ಗಂಗೆಗೆ ಮುಳುವಾಗಿರುವ ಭಕ್ತರು
ದೇಶದಲ್ಲಿ ನದಿಗಳನ್ನು ದೇವತೆಯೆಂದು ಪೂಜಿಸುವವರೇ ಇಂದು ನದಿಗಳಿಗೆ ಮಾರಕವಾಗಿ ಪರಿಣಮಿಸಿರುವುದು ಆತಂಕಕಾರಿ ವಿಷಯವಾಗಿದೆ. ಹಲವು ಸಾವಿರ ಕೋಟಿ ರೂಪಾಯಿಗಳನ್ನು ಸುರಿದ ಬಳಿಕ ‘ಗಂಗೆಯನ್ನು ಶುದ್ಧಿಗೊಳಿಸುವುದು ಸಾಧ್ಯವೇ ಇಲ್ಲ’ ಎಂಬ ತೀರ್ಮಾನಕ್ಕೆ ಪರಿಸರ ತಜ್ಞರು, ವಿಜ್ಞಾನಿಗಳು ಬಂದಿದ್ದಾರೆ. ಯಾಕೆಂದರೆ ಗಂಗೆಯ ಶುದ್ಧೀಕರಣದಲ್ಲಿ ಅತಿ ದೊಡ್ಡ ಅಡ್ಡಿಯಾಗಿರುವವರೇ ಗಂಗೆಯ ಭಕ್ತರು. ಗಂಗೆಯನ್ನು ಬಹುಪಾಲು ಕಳಂಕಗೊಳಿಸಿರುವ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಪ್ರತಿದಿನ ಈ ಗಂಗೆಯಲ್ಲಿ ತೇಲುತ್ತಿರುವ ಶವಗಳೆಲ್ಲ ಗಂಗೆಯನ್ನು ಪೂಜಿಸುತ್ತಿರುವವರ ಕೊಡುಗೆಯೇ ಆಗಿರುವುದು ಈ ದೇಶದ ಧಾರ್ಮಿಕ ದುರಂತವೇ ಸರಿ. ಅರೆಬೆಂದ ದೇಹಗಳನ್ನು ನದಿಗಳಿಗೆ ಎಸೆಯುವ ಮನುಷ್ಯ ಯಾವ ರೀತಿಯಲ್ಲೂ ಸಂಸ್ಕೃತಿ, ಸಂಸ್ಕಾರದ ಕುರಿತಂತೆ ಮಾತನಾಡುವುದಕ್ಕೆ ಅನರ್ಹ. ಮನುಷ್ಯತ್ವದ ಘನತೆಯ ಅರಿವಿಲ್ಲದವನು ಮಾತ್ರ ಸಂಸ್ಕಾರದ ನೆಪದಲ್ಲಿ ಹರಿಯುವ ನದಿಗಳಿಗೆ ಮೃತ ದೇಹಗಳ ಎಸೆಯಸಬಲ್ಲ. ಹಾಗೆಯೇ, ನದಿಯನ್ನು ದೇವತೆಯೆಂದು ಯಾರು ಆರಾಸುತ್ತಾರೆಯೋ ಅವರು ಎಂದಿಗೂ ಆ ದೇವತೆಗೆ ಕಳಂಕ ತರಲಾರರು.
ಭಾರತ ಮಾತೆಯ ನಗ್ನ ಚಿತ್ರವನ್ನು ಬಿಡಿಸಿದರೆಂದು ಕೂಗಾಡುವ ಜನರು ದೇವತೆಯೆಂದು ಬಗೆಯುವ ನದಿಗೆ ಧಾರ್ಮಿಕ ವಿಯ ಹೆಸರಿನಲ್ಲಿ ಮೃತದೇಹಗಳನ್ನು ಎಸೆಯುವ, ಸರ್ವ ಕಲ್ಮಶಗಳನ್ನು ತೇಲಿ ಬಿಡುವ ಕೃತ್ಯಗಳ ಕುರಿತಂತೆ ವೌನತಾಳುತ್ತಾರೆ.. ದೇವತೆಯೆನ್ನುವ ಕಾರಣಕ್ಕಾಗಿ ಬಿಡಿ, ಕನಿಷ್ಠ ಒಂದು ನದಿಯ ಹಿರಿಮೆಯನ್ನು ಅರಿತುಕೊಂಡ ಮನುಷ್ಯ ಇಂತಹ ಕೃತ್ಯವನ್ನು ಎಸಗಲಾರ. ಅಕಾರಕ್ಕೆ ಬಂದ ಆರಂಭದಲ್ಲಿ ಗಂಗಾನದಿಯ ಶುದ್ಧೀಕರಣದ ಹೆಸರಿನಲ್ಲಿ ಸರಕಾರ ಸುದ್ದಿ ಮಾಡಿತು. ಸಚಿವೆ ಉಮಾಭಾರತಿ ಗಂಗೆಯ ಶುದ್ಧಿಗಾಗಿ ಹುಟ್ಟಿಕೊಂಡ ಕಲಿಯುಗದ ಭಗೀರತಿ ಎನಿಸಿಕೊಂಡರು. ಗಂಗೆಗೆ ಉಗುಳಿದರೆ ದಂಡ ಎಂದೆಲ್ಲ ಮಾಧ್ಯಮಗಳಲ್ಲಿ ಸರಕಾರ ಗದ್ದಲ ಎಬ್ಬಿಸಿತು. ಆದರೆ, ಗಂಗೆಯಲ್ಲಿ ತೇಲುವ ಹೆಣಗಳಿಗೆ ಕಡಿವಾಣ ಹಾಕಲು ಸರಕಾರಕ್ಕೆ ಈವರೆಗೆ ಸಾಧ್ಯವಾಗಲಿಲ್ಲ. ಗಂಗೆಯ ತಟದಲ್ಲಿರುವ ಎಲ್ಲ ಕ್ಷೇತ್ರಗಳಿಗೆ ನೋಟಿಸು ಜಾರಿ ಮಾಡಿ, ಗಂಗೆಯನ್ನು ಕಳಂಕಗೊಳಿಸಿದರೆ ದಂಡ ವಿಸುವ ಎಚ್ಚರಿಕೆ ನೀಡಿದ್ದಿದ್ದರೆ ಗಂಗೆ ಒಂದಿಷ್ಟಾದರೂ ಉಸಿರು ಬಿಡುತ್ತಿದ್ದಳು. ಆದರೆ ಸಂಸ್ಕೃತಿಯ ವಕ್ತಾರನ ಮುಖವಾಡ ಹಾಕಿಕೊಂಡಿರುವ ಸರಕಾರಕ್ಕೆ ಅದು ಸಾಧ್ಯವಿಲ್ಲದ ಮಾತಾಗಿದೆ. ಗಂಗೆಗಿಂತ ಭಕ್ತರ ಮತಗಳೇ ಮುಖ್ಯ ಎನ್ನುವುದನ್ನು ಬಿಜೆಪಿ ಅರಿತುಕೊಂಡಿದೆ. ಗೋವಿನ ಹೆಸರಿನಲ್ಲಿ ಮನುಷ್ಯನನ್ನು ಕೊಂದು ಹಾಕುವ ರಾಕ್ಷಸರಿರುವ ನೆಲದಲ್ಲಿ, ನದಿಯಲ್ಲಿ ಹೆಣಗಳನ್ನು ಎಸೆಯುವುದು ದೊಡ್ಡ ವಿಷಯ ಅನ್ನಿಸಿಲ್ಲ ನಮ್ಮ ಮಾಧ್ಯಮಗಳಿಗೆ.
ಗಂಗೆಯ ಶುದ್ಧೀಕರಣ ಸಾಧ್ಯವಿಲ್ಲದ ಮಾತು ಎಂದು ಅದನ್ನು ಬಿಟ್ಟು ಬಿಡೋಣ. ಕನಿಷ್ಠ ಉಳಿದ ನದಿಗಳನ್ನಾದರೂ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಆದರೆ ದುರದೃಷ್ಟವಶಾತ್ ಉಳಿದ ನದಿಗಳಿಗೂ ಈ ಸಂಸ್ಕೃತಿ ವಕ್ತಾರರೇ ಮತ್ತೆ ಮುಳುವಾಗಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿವೆ.ರವಿಶಂಕರ್ ಗುರೂಜಿ ಈ ದೇಶದ ಸ್ವಯಂಘೋಷಿತ ಸಂಸ್ಕೃತಿ ರಕ್ಷಕ. ವಿದೇಶಗಳಲ್ಲೂ ಲಕ್ಷಾಂತರ ಭಕ್ತರನ್ನು ಹೊಂದಿರುವ ಸತ್ಸಂಗಿ. ಈ ದೇಶದ ನದಿ, ವನ, ಮರ, ಗಿಡಗಳ ಕುರಿತಂತೆ ಗಂಟೆಗಟ್ಟಲೆ ಭಾಷಣ ಮಾಡಬಲ್ಲ ಗುರು. ಈ ದೇಶದ ಸಂಸ್ಕೃತಿಯ ಹೆಸರಿನಲ್ಲೇ ಕೋಟಿಗಟ್ಟಲೆಹಣವನ್ನು ದೋಚಿರುವ ರವಿಶಂಕರ್ ಗುರೂಜಿ ಇತ್ತೀಚೆಗೆ ವಿಶ್ವಸಂಸ್ಕೃತಿ ಉತ್ಸವವೊಂದನ್ನು ಯುಮುನಾ ನದಿಯ ತಟದಲ್ಲಿ ಮಾಡಿದರು. ಇದೀಗ ಈ ರವಿಶಂಕರ್ ಗುರೂಜಿಯ ನಿಜವಾದ ಸಂಸ್ಕೃತಿ ಏನು ಎನ್ನುವುದು ಬಹಿರಂಗವಾಗಿದೆ. ವಿಶ್ವಸಂಸ್ಕೃತಿಯಿಂದ ಈ ದೇಶದ ಸಂಸ್ಕೃತಿ ಎಷ್ಟರಮಟ್ಟಿಗೆ ವಿಶ್ವಕ್ಕೆ ಪರಿಚಯವಾಯಿತು ಎನ್ನುವುದನ್ನು ಗುರೂಜಿಯವರೇ ವಿವರಿಸಬೇಕು. ಆದರೆ, ಯಮುನಾನದಿಯ ಪಾತ್ರವು ಕೇವಲ ಹಾನಿಗೊಂಡಿರುವುದಲ್ಲ, ಸಂಪೂರ್ಣ ನಾಶವಾಗಿದೆ ಎಂದು ತಜ್ಞರ ಗುಂಪೊಂದು ಪರಿಸರ ನ್ಯಾಯಾಲಯಕ್ಕೆ ಹೇಳಿದೆ. ತನ್ನ 47 ಪುಟಗಳ ವರದಿಯಲ್ಲಿ, ಯುಮುನಾನದಿಯ ದಂಡೆಯ ಆಸುಪಾಸಿನ ಸಸ್ಯ ಸಂಕುಲ ಸಂಪೂರ್ಣ ನಾಶವಾಗಿದೆ ಎಂದು ಅದು ಹೇಳಿದೆ. ಸದ್ಯ ಅದನ್ನು ಯಾವ ಹಣದಿಂದಲೂ ತುಂಬುವುದಕ್ಕೆ ಸಾಧ್ಯವಿಲ್ಲ. ರವಿಶಂಕರ್ ಅವರ ಸಂಸ್ಕೃತಿ ಉತ್ಸವ ಪರೋಕ್ಷವಾಗಿ ಒಂದು ಉದ್ಯಮವಾಗಿತ್ತು ಅದರ ಹೆಸರಿನಲ್ಲಿ ಅವರು ಅಪಾರ ಹಣವನ್ನು ವಿವಿಧ ಮೂಲಗಳಿಂದ ದಾನ, ಅನುದಾನಗಳ ರೂಪದಲ್ಲಿ ದೋಚಿದ್ದಾರೆ.
ಕನಿಷ್ಠ್ಟ ತನ್ನಿಂದಾದ ಪರಿಸರ ನಾಶಕ್ಕೆ ಪಶ್ಚಾತ್ತಾಪವನ್ನು, ವಿಷಾದವನ್ನು ವ್ಯಕ್ತಪಡಿಸುವುದು ರವಿಶಂಕರ್ ಕರ್ತವ್ಯವಾಗಿತ್ತು. ಅಲ್ಲಿ ನಿಜಕ್ಕೂ ಪರಿಸರಕ್ಕೆ ಧಕ್ಕೆಯಾಗಿದ್ದರೆ ದಂಡವನ್ನು ಪಾವತಿಸುವುದಾಗಿ ಒಪ್ಪಿಕೊಳ್ಳಬೇಕಾಗಿತ್ತು. ಯಾಕೆಂದರೆ ಯುಮುನೆಯ ನಾಶವೆಂದರೆ, ಪರೋಕ್ಷವಾಗಿ ಈ ನೆಲದ ಸಂಸ್ಕೃತಿಯ ನಾಶವೇ ಆಗಿದೆ. ಆದರೆ ರವಿಶಂಕರ್‌ರ ಸಂಸ್ಕೃತಿಯೇ ಬೇರೆ ಎನ್ನುವುದು ಇದರಿಂದ ಸಾಬೀತಾಗಿದೆ. ಅವರಿಗೆ ಯುಮುನೆಗಿಂತ ಮುಖ್ಯ ಹಣವೇ ಆಗಿದೆ. ಹಣವೇ ಇವರ ಸಂಸ್ಕೃತಿ. ಆದುದರಿಂದಲೇ ದಂಡ ಪಾವತಿಸುವುದರಿಂದ ನುಣುಚಿಕೊಳ್ಳಲು ಹವಣಿಸುತ್ತಿದ್ದಾರೆ. ಅಲ್ಲದೆ ತನ್ನ ಮೇಲಿನ ಆರೋಪವನ್ನು ಸಾರಾಸಗಟಾಗಿ ನಿರಾಕರಿಸುತ್ತಿದ್ದಾರೆ.
ಯುಮುನಾದಂಡೆಯಲ್ಲಿ ಇಂತಹದೊಂದು ಉತ್ಸವವನ್ನು ಮಾಡಿದರೆ ಈ ಭಾಗದ ನದೀಪಾತ್ರಕ್ಕೆ ಧಕ್ಕೆಯಿದೆ ಎಂದು ಮೊದಲೇ ಜನರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಂದರೆ ಈ ಅನಾಹುತ ರವಿಶಂಕರ್‌ಗೆ ಮೊದಲೇ ಗೊತ್ತಿತ್ತು. ಆದರೂ ಅವರು ತನ್ನ ಉತ್ಸವದಿಂದ ಹಿಂದೆ ಸರಿಯಲಿಲ್ಲ. ಸ್ಥಳವನ್ನು ಬದಲಾಯಿಸಲಿಲ್ಲ. ಇಂತಹ ಕಪಟ ಸಂಸ್ಕೃತಿ ವಕ್ತಾರರಿಂದಲೇ ನಮ್ಮ ನದಿ, ಪರಿಸರ ಇಂದು ಆತಂಕವನ್ನು ಎದುರಿಸುತ್ತಿದೆ. ಇದರ ಜೊತೆ ಜೊತೆಗೇ ನರೇಂದ್ರ ಮೋದಿ ಜಪಿಸುತ್ತಿರುವ ಅಭಿವೃದ್ಧಿ ಮಂತ್ರವೂ ನದಿಗಳಿಗೆ ಕಂಟಕಪ್ರಾಯವಾಗಿದೆ. ಗಂಗಾ ನದಿ ಒಂದೆಡೆ ಭಕ್ತರ ಕಲ್ಮಶಗಳಿಂದ ನಾಶಗೊಳ್ಳುತ್ತಿದ್ದರೆ ಮಗದೊಂದೆಡೆ ಕೈಗಾರಿಕೆಗಳ ತ್ಯಾಜ್ಯಗಳಿಂದ ನಾಶವಾಗುತ್ತಿದೆ. ಅಂದರೆ ನದಿಗಳನ್ನು ತಾಯಿ, ದೇವತೆ ಎಂದು ಕರೆಯುತ್ತಲೇ ನಾವು ಅವುಗಳ ಮೇಲೆ ಅತ್ಯಾಚಾರವೆಸಗುತ್ತಿದ್ದೇವೆ. ಬಹುಶಃ ಈ ಕಾರಣದಿಂದಲೇ ನದಿಗಳು ಸೇರಿದಂತೆ ಇಡೀ ಪ್ರಕೃತಿ ಬೇರೆ ಬೇರೆ ರೂಪಗಳಲ್ಲಿ ಸೇಡು ತೀರಿಸಿಕೊಳ್ಳುತ್ತಿದೆೆ. ಉತ್ತರಾಖಂಡದಲ್ಲಿ ಈ ಹಿಂದೆ ಸಂಭವಿಸಿದ ಬೃಹತ್ ಪ್ರವಾಹಕ್ಕೂ ಮನುಷ್ಯ ನದಿಗಳ ಮೇಲೆ ಎಸಗಿದ ಅನ್ಯಾಯವೇ ಕಾರಣ. ಇಂದು ನಾವು ನದಿಗಳನ್ನು ಅವುಗಳ ಭಕ್ತರಿಂದಲೇ ರಕ್ಷಿಸಬೇಕಾದಂತಹ ಸನ್ನಿವೇಶ ನಿರ್ಮಾಣವಾಗಿರುವುದು ಈ ದೇಶದ ಒಂದು ವರ್ಗದ ಜನರ ಕಪಟತನಕ್ಕೆ, ನಕಲಿ ಸಂಸ್ಕೃತಿ ಪ್ರೀತಿಗೆ ಹಿಡಿದ ಕನ್ನಡಿಯಾಗಿದೆ.
ಈ ಭಕ್ತರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದಂತಹ ಬಹುದೊಡ್ಡ ಹೊಣೆಗಾರಿಕೆ ನಮ್ಮ ಸರಕಾರದ ಮೇಲಿದೆ. ನರೇಂದ್ರ ಮೋದಿ ಈಗಾಗಲೇ ನಕಲಿ ಗೋರಕ್ಷಕರ ಬಗ್ಗೆ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಇದೀಗ ಈ ನಕಲಿ ಸಂಸ್ಕೃತಿ ಪೋಷಕರ ಕುರಿತಂತೆ ತನ್ನ ಧ್ವನಿಯನ್ನು ಎತ್ತಿ ನದಿ ಸಂಕುಲಗಳ ಕುರಿತಂತೆ ಜನರಲ್ಲಿ ಜಾಗೃತಿಯನ್ನು ಬಿತ್ತಬೇಕಾಗಿದೆ.







