ಹಿರಿಯ ಅಧಿಕಾರಿಗಳಿಂದ ಮಾನಸಿಕ ಕಿರುಕುಳದ ಆರೋಪ: ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಪೌರಾಯುಕ್ತೆ

ಪುತ್ತೂರು,ಆ.22: ಪುತ್ತೂರು ನಗರಸಭೆಯಿಂದ ಉಳ್ಳಾಲ ನಗರಸಭೆಗೆ ವರ್ಗಾವಣೆಗೊಂಡಿರುವ ಪೌರಾಯುಕ್ತೆ ರೇಖಾ ಜೆ.ಶೆಟ್ಟಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ನಡೆದಿದ್ದು, ಹಿರಿಯ ಅಧಿಕಾರಿಯೊಬ್ಬರು ಮಾನಸಿಕ ಕಿರುಕುಳವೇ ಅಸ್ವಸ್ಥತೆಗೆ ಕಾರಣವೆನ್ನಲಾಗಿದೆ. ಪುತ್ತೂರು ಪುರಸಭೆಯ ಮುಖ್ಯಾಧಿಕಾರಿಯಾಗಿದ್ದ ರೇಖಾ ಜೆ. ಶೆಟ್ಟಿ ಅವರು 2015ರ ಜನವರಿ ತಿಂಗಳ ಬಳಿಕ ಪುತ್ತೂರು ನಗರಸಭೆಯ ಪೌರಾಯುಕ್ತರಾಗಿ ಪದೋನ್ನತಿ ಹೊಂದಿ ಪುತ್ತೂರು ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆಗಸ್ಟ್ 18ರಂದು ರಾಜ್ಯ ಸರಕಾರದ ಪೌರಾಡಳಿತ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ರೇಖಾ ಶೆಟ್ಟಿ ಅವರನ್ನು ಉಳ್ಳಾಲ ನಗರಸಭೆಗೆ ಮತ್ತು ಉಳ್ಳಾಲ ನಗರಸಭೆಯಲ್ಲಿ ಅದೇ ಹುದ್ದೆಯಲ್ಲಿರುವ ರೂಪಾ ಶೆಟ್ಟಿ ಅವರನ್ನು ವರ್ಗಾಯಿಸಲಾಗಿತ್ತು. ವರ್ಗಾವಣೆ ಆದೇಶದಂತೆ ಉಳ್ಳಾಲ ನಗರಸಭೆಯ ಪೌರಾಯುಕ್ತರಾಗಿದ್ದ ರೂಪಾ ಶೆಟ್ಟಿ ಅವರು ಸೋಮವಾರ ಪುತ್ತೂರು ನಗರಸಭೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ರೇಖಾ ಶೆಟ್ಟಿ ಅವರು ಸೋವವಾರ ಮಂಗಳೂರಿಗೆ ತೆರಳಿ ಜಿಲ್ಲಾಧಿಕಾರಿ ಕಚೇರಿಗೆ ವರದಿ ಮಾಡಿ ಅಲ್ಲಿಂದ ರಿಲೀವ್ ಲೆಟರ್ ಪಡೆದುಕೊಂಡು ಉಳ್ಳಾಲಕ್ಕೆ ಹೋಗಲು ನಿರ್ಧರಿಸಿದ್ದರು. ಈ ಮಧ್ಯೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಯೊಬ್ಬರು ರೇಖಾ ಶೆಟ್ಟಿ ಅವರಿಗೆ ಬೈದು ಮಾನಸಿಕ ಹಿಂಸೆ ನೀಡಿದ್ದರು ಎನ್ನಲಾಗಿದ್ದು, ನಿಮಗೆ ಎಲ್ಲಿಯೂ ಸ್ಥಾನವಿಲ್ಲ ನೀವು ಮನೆಯಲ್ಲಿಯೇ ಕುಳಿತುಕೊಳ್ಳಿ ಎಂದು ಹೇಳಿದ್ದರು ಎಂದು ಆರೋಪಿಸಲಾಗಿದೆ. ಇದರಿಂದಾಗಿ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಭಾನುವಾರ ರಾತ್ರಿ ಬಂಟ್ವಾಳ ತಾಲೂಕಿನ ಸಾಲೆತ್ತೂರಿನಲ್ಲಿರುವ ಮನೆಯಿಂದ ಕರೆತಂದು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ರೇಖಾ ಶೆಟ್ಟಿ ಅವರನ್ನು ಭೇಟಿ ಮಾಡಿದಾಗ ಅವರು ಪತ್ರಿಕೆಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದರು. ವೈದ್ಯರು ಅವರನ್ನು ಈಗ ಮಾತನಾಡಿಸಬೇಡಿ ಅವರಿಗೆ ವಿಶ್ರಾಂತಿ ಬೇಕಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳ ವಿರುದ್ದ ಧ್ವೇಷ ರಾಜಕಾರಣ ಸರಿಯಲ್ಲ: ಶಕುಂತಳಾ ಶೆಟ್ಟಿ
ಶಾಸಕಿ ಶಕುಂತಳಾ ಶೆಟ್ಟಿ ಅವರು ಆಸ್ಪತ್ರಯಲ್ಲಿ ದಾಖಲಾಗಿರುವ ರೇಖಾ ಶೆಟ್ಟಿ ಅವರನ್ನು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆ ಎಂಬುದು ಸಹಜ ಪ್ರಕ್ರಿಯೆಯಾಗಿದೆ. ಆದರೆ ಈ ವಿಚಾರದಲ್ಲಿ ಯಾರೇ ಆದರೂ ದ್ವೇಷ ರಾಜಕಾರಣ ಮಾಡುವುದು ಸರಿಯಲ್ಲ. ರೇಖಾ ಶೆಟ್ಟಿ ಅವರ ವರ್ಗಾವಣೆಯಲ್ಲಿ ನನ್ನ ಪಾತ್ರವೇನೂ ಇಲ್ಲ. ಸರಕಾರದಿಂದ ಅವರಿಗೆ ಉಳ್ಳಾಲ ನಗರಸಭೆಗೆ ವರ್ಗಾವಣೆ ಆದೇಶ ಬಂದಿದೆ ಎಂಬುದಷ್ಟೇ ನನಗೆ ಗೊತ್ತು. ಈ ನಡುವೆ ನನ್ನನ್ನು ಅವರು ಭೇಟಿ ಮಾಡಿ ಡಿಸೆಂಬರ್‌ವರೆಗೆ ಪುತ್ತೂರಿನಲ್ಲೇ ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದರು. ಮಕ್ಕಳು ಪುತ್ತೂರಿನಲ್ಲಿ ಶಾಲೆಗೆ ಹೋಗುತ್ತಿರುವ ಕಾರಣ ಈ ರಿಯಾಯಿತಿ ಅಪೇಕ್ಷಿಸಿದ್ದರು. ಆದರೆ ಇದು ಸರಕಾರಿ ವರ್ಗಾವಣೆ ಪ್ರಕ್ರಿಯೆ ಆದ ಕಾರಣ ನಾನು ಮಧ್ಯಪ್ರವೇಶ ಮಾಡಿರಲಿಲ್ಲ. ಇದೀಗ ಅಸ್ವಸ್ಥಗೊಂಡಿರುವ ಅವರನ್ನು ಭೇಟಿ ಮಾಡಿದ್ದೇನೆ. ಅವರ ತಾಯಿ ಹೇಳುವ ಪ್ರಕಾರ ಮಂಗಳೂರಿನ ಅಧಿಕಾರಿಯೊಬ್ಬರು ಫೋನ್ ಮಾಡಿ ಧಮಕಿ ಹಾಕಿದ್ದಾರಂತೆ. ಏನೇನೋ ಆರೋಪ ಮಾಡಿದ್ದಾರಂತೆ. ಉಳ್ಳಾಲಕ್ಕೆ ಹೋಗಲು ಅವಕಾಶ ನೀಡುವುದಿಲ್ಲ ಎಂದೆಲ್ಲ ಹೇಳಿದ್ದಾರಂತೆ, ರೇಖಾ ಶೆಟ್ಟಿ ಅವರು ಉಳ್ಳಾಲಕ್ಕೆ ಹೋಗಲು ಮಾನಸಿಕವಾಗಿ ಸಿದ್ಧರಾಗಿದ್ದರು. ಬಹುಷಃ ಅವರ ತಾಯಿ ಹೇಳುವ ಪ್ರಕಾರ ಅಧಿಕಾರಿಗಳು ಧಮಕಿ ಹಾಕಿದ ಕಾರಣ ಮಾನಸಿಕವಾಗಿ ನೊಂದುಕೊಂಡಿರಬೇಕೆಂದು ತೋರುತ್ತದೆ ಎಂದು ಹೇಳಿದ್ದಾರೆ.
ಪುತ್ತೂರು ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿ ರೇಖಾ ಶೆಟ್ಟಿ ಅವರ ಆರೋಗ್ಯ ವಿಚಾರಿಸಿದರು. ರೇಖಾ ಶೆಟ್ಟಿ ಅವರು ಕಡಿಮೆ ರಕ್ತದೊತ್ತಡ(ಲೋ ಬಿಪಿ) ಸಮಸ್ಯೆಯಿಂದ ಬಳಲುತ್ತಿದ್ದು, ಇದೀಗ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.







