ರಾಜಕೀಯ ದುರುದ್ದೇಶಕ್ಕಾಗಿ ವಿದ್ಯಾರ್ಥಿ ಸಂಘಟನೆಗಳ ಬಳಕೆ: ದಿನೇಶ್ ಗುಂಡೂರಾವ್
‘ರಾಷ್ಟ್ರೀಯತೆ ಬಿಜೆಪಿ ಸ್ವತ್ತಲ್ಲ’

ಬೆಂಗಳೂರು, ಆ.22: ರಾಜ್ಯ ಸರಕಾರಕ್ಕೆ ಮಸಿ ಬಳಿಯಲು ಎಬಿವಿಪಿ ಹಾಗೂ ಬಿಜೆಪಿ ಪ್ರಯತ್ನಿಸುತ್ತಿದೆ. ಆದುದರಿಂದಲೆ, ವಿದ್ಯಾರ್ಥಿ ಸಂಘಟನೆಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯತೆ ತಮ್ಮ ಸ್ವತ್ತು ಎಂದು ಬಿಜೆಪಿ ಭಾವಿಸಿಕೊಂಡಿದೆ. ಇವರ ಪರವಾಗಿ ಇರುವವರು ದೇಶಭಕ್ತರು, ಇವರನ್ನು ವಿರೋಧಿಸುವವರಿಗೆ ‘ದೇಶವಿರೋಧಿ’ಗಳೆಂದು ಬಿಂಬಿಸಲಾಗುತ್ತಿದೆ ಎಂದು ಕಿಡಿಗಾರಿದರು.
ವಿದ್ಯಾರ್ಥಿಗಳು ಇಂತಹ ಢೋಂಗಿ ದೇಶಪ್ರೇಮಿಗಳ ಎಚ್ಚರಿಕೆಯಿಂದಿರಬೇಕು. ಅಲ್ಲದೆ, ಎಬಿವಿಪಿ ಹಾಗೂ ಬಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟದಿಂದ ಹಿಂದಕ್ಕೆ ಸರಿಯಬೇಕು. ಅಮ್ನೆಸ್ಟಿ ಸಂಸ್ಥೆಯ ಕಾರ್ಯಕ್ರಮದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಆದರೂ, ಬಿಜೆಪಿ ಹಾಗೂ ಎಬಿವಿಪಿ ಬೀದಿಗಿಳಿದು ಹೋರಾಟ ಮಾಡುತ್ತಿರುವ ಹಿಂದಿನ ಉದ್ದೇಶವೇನು ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಅಮ್ನೆಸ್ಟಿ ಒಂದು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿದ್ದು, ಕೇಂದ್ರ ಸರಕಾರದ ಬಳಿ ರಾಜ್ಯ ಸರಕಾರಕ್ಕಿಂತ ಹೆಚ್ಚಿನ ಮಾಹಿತಿ ಇರುತ್ತದೆ. ಈ ಸಂಸ್ಥೆ ದೇಶದ್ರೋಹ ದಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದು ಕಂಡುಬಂದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಿ ಎಂದು ಅವರು ಆಗ್ರಹಿಸಿದರು.
ಕೇಂದ್ರದ ಎನ್‌ಡಿಎ ಸರಕಾರವು ಅನೇಕ ವಿಚಾರಗಳಲ್ಲಿ ವೈಫಲ್ಯಗಳನ್ನು ಕಂಡಿದೆ. ದಲಿತರು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ವಿಚಾರಗಳನ್ನು ಬಳಸಿಕೊಳ್ಳಲಾಗುತ್ತಿದೆ. ರಾಷ್ಟ್ರೀಯತೆ, ದೇಶಪ್ರೇಮ ಎಂಬುವುದು ಸೂಕ್ಷ್ಮವಿಚಾರ. ಅದು ಯಾರೊಬ್ಬರ ಸ್ವತ್ತಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ರಾಜಭವನ ನಿರ್ಬಂಧಿತ ಪ್ರದೇಶವಾಗಿದ್ದು, ಅನುಮತಿ ಇಲ್ಲದೆ ಎಬಿವಿಪಿ ಪ್ರತಿಭಟನೆ ನಡೆಸಿದ್ದು ತಪ್ಪು. ಅಮ್ನೆಸ್ಟಿ ಕಚೇರಿ ಎದುರು ಶಾಂತಿಯುವಾಗಿ ಪ್ರತಿಭಟನೆ ನಡೆಸಲು ಪೊಲೀಸರು ಅನುಮತಿ ನೀಡಿದ್ದರು. ಆದರೆ, ಕೆಲವರು ಪೆಟ್ರೋಲ್ ಬಾಟಲ್‌ಗಳನ್ನಿಟ್ಟುಕೊಂಡು ಬಲವಂತವಾಗಿ ಅಮ್ನೆಸ್ಟಿ ಕಚೇರಿ ಒಳಗೆ ಪ್ರವೇಶಿಸಲು ಪ್ರಯತ್ನಿಸಿದರು. ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.
ದೇಶಾದ್ಯಂತ ತಿರಂಗಾಯಾತ್ರೆ ನಡೆಸುತ್ತಿರುವ ಬಿಜೆಪಿ ನಾಯಕರು, ಆ ಕಾರ್ಯಕ್ರಮಗಳಲ್ಲಿ ದೇಶದ ಸ್ವಾತಂತ್ರ ಸಂಗ್ರಾಮಕ್ಕಾಗಿ ಶ್ರಮಿಸಿದ, ಬಲಿದಾನ ನೀಡಿದಂತಹ ಅವರ ಮುಖಂಡರು ಯಾರೆಂಬುದನ್ನು ದೇಶ ಹಾಗೂ ರಾಜ್ಯದ ಜನರಿಗೆ ತಿಳಿಸಲಿ ಎಂದು ಅವರು ಆಗ್ರಹಿಸಿದರು. ಅಖಿಲ ಭಾರತ ಹಿಂದೂ ಮಹಾಸಭಾದವರು ಗಣರಾಜ್ಯೋತ್ಸವ (ಜ.26) ಹಾಗೂ ಸ್ವಾತಂತ್ರ ದಿನಾಚರಣೆ(ಆ.15)ಯನ್ನು ಕರಾಳ ದಿನವನ್ನಾಗಿ, ಮಹಾತ್ಮ ಗಾಂಧಿ ಹುತಾತ್ಮರಾದ ದಿನ(ಜ.30)ವನ್ನು ವಿಜಯೋತ್ಸವವಾಗಿ ಆಚರಿಸುತ್ತಾರೆ. ಎಬಿವಿಪಿ, ಬಿಜೆಪಿ ಹಾಗೂ ಸಂಘಪರಿವಾರದವರು ಈ ವಿಚಾರವಾಗಿ ಯಾಕೆ ಮಾತನಾಡುವುದಿಲ್ಲ ಎಂದು ದಿನೇಶ್‌ಗುಂಡೂರಾವ್ ಪ್ರಶ್ನಿಸಿದರು.
ಬಿಜೆಪಿ ನಾಯಕರು ಗೌರವಿಸುವ ಸಾವರ್ಕರ್ 1925ರ ನಂತರ ಸ್ವಾತಂತ್ರ ಸಂಗ್ರಾಮದ ಯಾವ ಹೋರಾಟದಲ್ಲಿಯೂ ಪಾಲ್ಗೊಳ್ಳಲಿಲ್ಲ. ಅಷ್ಟೇ ಅಲ್ಲ, ತ್ರಿವರ್ಣ ಧ್ವಜವನ್ನು ಹಿಂದೂಸ್ಥಾನದ ಬಾವುಟವನ್ನಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದರು. ಬಿಜೆಪಿ ನಾಯಕರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಅವರು ಪ್ರಶ್ನಿಸಿದರು.
ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ದೇಶದ ಸ್ವಾತಂತ್ರ ಸಂಗ್ರಾಮದ ಭಾಗವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ದೇಶ ಭಕ್ತಿಯ ಪಾಠ ಬಿಜೆಪಿಯವರಿಂದ ಕಲಿಯುವ ಅಗತ್ಯವಿಲ್ಲ. ವಿದ್ಯಾರ್ಥಿ ಸಂಘಟನೆಗಳನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿರುವ ಬಿಜೆಪಿ ನಡೆ ಅತ್ಯಂತ ಖಂಡನೀಯ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಎನ್‌ಎಸ್‌ಯುಐ ಅಧ್ಯಕ್ಷ ಮಂಜುನಾಥ್, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಅಡ್ವಾಣಿ ವಿರುದ್ಧ ಕ್ರಮಕೈಗೊಳ್ಳಲಿ
ಪಾಕಿಸ್ತಾನವನ್ನು ಹೊಗಳಿರುವ ಮಾಜಿ ಸಂಸದೆ ರಮ್ಯಾ ವಿರುದ್ಧ ಬಿಜೆಪಿ ನಾಯಕರು ಪೈಪೋಟಿಗೆ ಬಿದ್ದವರಂತೆ ಟೀಕೆಗಳನ್ನು ಮಾಡುತ್ತಿದ್ದಾರೆ. ಬಿಜೆಪಿಯ ಪರಮೋಚ್ಛ ನಾಯಕ ಎಲ್.ಕೆ.ಅಡ್ವಾಣಿ, ಪಾಕಿಸ್ಥಾನದ ಜನಕ ಮುಹಮ್ಮದ್ ಅಲಿ ಜಿನ್ನಾರನ್ನು ಹೊಗಳಿದ್ದರು. ಅವರನ್ನು ಯಾಕೆ ಪಕ್ಷದಿಂದ ತೆಗೆದು ಹಾಕಲಿಲ್ಲ.
-ದಿನೇಶ್‌ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ







