ತೊಕ್ಕೊಟ್ಟು: ಪಿಯು ವಿದ್ಯಾರ್ಥಿ ಆತ್ಮಹತ್ಯೆ

ಮಂಗಳೂರು, ಆ. 22: ತೊಕ್ಕೊಟ್ಟು ಸಮೀಪದ ಪೆರ್ಮನ್ನೂರಿನ ಸೈಂಟ್ ಸೆಬೆಸ್ಟಿನ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ಮನೆಯ ಚಾವಡಿಯಲ್ಲೇ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತೊಕ್ಕೊಟ್ಟು ಲಚ್ಚಿಲ್ ಎಂಬಲ್ಲಿ ಇಂದು ಸಂಜೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಲಚ್ಚಿಲ್‌ನ ಸದಾಶಿವ ಮತ್ತು ಆಶಾ ದಂಪತಿಯ ಪುತ್ರ ಶಿಫಾನ್(17)ಎಂದು ಗುರುತಿಸಲಾಗಿದೆ.
ಶಿಫಾನ್ ದ್ವಿತೀಯ ಪಿಯುಸಿ ಸಾಯನ್ಸ್ ವಿಭಾಗದ ವಿದ್ಯಾರ್ಥಿಯಾಗಿದ್ದ. ಶನಿವಾರದಿಂದ ಪರೀಕ್ಷೆ ಆರಂಭವಾಗಿದ್ದು ಸೋಮವಾರದಂದು ನಡೆದಿದ್ದ ಪರೀಕ್ಷೆಗೆ ಶಿಫಾನ್ ಗೈರು ಹಾಜರಾಗಿದ್ದ. ಈ ಬಗ್ಗೆ ಕಾಲೇಜಿನವರು ಶಿಫಾನ್ ತಂದೆ ಸದಾಶಿವ ಅವರಿಗೆ ದೂರವಾಣಿ ಕರೆ ಮಾಡಿ ಕಾಲೇಜಿಗೆ ಬರುವಂತೆ ಹೇಳಿದ್ದು, ಸದಾಶಿವರು ಬುಧವಾರ ಬರುವುದಾಗಿ ಹೇಳಿದ್ದರೆನ್ನಲಾಗಿದೆ. ನಗರದ ತರಕಾರಿ ಅಂಗಡಿಯೊಂದರಲ್ಲಿ ಕೆಲಸಕ್ಕಿರುವ ಸದಾಶಿವ ಅವರು ಸೋಮವಾರ ಮಧ್ಯಾಹ್ನ ಮೂರು ಗಂಟೆ ಹೊತ್ತಿಗೆ ಮನೆಗೆ ಬಂದು ಮಗನಲ್ಲಿ ವಿಚಾರಿಸಿ ನಂತರ ಕಾಲೇಜಿಗೆ ತೆರಳಿದ್ದಾರೆ. ಕಾಲೇಜು ಆಡಳಿತದವರಲ್ಲಿ ಮಾತನಾಡಿ, ಸುಮಾರು 4 ಗಂಟೆ ಹೊತ್ತಿಗೆ ಮನೆಗೆ ಹಿಂತಿರುಗಿದಾಗ ಶಿಫಾನ್ ಮನೆಯ ಚಾವಡಿಯ ಫ್ಯಾನಿಗೆ ಸೀರೆಯಿಂದ ನೇಣುಬಿಗಿದು ಆತ್ಮಹತ್ಯೆಗೈದಿದ್ದ. ಕೂಡಲೇ ಸ್ಥಳೀಯರ ಸಹಕಾರದಿಂದ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರೂ ಶಿಫಾನ್ ಮೃತಪಟ್ಟಿದ್ದ.
ಶಿಫಾನ್‌ನ ತಾಯಿ ಆಶಾ ಅವರು ಹಾಸ್ಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಸೋಮವಾರವೂ ಕೆಲಸಕ್ಕೆ ತೆರಳಿದ್ದರು. ಮನೆಯಲ್ಲಿ ಶಿಫಾನ್ ಒಬ್ಬಂಟಿಯಾಗಿದ್ದ. ಶಿಫಾನ್ ಅಕ್ಕ ಶಿಫಾಲಿಗೆ ಕೆಲವು ವರುಷಗಳ ಹಿಂದೆ ಮದುವೆಯಾಗಿದ್ದು ಗಂಡನ ಮನೆಯಲ್ಲಿ ನೆಲೆಸಿದ್ದಾರೆ. ಪರೀಕ್ಷೆಗೆ ಹಾಜರಾಗದಿದ್ದುದರಿಂದ ಕಾಲೇಜು ಆಡಳಿತ ಮಂಡಳಿಯವರು ತಂದೆಯನ್ನು ಕರೆಸಿರಬೇಕೆಂದು ವಿಚಲಿತನಾದ ಶಿಫಾನ್ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತಾಯಿ ಸೀರೆಯನ್ನೇ ಕುಣಿಕೆಯನ್ನಾಗಿಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಿಫಾನ್ ಮೃದು ಸ್ವಭಾವದ ಉತ್ತಮ ನಡತೆಯ ವಿದ್ಯಾರ್ಥಿಯಾಗಿದ್ದು, ಪರೀಕ್ಷಾ ಸಮಯದಲ್ಲಿ ಈ ಹಿಂದೆಯೂ ಕೆಲವೊಂದು ಬಾರಿ ಗೈರು ಹಾಜರಾಗಿದ್ದನೆಂದು ಹೇಳಲಾಗಿದೆ. ಆತ್ಮಹತ್ಯೆಗೈದಿರುವ ವಿಷಯ ತಿಳಿದು ಕಾಲೇಜಿನ ಸಹಪಾಠಿಗಳು, ಶಿಕ್ಷಕರೆಲ್ಲರು ಆಸ್ಪತ್ರೆಗೆ ಧಾವಿಸಿದ್ದರು. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





