ಬ್ರೆಝಿಲ್ ನಾಯಕತ್ವ ತ್ಯಜಿಸಿದ ನೇಮರ್

ರಿಯೋ ಡಿ ಜನೈರೊ, ಆ.21: ಒಲಿಂಪಿಕ್ಸ್‌ನಲ್ಲಿ ಬ್ರೆಝಿಲ್‌ಗೆ ಚೊಚ್ಚಲ ಚಿನ್ನದ ಪದಕ ಗೆಲ್ಲಲು ಕಾರಣರಾಗಿರುವ ಬಾರ್ಸಿಲೋನದ ಸ್ಟಾರ್ ಆಟಗಾರ ನೇಮರ್ ಬ್ರೆಝಿಲ್ ಫುಟ್ಬಾಲ್ ತಂಡದ ನಾಯಕತ್ವವನ್ನು ತ್ಯಜಿಸಿದ್ದಾರೆ.
‘‘ಇಂದು ನಾನು ಚಾಂಪಿಯನ್ ಆಗಿರುವೆ. ನನ್ನ ನಾಯಕತ್ವವನ್ನು ಬೇರೆಯವರಿಗೆ ಹಸ್ತಾಂತರಿಸುವೆ. ತಂಡವನ್ನು ಮುನ್ನಡೆಸುವುದು ಒಂದು ಗೌರವ. ಆದರೆ, ಇಂದಿನಿಂದ ನಾನು ನಾಯಕನಾಗಿ ಮುಂದುವರಿಯುವುದಿಲ್ಲ ಎಂದು ಜರ್ಮನಿ ವಿರುದ್ಧ ಒಲಿಂಪಿಕ್ಸ್ ಫೈನಲ್ ಪಂದ್ಯವನ್ನು ಪೆನಾಲ್ಟಿ ಶೂಟ್ಟ್‌ನಲ್ಲಿ 5-4 ಅಂತರದಿಂದ ಗೆದ್ದುಕೊಂಡ ಬಳಿಕ ಸ್ಪೋರ್ಟ್ ಟಿವಿಗೆ ನೇಮರ್ ತಿಳಿಸಿದ್ದಾರೆ.
ಕೊಪಾ ಅಮೆರಿಕ ಟೂರ್ನಿಯಲ್ಲಿ ಬ್ರೆಝಿಲ್ ತಂಡ ಗ್ರೂಪ್ ಹಂತದಲ್ಲೇ ಹೊರ ನಡೆದ ಕಾರಣ ಕೋಚ್ ಡುಂಗಾರನ್ನು ಉಚ್ಚಾಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೆ.1 ರಂದು ನಡೆಯಲಿರುವ ಈಕ್ವೆಡಾರ್ ವಿರುದ್ಧದ 2018ರ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಹೊಸ ಕೋಚ್ ಟೇಟ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
2014ರ ಫಿಫಾ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಬ್ರೆಝಿಲ್ ತಂಡ ಜರ್ಮನಿಯ ವಿರುದ್ಧ 7-1 ಗೋಲುಗಳ ಅಂತರದಿಂದ ಹೀನಾಯವಾಗಿ ಸೋತ ಬಳಿಕ ಆಗಿನ ಕೋಚ್ ಡುಂಗಾ ಅವರು ನೇಮರ್‌ರನ್ನು ನಾಯಕನನ್ನಾಗಿ ನೇಮಿಸಿದ್ದರು. ವಿಶ್ವಕಪ್‌ನಲ್ಲಿ ಕೊಲಂಬೊ ವಿರುದ್ಧದ ಪಂದ್ಯದ ವೇಳೆ ಬೆನ್ನು ಮೂಳೆ ಮುರಿದ ಕಾರಣ ಅವರು ಕೆಲವು ಪಂದ್ಯವನ್ನು ತಪ್ಪಿಸಿಕೊಂಡಿದ್ದರು.







