ಪುತ್ತೂರು: ಸಂತೆ ವ್ಯಾಪಾರ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರ

ಪುತ್ತೂರು,ಆ.22: ಪುತ್ತೂರು ಉಪವಿಭಾಗದ ಆಯುಕ್ತರ ಆದೇಶದಂತೆ ಸ್ಥಳಾಂತರಗೊಂಡಿದ್ದ ಪುತ್ತೂರು ವಾರದ ಸಂತೆಯು ಎಪಿಎಂಸಿ ಪ್ರಾಂಗಣದಲ್ಲಿ ಸೋಮವಾರ ನಡೆದಿದ್ದು, ಕಿಲ್ಲೆ ಮೈದಾನದಲ್ಲಿ ನಡೆಯುತ್ತಿದ್ದ ವಾರದ ಸಂತೆಯು ಅಧಿಕೃತವಾಗಿ ಸ್ಥಳಾಂತಗೊಂಡಿದೆ.
ಕಳೆದ 2 ವಾರಗಳ ಹಿಂದೆ ಸಂತೆ ಸ್ಥಳಾಂತರಕ್ಕೆ ಆದೇಶಿಸಲಾಗಿತ್ತು. ಈ ಹಿನ್ನಲೆಯಲ್ಲಿ ಆಗಸ್ಟ್ 15ರಂದು ಕಿಲ್ಲೆ ಮೈದಾನದಲ್ಲಿ ಸಂತೆ ನಡೆಸಲು ಅವಕಾಶ ನೀಡಿರಲಿಲ್ಲ. ಆಗಸ್ಟ್ 15ರಂದು ಎಪಿಎಂಸಿ ಆವರಣಕ್ಕೆ ಯಾವ ವರ್ತಕರೂ ತೆರಳದೇ ಇದ್ದ ಕಾರಣ ಅಲ್ಲಿ ಸಂತೆ ನಡೆದಿರಲಿಲ್ಲ. ಇದರಿಂದಾಗಿ ಸಂತೆಗೆ ಆಗಮಿಸಿದ ವ್ಯಾಪಾರಿಗಳು ಹಾಗೂ ಗ್ರಾಹಕರು ಗೊಂದಲಕ್ಕೆ ಸಿಲುಕಿ ಪರದಾಡುವಂತಾಗಿತ್ತು. ಬಳಿಕ ನಡೆದ ಬೆಳವಣಿಗೆಯಲ್ಲಿ ಸಂತೆ ವ್ಯಾಪಾರಿಗಳ ಸಂಘದ ವತಿಯಿಂದ ಪ್ರತಿಭಟನೆ ನಡೆದು ಸಂತೆಯನ್ನು ಕಿಲ್ಲೆ ಮೈದಾನದಲ್ಲಿಯೇ ನಡೆಸುವಂತೆ ಒತ್ತಾಯಿಸಲಾಗಿತ್ತು.
ಈ ಬಾರಿಯೂ ಇದೇ ಪರಿಸ್ಥಿತಿ ಉದ್ಭವಿಸಬಾರದು ಎಂಬ ಕಾರಣಕ್ಕೆ ಭಾನುವಾರ ಸಂಜೆಯಿಂದಲೇ ಪೊಲೀಸ್ ಬಂದೋ ಬಸ್ತ್ ಮಾಡಲಾಗಿತ್ತು. ಸಾಮಾನ್ಯವಾಗಿ ವಾರದ ಸಂತೆಗೆಂದು ಬರುವ ಲೋಡುಗಟ್ಟಲೆ ತರಕಾರಿಗಳು ಭಾನುವಾರ ಸಂಜೆಯಿಂದಲೇ ಪುತ್ತೂರಿಗೆ ಬರಲಾರಂಭಿಸುವ ಕಾರಣ ಪೊಲೀಸರು ಇಡೀ ನಗರದಲ್ಲಿ ಹದ್ದಿನ ಕಣ್ಣಿಟ್ಟಿದ್ದರು. ಲೋಡುಗಳನ್ನು ನಗರದ ಯಾವ ಭಾಗದಲ್ಲೂ ಇಳಿಸಲು ಅವಕಾಶ ನೀಡಿರಲಿಲ್ಲ.
ಸೋಮವಾರ ಮುಂಜಾನೆ ಎಪಿಎಂಸಿ ಆವರಣದಲ್ಲಿ ವ್ಯವಹಾರ ಆರಂಭವಾಗುತ್ತಲೇ ಅಂಗಡಿ, ಹೊಟೇಲ್‌ಗಳಿಗೆ ರಖಂ ಖರೀದಿದಾರು ತಮ್ಮ ವಾಹನಗಳಲ್ಲಿ ಬಂದು ಕೊಂಡೊಯ್ಯಲಾರಂಭಿಸಿದರು. ಇದರ ಬೆನ್ನಲ್ಲೇ ಸ್ವಂತ ವಾಹನ ಇರುವವರು ಬಂದು ಖರೀದಿಗೆ ತೊಡಗಿದರು. ಆದರೆ ಕಿಲ್ಲೆ ಮೈದಾನದ ಸಂತೆಗೆ ಸಾವಿರಾರು ಸಂಖ್ಯೆಯಲ್ಲಿ ಬರುವ ಸಾರ್ವಜನಿಕರು ಇಲ್ಲಿ ಕಂಡು ಬರಲಿಲ್ಲ. ವ್ಯಾಪಾರ ತುಂಬಾ ಕಮ್ಮಿ ಇದೆ ಎಂದು ಹಾಸನ ಮೂಲದ ತರಕಾರಿ ವ್ಯಾಪಾರಿ ರಮೇಶ್ ಹೇಳಿದರು.
ಮೊದಲು ಬಂದವರಿಗೆ ಮೊದಲ ಆದ್ಯತೆ: ಎಪಿಎಂಸಿಯಲ್ಲಿರುವ ಮಾರುಕಟ್ಟೆ ಪ್ರಾಂಗಣದಲ್ಲಿ 40 ಅಂಕಣಗಳನ್ನು ಭಾನುವಾರ ಮಾರ್ಕ್ ಮಾಡಲಾಗಿತ್ತು. ಆದರೆ ಕೇವಲ 12 ವ್ಯಾಪಾರಿಗಳು ಮಾತ್ರ ಬಂದಿದ್ದರು. ಸೋಮವಾರ ಮುಂಜಾನೆ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿತ್ತು. ಸಂತೆಕಟ್ಟೆಯ ಹೊರಗೆ ಕೂಡ ವ್ಯಾಪಾರ ನಡೆಯಿತು.
ನಗರದಿಂದ ಎರಡು ಕಿ.ಮೀ. ದೂರದಲ್ಲಿರುವ ಎಪಿಎಂಸಿ ಆವರಣಕ್ಕೆ ತೆರಳಲು ಗ್ರಾಹಕರಿಗೆ ಎಪಿಎಂಸಿ ವತಿಯಿಂದ ಉಚಿತ ವಾಹನ ವ್ಯವಸ್ಥೆ ಮಾಡಲಾಗಿತ್ತು.
ಎಪಿಎಂಸಿ ಸಂತೆ ಮಾರುಕಟ್ಟೆಯಲ್ಲಿ ವಾಹನವೊಂದರಲ್ಲಿ ಹಸಿ ಮೀನು ಮಾರಾಟ ಆರಂಭಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಎಪಿಎಂಸಿ ಸಂತೆ ಮಾರುಕಟ್ಟೆ ಇರುವುದು ಮೀನು ಮಾರಾಟಕ್ಕಲ್ಲ. ಮೀನು ಮಾರಾಟಕ್ಕೆ ನಗರಸಭೆ ಆಶ್ರಯದಲ್ಲಿ ಪ್ರತ್ಯೇಕ ಮಳಿಗೆ ಇದ್ದು, ಅಲ್ಲಿ ಲಕ್ಷಾಂತರ ರೂ. ಹಣ ಸುಂಕ ಪಾವತಿಸಿ ವ್ಯಾಪಾರ ಮಾಡಲಾಗುತ್ತಿದೆ. ಇದೀಗ ಎಪಿಎಂಸಿ ಮಾರುಕಟ್ಟೆಯಲ್ಲಿ ಮೀನು ಮಾರಾಟ ಆರಂಭಿಸಿರುವುದರ ವಿರುದ್ಧ ನಗರಸಭೆ ಮಳಿಗೆ ವ್ಯಾಪಾರಸ್ಥರು ನಗರ ಸಭೆಗೆ ದೂರು ಸಲ್ಲಿಸಿದರು.
ಸಂತೆಯನ್ನು ಪೊಲೀಸ್ ಮೂಲಕ ತಡೆದಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ-ರಾಜೇಶ್ ಬನ್ನೂರು
ಎಪಿಎಂಸಿ ಪ್ರಾಂಗ್ರಣದಲ್ಲಿ ವರ್ಷವಿಡೀ ಸಂತೆ ನಡೆಸುವುದಕ್ಕೆ ನಮ್ಮ ವಿರೋಧವಲ್ಲ. ಆದರೆ ಕಿಲ್ಲೆ ಮೈದಾನದಲ್ಲಿ ನಡೆಸುವ ಸಂತೆಯನ್ನು ಪೊಲೀಸ್ ಬಂದ್ ಮೂಲಕ ಸ್ಥಗಿತ ಗೊಳಿಸುವುದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತೆ ಎಂದು ಸಂತೆ ಉಳಿಸಿ ಹೋರಾಟ ಸಮಿತಿಯ ಸಂಚಾಲಕರಾದ ಪುರಸಭಾ ಸದಸ್ಯ ರಾಜೇಶ್ ಬನ್ನೂರು ಆಪಾದಿಸಿದ್ದಾರೆ.
ಅವರು ಸುದ್ದಿಗಾರೊಂದಿಗೆ ಮಾತನಾಡಿ ಎಪಿಎಂಸಿಯಲ್ಲಿ ವರ್ತಕರಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡುವ ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿಯವರ ಊರಾದ ಕಡಬದಲ್ಲಿ ಎಪಿಎಂಸಿ ಯಾರ್ಡ್ ಇದ್ದರೂ ಕಡಬ ಪೇಟೆಯಲ್ಲಿ ಇಂದಿಗೂ ಸಂತೆ ನಡೆಯುತ್ತಿದೆ. ಆದ್ದರಿಂದ ಕೃಷ್ಣ ಶೆಟ್ಟಿಯವರು ಟಾರಿಸ್ ಮನೆಯಲ್ಲಿ ಕುಳಿತು ಎದುರಿನ ಗಾಜಿನ ಮನೆಗೆ ಕಲ್ಲು ಹೊಡೆಯುವ ಸಂಸ್ಕೃತಿ ಅತ್ಯಂತ ಖಂಡನೀಯ ಎಂದಿದ್ದಾರೆ.







