ದಲಿತರ ಮೇಲಿನ ದಾಳಿಗೆ ಅಡ್ವಾಣಿ ಖಂಡನೆ

ಗಾಂಧಿನಗರ,ಆ.22: ದೇಶದಲ್ಲಿ ದಲಿತರ ಮೇಲಿನ ಇತ್ತೀಚಿನ ಘಟನೆಗಳನ್ನು ಸೋಮವಾರ ಇಲ್ಲಿ ಖಂಡಿಸಿದ ಹಿರಿಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾಣಿ ಅವರು ಈ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆಗೆ ಕರೆ ನೀಡಿದ್ದು, ಇದು ಪ್ರಧಾನಿ ನರೇಂದ್ರ ಮೋದಿ ಸರಕಾರವನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿರುವ ಪ್ರತಿಕ್ಷಗಳಿಗೆ ಹೆಚ್ಚಿನ ಬಲ ನೀಡಬಹುದು.
ಸುದ್ದಿಗಾರರೊಂದಿಗೆ ಮಾತನಾಡಿದ ಅಡ್ವಾಣಿ, ಗುಜರಾತಿನಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯಗಳು ಖಂಡನೀಯವಾಗಿದ್ದು, ಇದು ಪ್ರತಿಯೊಬ್ಬರಿಗೂ ನೋವನ್ನುಂಟು ಮಾಡಿದೆ. ದೇಶದ ಎಲ್ಲಿಯೇ ಆದರೂ ದಲಿತರ ಮೇಲೆ ದೌರ್ಜನ್ಯಗಳು ನಡೆಯದಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಆದರೆ ದಲಿತರ ಮೇಲೆ ಹಿಂದಿನಿಂದಲೂ ದೌರ್ಜನ್ಯಗಳು ನಡೆಯುತ್ತಲೇ ಇವೆ ಎಂದು ಬೆಟ್ಟುಮಾಡಿದ ಅವರು, ಇದು ಹೊಸದೇನಲ್ಲ. ಮಹಾತ್ಮಾ ಗಾಂಧಿಯವರ ಸಂಪರ್ಕದಲ್ಲಿದ್ದವರು,ಅವರ ಸಿದ್ಧಾಂತವನ್ನು ಪಾಲಿಸುತ್ತಿರುವವರು ದಲಿತರ ಮೇಲಿನ ದೌರ್ಜನ್ಯಗಳಂತಹ ಇತ್ತೀಚಿನ ಘಟನೆಗಳನ್ನು ಸಹಜವಾಗಿಯೇ ಖಂಡಿಸಿದ್ದಾರೆ ಎಂದರು.
ರವಿವಾರವಷ್ಟೇ ಗುಜರಾತಿನಲ್ಲಿ ದಲಿತರ ಸಂಕಷ್ಟಗಳ ಕುರಿತು ಮೋದಿಯವರ ವಿರುದ್ಧ ದಾಳಿ ನಡೆಸಿದ್ದ ಕಾಂಗ್ರೆಸ್ ಪಕ್ಷವು, ಅವರು ಈ ವಿಷಯದ ಬಗ್ಗೆ ಮಾತನಾಡುವ ಬದಲು ಬಲೂಚಿಸ್ತಾನದ ಬಗ್ಗೆ ಮಾತನಾಡುವ ಮೂಲಕ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂದು ಟೀಕಿಸಿತ್ತು.
ಗುಜರಾತ್ ಕಾಂಗ್ರೆಸ್‌ನ ನಿಯೋಗವೊಂದು ನಿನ್ನೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರನ್ನು ಭೇಟಿಯಾಗಿ ದಲಿತರ ಮೇಲಿನ ಇತ್ತೀಚಿನ ದೌರ್ಜನ್ಯಗಳ ಕುರಿತು ಅಹವಾಲನ್ನು ಸಲ್ಲಿಸಿತ್ತು.





