ಕಾರ್ಪೊರೇಟರ್ ಕವಿತಾ ಸನಿಲ್‌ರಿಂದ ಅಷ್ಟಮಿ ಕೊಡುಗೆ!
ಎರಡೂವರೆ ವರ್ಷದ ಗೌರವಧನದಲ್ಲಿ ಅಕ್ಕಿ, ತೆಂಗಿನಕಾಯಿ ವಿತರಣೆ

ಮಂಗಳೂರು, ಆ.22: ಮಂಗಳೂರು ಮಹಾನಗರ ಪಾಲಿಕೆಯ ಪಚ್ಚನಾಡಿ ವಾರ್ಡ್‌ನ ಕಾರ್ಪೊರೇಟರ್ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆಯೂ ಆಗಿರುವ ಕವಿತಾ ಸನಿಲ್ ವಾರ್ಡ್‌ನ ಜನರಿಗೆ ಅಷ್ಟಮಿ ಕೊಡುಗೆ ನೀಡಿದ್ದಾರೆ. ತಮ್ಮ ವಾರ್ಡ್ 1,000 ಜನರಿಗೆ ತಲಾ 5 ಕೆ.ಜಿ. ಅಕ್ಕಿ ಹಾಕೂ ತೆಂಗಿನಕಾಯಿ ವಿತರಿಸಿದ್ದಾರೆ.
ಈ ಕೊಡುಗೆಯ ವಿಶೇಷತೆಯೆಂದರೆ ಕಾರ್ಪೊರೇಟರ್ ಆಗಿ ಆಯ್ಕೆಯಾದ ಬಳಿಕ ಕಳೆದ ಸುಮಾರು ಎರಡೂವರೆ ವರ್ಷಗಳಲ್ಲಿ ತನಗೆ ದೊರಕಿದ ಗೌರವಧನವನ್ನು ಸ್ವಂತಕ್ಕೆ ಬಳಸದೆ ಹಾಗೇ ಇರಿಸಿ ಆ ಹಣಕ್ಕೆ ಮತ್ತಷ್ಟು ತನ್ನ ಕೈಯಿಂದ ಹಣವನ್ನು ಸೇರಿಸಿ ಸುಮಾರು ಒಂದೂವರೆ ಲಕ್ಷ ರೂ. ವೌಲ್ಯದ ಅಕ್ಕಿಯನ್ನು ರವಿವಾರ ನಡೆದ ಸರಳ ಕಾರ್ಯಕ್ರಮವೊಂದರಲ್ಲಿ ತಮ್ಮ ವಾರ್ಡ್‌ನ ಕುಟುಂಬಗಳಿಗೆ ವಿತರಿಸಿದರು.
ಕಾರ್ಪೊರೇಟರ್‌ಗಳಿಗೆ ಇದೀಗ ಗೌರವಧನ ಹೆಚ್ಚಳವಾಗಲಿದ್ದು, ತಿಂಗಳಿಗೆ ತಲಾ 10,000 ರೂ. ದೊರಕಲಿದೆ. ಅದನ್ನು ತನ್ನ ವಾರ್ಡ್‌ನ ಬಡ ಹೆಣ್ಣುಮಕ್ಕಳ ಮದುವೆ ವಿನಿಯೋಗಿಸಲು ನಿರ್ಧರಿಸಿರುವುದಾಗಿ ಕವಿತಾ ಸನಿಲ್ ಕಾರ್ಯಕ್ರಮದಲ್ಲಿ ಪ್ರಕಟಿಸಿದರು.
ರವಿವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಮೊಯ್ದಿನ್ ಬಾವಾ, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ ಉಪಸ್ಥಿತರಿದ್ದರು.





