ರಿಯೋ ಮ್ಯಾರಥಾನ್ : ಭಾರತೀಯ ಅಥ್ಲೀಟ್ ಗೆ ನೀರು ಕೊಡುವ ಗತಿ ಇಲ್ಲ !
ನಾನು ಸಾಯುವ ಹಂತ ತಲುಪಿದ್ದೆ: ಜೈಶಾ

ರಿಯೋಡಿ ಜನೈರೊ, ಆ.22: ರಿಯೋ ಒಲಿಂಪಿಕ್ಸ್‌ನ ಮಹಿಳೆಯರ ಮ್ಯಾರಥಾನ್‌ನಲ್ಲಿ 42.195 ಕಿ.ಮೀ.ದೂರವನ್ನು ಪೂರೈಸಿದ ಬಳಿಕ ಕುಸಿದು ಬಿದ್ದಿದ್ದ ಭಾರತೀಯ ಅಥ್ಲೀಟ್‌ಗೆ ನೀರು ಕೊಡಲು ಭಾರತದ ಯಾವುದೇ ಅಧಿಕಾರಿಗಳು ಇರಲಿಲ್ಲ ಎಂಬ ಆಘಾತಕಾರಿ ವಿಷಯ ಬಹಿರಂಗವಾಗಿದೆ.
ಭಾರತದ ದೂರದ ಓಟಗಾರ್ತಿ ಒ.ಪಿ. ಜೈಶಾ ಮ್ಯಾರಥಾನ್ ಓಟವನ್ನು ಪೂರೈಸಿದ ತಕ್ಷಣ ಗಂಟಲು ಒಣಗಿಹೋಗಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆ ಸಂದರ್ಭದಲ್ಲಿ ಕನಿಷ್ಠ ನೀರನ್ನು ಕೊಡಲು ಯಾವೊಬ್ಬ ಭಾರತದ ಅಧಿಕಾರಿಯೂ ಅಲ್ಲಿರಲಿಲ್ಲ ಎಂಬುದನ್ನು ಸ್ವತಃ ಜೈಶಾ ಬಹಿರಂಗಪಡಿಸಿದ್ದಾರೆ.
‘‘ ಸ್ಪರ್ಧೆ ಬೆಳಗ್ಗೆ 9 ಗಂಟೆಗೆ ಆರಂಭವಾಗಿತ್ತು. ವಿಪರೀತ ಸೆಖೆಯಿತ್ತು. ಆದರೆ, ನಮ್ಮ ಬಳಿ ನೀರಾಗಲಿ, ಆಹಾರವಾಗಲಿ ಇರಲಿಲ್ಲ. ಸಂಘಟಕರು 8 ಕಿ.ಮೀ.ತಲುಪಿದ ಬಳಿಕ ನೀರು ಕೊಡುತ್ತಾರೆ. ಇದು ಹೆಚ್ಚು ಪ್ರಯೋಜನವಿಲ್ಲ. ಎಲ್ಲ ದೇಶಗಳು ಪ್ರತಿ 2 ಕಿ.ಮೀ. ದೂರದಲ್ಲಿ ಒಂದು ಸ್ಟಾಲ್ ಹೊಂದಿವೆ. ಆದರೆ, ನಮ್ಮ ದೇಶದ ಸ್ಟಾಲ್ ಖಾಲಿಯಾಗಿತ್ತು. ನಮಗೆ ತಾಂತ್ರಿಕ ಅಧಿಕಾರಿಗಳು ನೀರನ್ನು ನೀಡಬೇಕು. ನಾವು ಬೇರ್ಯಾವ ತಂಡದಿಂದಲೂ ನೀರನ್ನು ಸ್ವೀಕರಿಸಬಾರದೆಂಬ ನಿಯಮವಿದೆ. ರೇಸ್ ಮುಗಿದ ಬಳಿಕ ನಾನು ಪ್ರಜ್ಞಾಹೀನಳಾಗಿದ್ದೆ. ನನಗೆ ಏಳು ಬಾಟಲಿ ಗ್ಲುಕೋಸ್ ನೀಡಿ ಶಕ್ತಿ ತುಂಬಲಾಗಿತ್ತು. ನಾನು ಸತ್ತೇ ಹೋಗಿದ್ದೆನೆಂದು ಭಾವಿಸಿದ್ದೆ’’ ಎಂದು ಕೇರಳದ ಅಥ್ಲೀಟ್ ಆಂಗ್ಲ ವಾಹಿನಿಯೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಓಟಗಾರರು ಪ್ರತಿ 2.5 ಕಿ.ಮೀ. ಕ್ರಮಿಸಿದ ಬಳಿಕ ದಣಿವಾರಿಸಿಕೊಳ್ಳಲು ಎಲ್ಲ ದೇಶಗಳ ಅಧಿಕಾರಿಗಳು ನೀರಿನ ಬಾಟಲಿಗಳನ್ನು ನೀಡುತ್ತಾರೆ. ಆದರೆ, ನಮ್ಮ ದೇಶದ ಯಾವೊಬ್ಬ ಅಧಿಕಾರಿಗಳು ನಿರ್ದಿಷ್ಟ ಸ್ಥಳದಲ್ಲ್ಲಿರಲಿಲ್ಲ. ಸಂಘಟಕರು ಪ್ರತಿ 8 ಕಿ.ಮೀ. ಸಾಗಿದಬಳಿಕ ನೀರನ್ನು ಪೂರೈಸುತ್ತಾರೆ. ಕೆಲವೇ ದೂರ ಕ್ರಮಿಸಿದ ಬಳಿಕ ಬಾಯಾರಿಕೆಯಾಯಿತು. ನನಗೆ 30 ಕಿ.ಮೀ. ಸಾಗಿದ ಬಳಿಕ ಓಡಲು ಕಷ್ಟವಾಯಿತು. ವಿಪರೀತ ಉಷ್ಣಾಂಶವೂ ಇದಕ್ಕೆ ಕಾರಣವಾಗಿತ್ತು. ಬಾಯಾರಿಕೆಯಿಂದ ಕುಸಿದು ಬಿದ್ದ ನನಗೆ ಮ್ಯಾರಥಾನ್‌ನ ಸಹಓಟಗಾರರಾದ ಗೋಪಿ ಟಿ. ಹಾಗೂ ಕೋಚ್ ರಾಧಾಕೃಷ್ಣನ್ ನಾಯರ್ ನೆರವಿಗೆ ಬಂದರು. ನನಗೆ ಸಂಪೂರ್ಣ ಚೇತರಿಸಿಕೊಳ್ಳಲು 2-3 ತಿಂಗಳ ಆಯುರ್ವೇದಿಕ್ ಚಿಕಿತ್ಸೆ ಅಗತ್ಯವಿದೆ’’ ಎಂದು ಜೈಶಾ ಹೇಳಿದ್ದಾರೆ.
ಐಎಎಎಫ್ ನಿಯಮದ ಪ್ರಕಾರ ದಣಿವಾರಿಸಿಕೊಳ್ಳುವ ಕೇಂದ್ರದಲ್ಲಿ ತನ್ನದೇ ಅಧಿಕಾರಿಗಳನ್ನು ನಿಯೋಜಿಸುವುದು ಆಯಾ ಫೆಡರೇಶನ್ ಹಾಗೂ ಕೋಚ್‌ಗಳ ಕರ್ತವ್ಯ. ಯಾವೊಬ್ಬ ಅಥ್ಲೀಟ್ ಬೇರೊಂದು ದೇಶದ ಟೇಬಲ್‌ನಲ್ಲಿಟ್ಟ ಪಾನೀಯವನ್ನು ಬಳಸಿದರೆ ಸ್ಪರ್ಧೆಗೆ ಅನರ್ಹಗೊಳಿಸಲಾಗುತ್ತದೆ.
‘‘ನನ್ನ ಪರಿಸ್ಥಿತಿ ನೋಡಿದ ಕೋಚ್ ವೈದ್ಯರುಗಳ ಬಳಿ ರೇಗಾಡಿದ್ದರು. ಕೋಚ್ ನಾನು ಸತ್ತೇ ಹೋಗಿದ್ದೇನೆಂದು ಭಾವಿಸಿದ್ದರಂತೆ. ನನಗೆ ಏನೇ ಆದರೂ ವೈದ್ಯರು ಜವಾಬ್ದಾರಿ ಎಂದು ಹೇಳಿದ್ದ ಕೋಚ್ ವೈದ್ಯರು ನನ್ನ ಕೊಠಡಿಗೆ ಬರದಂತೆ ತಡೆದಿದ್ದರು. ಸ್ಟಾಲ್‌ಗಳಲ್ಲಿ ನೀರನ್ನು ಇಡಲಿಲ್ಲ ಏಕೆ ಎಂದು ಅಧಿಕಾರಿಗಳಲ್ಲಿ ಕೇಳಿದರೆ ಅವರಿಂದ ಸಮರ್ಪಕ ಉತ್ತರ ಬಂದಿಲ್ಲ. ಭಾರತೀಯ ಅಥ್ಲೆಟಿಕ್ ತಂಡದಲ್ಲಿ ತುಂಬಾ ಅಧಿಕಾರಿಗಳಿದ್ದರು. ಯಾರಾದರೊಬ್ಬರು ಈ ಕೆಲಸ ಮಾಡಬಹುದಿತ್ತು ಎಂದು ರಿಯೋ ಮ್ಯಾರಥಾನ್‌ನಲ್ಲಿ 2:47.9 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದ ಜೈಶಾ ಹೇಳಿದ್ದಾರೆ.
‘‘ಕುಡಿಯುವ ನೀರು ಹಾಗೂ ಶಕ್ತಿಯ ಪಾನೀಯಗಳನ್ನು ನೀಡುವುದು ಆಯೋಜಕರ ಕರ್ತವ್ಯ. ನಮ್ಮ ಅಥ್ಲೀಟ್‌ಗಳಿಗೆ ನಾವು ನೀರು ಇಲ್ಲವೇ ಶಕ್ತಿಯ ಪಾನೀಯ ನೀಡಬಹುದು. ಆದರೆ, ನಮ್ಮಕೋಚ್‌ಗಳು ನಮಗೆ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ’’ ಎಂದು ಎಎಫ್‌ಐ ಕಾರ್ಯದರ್ಶಿ ಸಿಕೆ ವಾಲ್ಸನ್ ಹೇಳಿದ್ದಾರೆ.







