ಮೂಡುಬಿದಿರೆ: ಆಳ್ವಾಸ್ ನಲ್ಲಿ ತುಳು ಬರವಣಿಗೆ ಪರಿಚಯ ಕಮ್ಮಟ

ಮೂಡುಬಿದಿರೆ,ಆ.22: ಕೇವಲ ಭಾವನಾತ್ಮಕವಾದ ಹಬ್ಬದ ರೂಪದ ಕಾರ್ಯಕ್ರಮಗಳಿಂದ ಮಾತ್ರವೇ ತುಳು ಉಳಿಯುವುದು ಅಸಾಧ್ಯ. ತುಳು ಸಾಹಿತ್ಯವನ್ನು ಆಸಕ್ತಿಯಿಂದ ಓದುವ ಮತ್ತು ಬರೆಯುವ ಕಾರ್ಯವಾಗಬೇಕು. ಸಮೃದ್ಧವಾದ ಜಾನಪದ ಪರಂಪರೆಯನ್ನು ಆರಾಧನೆಯ ದೃಷ್ಟಿಯಿಂದ ನೋಡುವುದರ ಜೊತೆಗೆ ಅಧ್ಯಯನದ ನೆಲೆಯಲ್ಲಿಯೂ ನೋಡಬೇಕು ಆಗ ತುಳುವಿನ ಮಹತ್ವ ಗೋಚರವಾಗುತ್ತದೆ ಎಂದು ತುಳು ಸಾಹಿತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಜಯಂತಿ ಎಸ್. ಬಂಗೇರ ನುಡಿದರು.
ಅವರು ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದವತಿಯಿಂದ ನಡೆದ ತುಳು ಬರವಣಿಯ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಾಹಿತಿ ಟಿ.ಎ.ಎನ್.ಖಂಡಿಗೆ ಮಾತನಾಡಿ ವೇದನೆಯನ್ನು ಸಂವೇದನೆಯಾಗಿ ಪರಿವರ್ತಿಸುವುದು ಒಂದು ಬಗೆಯ ಕಲೆಗಾರಿಕೆ. ಸಾಮಾನ್ಯ ಸಂಗತಿಗಳನ್ನು ಆಯ್ದುಕೊಂಡು ಮಹತ್ವದ ಅಂಶಗಳನ್ನು ಪ್ರಸ್ತುತ ಪಡಿಸಬಹುದು. ಅಪಾರವಾದ ಓದು ಉತ್ತಮ ಬರಹದ ಜೀವಾಳ. ತುಳುವಿನ ಸಾಹಿತ್ಯ ರಚನೆಗೆ ಬಹಳ ಅವಕಾಶವಿದೆ. ಹಾಗೆಂದ ಮಾತ್ರಕ್ಕೆ ಬರೆದುದೆಲ್ಲಾ ಸಾಹಿತ್ಯವಾಗುತ್ತದೆ ಎಂಬ ಭ್ರಮೆ ಬೇಡ ಎಂದರು.
ಉಪನ್ಯಾಸಕ ಅಶೋಕ. ಕೆ.ಜಿ ಅವರು ಬರವಣಿಗೆಗೆ ಸಂಬಂಧಿಸಿದಂತೆ ಪೂರಕ ಮಾಹಿತಿ ನೀಡಿದರು. ಡಾ.ಯೋಗೀಶ್ ಕೈರೋಡಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರತೀಕ್ಷಾ ರವರು ನಿರೂಪಿಸಿದರು.







