ಸಂಘಪರಿವಾರದ ಪೈಶಾಚಿಕ ಕೃತ್ಯ ಆರೋಪ: ಪಾಪ್ಯುಲರ್ ಫ್ರಂಟ್ ಖಂಡನೆ

ಬೆಂಗಳೂರು, ಆ. 21: ಗೋ ಸಾಗಾಟದ ಆರೋಪದಲ್ಲಿ ಸಂಘಪರಿವಾರದ ಗೂಂಡಾಗಳು ಉಡುಪಿಯಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಥಳಿಸಿ ಹತ್ಯೆಗೈದ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಖಂಡಿಸಿದೆ.
ಗೋ ರಕ್ಷಕರ ಮುಖವಾಡ ಧರಿಸಿರುವ ಸಂಘಪರಿವಾರದ ಗೂಂಡಾಗಳ ಈ ಹೇಯ ಕೃತ್ಯದಿಂದಾಗಿ ಕರಾವಳಿಯ ಜನತೆ ಬೆಚ್ಚಿಬೀಳುವಂತಾಗಿದೆ ಎಂದು ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಸಿರ್ ಹಸನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಈ ಘಟನೆಯು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಶಕದ ಹಿಂದೆ ನಡೆದ ಹಾಜಬ್ಬ-ಹಸನಬ್ಬ ಬೆತ್ತಲೆ ಪ್ರಕರಣವನ್ನೂ ಮೀರಿಸುವಂತಿದೆ. ದನ ಸಾಗಾಟದ ನೆಪದಲ್ಲಿ ಅಂದು ಸಂಘಪರಿವಾರದ ಕಾರ್ಯಕರ್ತರು ಹಾಜಬ್ಬ-ಹಸನಬ್ಬ ಎಂಬ ತಂದೆ-ಮಗನನ್ನು ನಡುರಸ್ತೆಯಲ್ಲೇ ಬೆತ್ತಲೆಗೊಳಿಸಿ ವಿಕೃತ ಮನೋಸ್ಥಿತಿಯನ್ನು ಪ್ರದರ್ಶಿಸಿದ್ದರು. ಇದೀಗ ಗೋರಕ್ಷಕರ ವೇಷ ಧರಿಸಿರುವ ಸಂಘಪರಿವಾರವು ದೇಶಾದ್ಯಂತ ಮುಸ್ಲಿಮರು, ದಲಿತರು, ಹಿಂದುಳಿದ ವರ್ಗಗಳ ಮಂದಿಯ ಮೇಲೆ ಕ್ರೂರ ದಾಳಿಯನ್ನು ಸಂಘಟಿಸುತ್ತಿದೆ. ಗುಜರಾತ್, ಜಾರ್ಖಂಡ್, ಹರ್ಯಾಣ ಮೊದಲಾದ ರಾಜ್ಯಗಳು ಸಂಘಪರಿವಾರದ ಈ ಗೋರಕ್ಷಕರ ಅಟ್ಟಹಾಸಕ್ಕೆ ಸಾಕ್ಷಿಯಾಗಿದೆ.
ಕೆಲವು ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಜಯಪುರದಲ್ಲಿಯೂ ದನ ಸಾಗಾಟದ ಆರೋಪ ಹೊರಿಸಿ ದಲಿತ ಯುವಕರ ಮೇಲೆ ಹಲ್ಲೆ ನಡೆಸಲಾಗಿತ್ತು. ಇದರ ಮುಂದುವರಿದ ಭಾಗವಾಗಿಯೇ ಇದೀಗ ಉಡುಪಿಯಲ್ಲಿ ಪ್ರವೀಣ್ ಪೂಜಾರಿ ಎಂಬ ಹಿಂದುಳಿದ ಸಮುದಾಯದ ಯುವಕನ ಹತ್ಯೆ ನಡೆದಿದೆ.
ದನ ಸಾಗಾಟದ ಹೆಸರಿನಲ್ಲಿ ಸಂಘಪರಿವಾರವು ಈ ಹಿಂದೆ ಹಲವಾರು ಕ್ರೂರ ದಾಳಿಗಳನ್ನು ನಡೆಸಿದ್ದು, ಪೊಲೀಸ್ ಇಲಾಖೆಯು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದನ್ನು ದಾಖಲೆಗಳೇ ತಿಳಿಸುತ್ತವೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಸಂಘಪರಿವಾರದ ಈ ಅಮಾನುಷ ಕೃತ್ಯಕ್ಕೆ ಸಂಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.
ಕೇವಲ ಹೇಳಿಕೆಗಳಿಂದ ಈ ಕುಖ್ಯಾತ ಗೋರಕ್ಷಕರನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂಬ ಮಾತನ್ನೂ ಪ್ರಧಾನಿ ಮೋದಿಯವರು ಗಮನ ದಲ್ಲಿಡಬೇಕಾಗುತ್ತದೆ. ಜೊತೆಗೆ ಹಿಂದುಳಿದ ಸಮುದಾಯದ ನಾಯಕರೂ ಸಂಘಪರಿವಾರದ ದುಷ್ಟ ಯೋಜನೆಗಳ ಕುರಿತು ತಮ್ಮ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕೆಂದು ಯಾಸಿರ್ ಹಸನ್ ತಿಳಿಸಿದ್ದಾರೆ.







