ವರದಿಗಾರರು ಸಮಾಜದ ಕನ್ನಡಿಯಿದ್ದಂತೆ : ಪಿ.ಬಿ.ಹರೀಶ್.ರೈ

ಪುತ್ತೂರು,ಆ.22: ವರದಿಗಾರಿಕೆಯಲ್ಲಿ ಅನೇಕ ಬದಲಾವಣೆಗಳಾಗಿದೆ. ಯುವ ವರದಿಗಾರರು ಸವಾಲುಗಳಿಗೆ ಸಿದ್ಧರಾಗಿರಬೇಕು. ಪ್ರಚಲಿತ ವಿದ್ಯಮಾನಗಳ ಅರಿವಿರಬೇಕು. ಸಮಾಜದಲ್ಲಿ ನಡೆಯುವ ವಿಚಾರಗಳನ್ನು ವಿಮರ್ಶಿಸುವ ಸಾಮರ್ಥ್ಯವಿದ್ದರೆ ಮಾತ್ರ ಉತ್ತಮ ವರದಿಗಾರನಾಗಗಲು ಸಾಧ್ಯ ಎಂದು ಪತ್ರಕರ್ತ ಪಿ.ಬಿ.ಹರೀಶ್ ರೈ ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ದಶಮಾನೋತ್ಸವ ಆಚರಣೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ನಡೆದ ರಾಜ್ಯಮಟ್ಟದ ಮಾಧ್ಯಮಗೋಷ್ಠಿಯಲ್ಲಿ ‘ವರದಿಗಾರರ ಸವಾಲುಗಳು’ ವಿಷಯದ ಬಗ್ಗೆ ಮಾತನಾಡಿದರು.
ಪತ್ರಕರ್ತ ಸುಧಾಕರ ಸುವರ್ಣ ಅವರು ಮಾತನಾಡಿ ವರದಿಗಾರರು ಅಡೆತಡೆಗಳಿಗೆ ಭಯಪಡದೇ ವರದಿ ಮಾಡಲು ಸಿದ್ಧರಾಗಿರಬೇಕು. ಸಮಾಜದ ಸಮಸ್ಯೆಗಳಿಗೆ ಮುಖವಾಣಿಯಾಗುವುದೇ ಪತ್ರಿಕೋದ್ಯಮದ ಮುಖ್ಯ ಉದ್ದೇಶ. ಮಾಧ್ಯಮಗಳು ವಾಸ್ತವವನ್ನು ತೋರಿಸುತ್ತದೆ. ಅಲ್ಲದೇ ವರದಿಗಾರನಾದವನು ಛಾಯಾಗ್ರಹಣ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಆಗ ಮಾತ್ರ ಉತ್ತಮ ವರದಿಗಾರನಾಗಲು ಸಾಧ್ಯ. ಯುವ ಪತ್ರಕರ್ತರಿಗೆ ಮಾಧ್ಯಮ ರಂಗವು ಸವಾಲಾಗುವುದು ಎಂದರು.
ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿ ವಿದ್ಯಾ ಎಸ್ ಕಾರ್ಯಕ್ರಮ ನಿರ್ವಹಿಸಿದರು.







