ರಿಯೋ ಒಲಿಂಪಿಕ್ಸ್: ಎರಡೇ ಪದಕದೊಂದಿಗೆ ಭಾರತದ ಅಭಿಯಾನ ಅಂತ್ಯ
ರಿಯೋ ಡಿಜನೈರೊ, ಆ.21: ರಿಯೋ ಒಲಿಂಪಿಕ್ಸ್‌ನಲ್ಲಿ ಕೇವಲ ಎರಡು ಪದಕಗಳನ್ನು ಜಯಿಸುವುದರೊಂದಿಗೆ ಭಾರತ ತನ್ನ ಅಭಿಯಾನವನ್ನು ಕೊನೆಗೊಳಿಸಿದೆ.
ಕೂಟದ ಅಂತ್ಯದ ವೇಳೆಗೆ ಪಿ.ವಿ. ಸಿಂಧು, ಸಾಕ್ಷಿ ಮಲಿಕ್ ಭಾರತದ ಪದಕದ ಬರ ನಿವಾರಿಸಿದರು. ಜಿಮ್ನಾಸ್ಟಿಕ್‌ನಲ್ಲಿ ದೀಪಾ ಕರ್ಮಾಕರ್ ಉತ್ತಮ ಪ್ರದರ್ಶನ ನೀಡಿದ್ದರೂ ಪದಕ ಗೆಲ್ಲಲಿಲ್ಲ. ಆದರೆ, ದೇಶದ ಜನತೆಯ ಮನ ಗೆದ್ದರು. ಬರಪೀಡಿತ ಮಹಾರಾಷ್ಟ್ರದ ಸತಾರದ ರೈತನ ಮಗಳು ಲಲಿತಾ ಬಾಬರ್ 32 ವರ್ಷಗಳ ಬಳಿಕ ಟ್ರಾಕ್ ಸ್ಪರ್ಧೆಯಲ್ಲಿ ಫೈನಲ್‌ಗೆ ತಲುಪಿ 10ನೆ ಸ್ಥಾನ ಪಡೆದು ಮಿಂಚಿದರು.
ಗಾಲ್ಫ್‌ನಲ್ಲಿ ಮೊದಲ ಬಾರಿ ಸ್ಪರ್ಧಿಸಿದ್ದ 18 ರ ಹರೆಯದ ಕರ್ನಾಟಕದ ಅದಿತಿ ಅಶೋಕ್ ಪದಕದ ನಿರೀಕ್ಷೆ ಮೂಡಿಸಿದ್ದರೂ ಅಂತಿಮವಾಗಿ 41ನೆ ಸ್ಥಾನ ಪಡೆದರು. ಕುಸ್ತಿಪಟು ನರಸಿಂಗ್ ಯಾದವ್ ವಿರುದ್ಧ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ತೀರ್ಪು ಹೊರ ಬಂದ ಹಿನ್ನೆಲೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅನರ್ಹರಾದರು.
ಭಾರತದ ಪುರುಷರ ಹಾಕಿ ತಂಡ 36 ವರ್ಷಗಳ ಬಳಿಕ ಕ್ವಾರ್ಟರ್‌ಫೈನಲ್ ಪ್ರವೇಶಿಸಿತು. ಆದರೆ, ಬೆಲ್ಜಿಯಂ ವಿರುದ್ಧ 1-3 ರಿಂದ ಸೋಲುವುದರೊಂದಿಗೆ ಮುಂದಿನ ಸುತ್ತಿಗೇರಲು ವಿಫಲಗೊಂಡಿತು. ಪದಕ ನಿರೀಕ್ಷೆ ಮೂಡಿಸಿದ್ದ ಶೂಟರ್‌ಗಳು ವಿಫಲರಾದರು. ಬಾಕ್ಸಿಂಗ್‌ನಲ್ಲಿ ವಿಕಾಸ್ ಕೃಷ್ಣನ್ ಹಾಗೂ ಮನೋಜ್ ಕುಮಾರ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುಂಡರು.
ಕುಸ್ತಿ, ಜಿಮ್ನಾಸ್ಟಿಕ್, ಬ್ಯಾಡ್ಮಿಂಟನ್, ರೋವಿಂಗ್‌ನಲ್ಲಿ ಅಚ್ಚರಿ ಪ್ರದರ್ಶನ ಕಂಡು ಬಂದಿದೆ. ಆರ್ಚರಿ, ಅಥ್ಲೆಟಿಕ್ಸ್, ಬಾಕ್ಸಿಂಗ್, ಹಾಕಿ, ಗಾಲ್ಫ್, ಜುಡೋ, ಶೂಟಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನಿಸ್, ಟೆನಿಸ್, ವೇಟ್‌ಲಿಫ್ಟಿಂಗ್‌ನಲ್ಲಿ ಕಳಪೆ ಪ್ರದರ್ಶನ ಕಂಡುಬಂತು.







