ಮರುಭೂಮಿಯಲ್ಲಿ ಕಾರು ಅಪಘಾತ: ಸೌದಿ ಪ್ರಜೆಯನ್ನು ರಕ್ಷಿಸಿದ ಭಾರತೀಯ

ರಿಯಾದ್,ಆ.22: ನಿರ್ಜನ ಮರುಭೂಮಿಯಲ್ಲಿ ಅಪಘಾತಕ್ಕೊಳಗಾಗಿ ಕಾರಿನೊಳಗೆ ಸಿಕ್ಕಿಬಿದ್ದಿದ್ದ ಸೌದಿ ಪ್ರಜೆಯನ್ನು ರಕ್ಷಿಸಿದ ಕೇರಳದ ಯುವಕನನ್ನು ಸೌದಿ ಪೊಲೀಸರು ಶ್ಲಾಘಿಸಿದ್ದಾರೆ ಎಂದು ವರದಿಯಾಗಿದೆ.ಕೋಝಿಕ್ಕೋಡ್‌ನ ನೌಷಾದ್ ಎಂಬವರು ಅಪಘಾತದಿಂದಾಗಿ ಕಾರಿನೊಳಗೆ ಸಿಲುಕಿದ್ದ ಸೌದಿ ಪ್ರಜೆಯನ್ನು ರಕ್ಷಿಸಿದ ವ್ಯಕ್ತಿಯಾಗಿದ್ದು, ದಮಾ ಮ್ ನಿಂದ ಹುಫೂಫ್ ಮಾರ್ಗವಾಗಿ ಹರದ್ ಹೈವೆಯಲ್ಲಿಇ ಶನಿವಾರ ಅಪಘಾತ ಸಂಭವಿಸಿತ್ತು. ನೌಷಾದ್ ಅಲ್‌ಮರಾಯಿ ಡೈರಿಕಂಪೆನಿಯ ಟ್ರೈಲರ್ ಡ್ರೈವರ್ ಆಗಿದ್ದು. ಕುವೈಟ್ ಗಡಿಭಾಗದ ಖಫ್ಜದಲ್ಲಿ ಸಾಮಗ್ರಿಗಳನ್ನು ಅನ್‌ಲೋಡ್ ಮಾಡಿ ಮರಳಿ ಬರುತ್ತಿದ್ದಾಗ ನಿರ್ಜನ ಪ್ರದೇಶದಲ್ಲಿ ರಸ್ತೆಯಿಂದ ಸ್ವಲ್ಪ ದೂರದಲ್ಲಿ ಮರಳು ಗುಡ್ಡೆಯಲ್ಲಿ ಅಪಘಾತಕ್ಕೊಳಗಾಗಿದ್ದ ಕಾರಿನ ಪಾರ್ಕ್‌ಲೈಟ್ ನೋಡಿ ಅದರೊಳಗೆ ಯಾರೋ ಇದ್ದಾರೆಂದು ಅನಿಸಿದ್ದರಿಂದ ಕೂಡಲೆ ಟ್ರೈಲರ್ ನಿಲ್ಲಿಸಿ ಅತ್ತ ಧಾವಿಸಿದ್ದರು. ರಸ್ತೆಯಿಂದ ದೂರ ಎಸೆಯಲ್ಪಟ್ಟಿದ್ದ ಕಾರಿನಲ್ಲಿ ಸೀಟು ಮತ್ತು ಡ್ಯಾಶ್ ಬೋರ್ಡ್‌ನ ನಡುವೆ ಸಿಲುಕಿಕೊಂಡಿದ್ದ ವ್ಯಕ್ತಿಯೊಬ್ಬನ ನರಳಾಟ ಕೇಳಿತ್ತು. ಡೋರ್ ತೆರೆದು ವ್ಯಕ್ತಿಯನ್ನು ಕಾರಿನ ಸೀಟಿನಲ್ಲಿ ಮಲಗಿಸಿ ಪೊಲೀಸರಿಗೆ ಫೋನ್ ಮಾಡಿ ನೌಷಾದ್ ತಿಳಿಸಿದ್ದರು. ನಂತರ ಪೊಲೀಸರು ರಕ್ಷಿಸಿದರೆಂದು ವರದಿ ತಿಳಿಸಿದೆ.





