಗೋರಕ್ಷಕರು ತನ್ನನ್ನು ಬಂಧನದಲ್ಲಿರಿಸಿ, ದರೋಡೆ ಮಾಡಿ, ಚಿತ್ರಹಿಂಸೆ ನೀಡಿದ್ದರು ಹಾಗೂ ಸತೀಶ್ ತನ್ನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ನಡೆಸಿದ್ದನೆಂದು ಕಳೆದ ವಾರ ಇನ್ನೊಬ್ಬ ಸಂತ್ರಸ್ತ ಪೊಲೀಸರಿಗೆ ದೂರಿದ್ದನು.
ಸತೀಶ್‌ನನ್ನು ಇಂದು ಮ್ಯಾಜಿಸ್ಟ್ರೇಟ್‌ರೊಬ್ಬರ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಕೋರಲಾಗುವುದು.







