ದಲಿತರ ಹಣ ಬಿಡುಗಡೆ ಮಾಡದ ಕೇಂದ್ರ ಸರಕಾರ: ಅಂಬೇಡ್ಕರ್ ಅಭಿವೃದ್ಧಿ ನಿಗಮ ಆರೋಪ

ಬೆಂಗಳೂರು, ಆ.22: ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣವನ್ನು ಕೇಂದ್ರ ಸರಕಾರ ಕಳೆದ 7 ವರ್ಷಗಳಿಂದ ಬಿಡುಗಡೆ ಮಾಡಿಲ್ಲ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಲ್ಲಾಜಮ್ಮ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ನಗರದ ಐಎಎಸ್ ಅಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ದಲಿತರ ಶ್ರೇಯೋಭಿವೃದ್ಧಿಗೆ ರಾಜ್ಯ ಸರಕಾರ ಶೇ.51ರಷ್ಟು ಹಾಗೂ ಕೇಂದ್ರ ಸರಕಾರ 49ರಷ್ಟು ಅನುದಾನವನ್ನು ಪ್ರತಿವರ್ಷ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ನೀಡಲಾಗುತ್ತಿತ್ತು. ಆದರೆ ಕಳೆದ ಏಳು ವರ್ಷಗಳಿಂದ ಕೇಂದ್ರ ಸರಕಾರ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಕೇಂದ್ರ ಸರಕಾರ ನಿಗಮಕ್ಕೆ ನೀಡಬೇಕಾಗಿದ್ದ 93 ಕೋಟಿ ರೂ.ಗಳನ್ನು (ವರ್ಷವೊಂದಕ್ಕೆ ) ಹಣವನ್ನು ತಡೆ ಹಿಡಿದಿರುವುದರಿಂದ ಯೋಜನೆಗಳನ್ನು ಸಮಗ್ರವಾಗಿ ಅನುಷ್ಠಾನಗೊಳಿಸಲು ವಿಳಂಬವಾಗಿದೆ ಎಂದು ಅಸಹಾಯಕತೆ ತೊಡಿಕೊಂಡರು.
ಈ ಕುರಿತು ಕೇಂದ್ರ ಸರಕಾರಕ್ಕೆ ನಿರಂತರವಾಗಿ ಪತ್ರ ಬರೆಯಲಾಗಿದೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ,ಇತರೆ ಬಿಜೆಪಿ ಸಂಸದರ ಮೇಲೆ ಒತ್ತಡ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ರಾಜ್ಯ ಸರಕಾರ ಎಸ್‌ಸಿಪಿ ಟಿಎಸ್‌ಪಿ ಯೋಜನೆಗೆ ಈ ಬಜೆಟ್‌ನಲ್ಲಿ 19 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ದಲಿತರಲ್ಲಿ 101 ಜಾತಿಗಳಿದ್ದು, ಎಲ್ಲಾ ಜಾತಿಗಳ ಅಭಿವೃದ್ಧಿ ಯೋಜನೆಗಳಿಗೆ ನೆರವು ನೀಡಲಾಗಿದೆ. ಈ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ 21 ತಿಂಗಳ ಅಧಿಕಾರಾವಧಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ ಎಂದರು.
ಪ್ರಸಕ್ತ ಸಾಲಿನ ರಾಜ್ಯ ಸರಕಾರ ಬಜೆಟ್‌ನಲ್ಲಿ ನೀಡಲಾಗಿದ್ದ 450 ಕೋಟಿ ರೂ.ಗಳನ್ನು ದಲಿತರ ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗಿದೆ. ಪರಿಶಿಷ್ಟರ ಸ್ವಸಹಾಯ ಸಂಘಗಳಿಗೆ ಕಿರು ಸಾಲ ಯೋಜನೆ, ವಿಕಲಚೇತನರಿಗೆ ಸಹಾಯಧನ, ಗಂಗಾ ಜಲ ಯೋಜನೆಯಡಿ 40 ಸಾವಿರ ಕೊಳವೆ ಬಾವಿ ಕೊರೆಸಲಾಗಿದೆ. ಸ್ವಯಂ ಉದ್ಯೋಗಕ್ಕೆ, ಹೈನುಗಾರಿಕೆಗೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಬೀದಿ ವ್ಯಾಪಾರಿಗಳಿಗೆ ಸಬ್ಸಿಡಿ ಸಹಿತ ಸಾಲ, ಸಫಾಯಿ ಕರ್ಮಚಾರಿಗಳಿಗೆ ಪುನರ್ ವಸತಿ ಕಲ್ಪಿಸಲಾಗಿದೆ ಎಂದರು.
ರಾಜ್ಯದಲ್ಲಿ ಹೆಚ್ಚು ದಲಿತ ಸಂಖ್ಯೆಯಿರುವ ರಾಯಚೂರು, ಗುಲ್ಬರ್ಗಾ, ಧಾರಾವಾಡ, ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಒಟ್ಟು ಏಳು ಜಿಲ್ಲೆಗಳಿಗೆ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಈ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಸಂವಾದ ಕಾರ್ಯಕ್ರಮಗಳನ್ನು ನಿಗಮ ಆಯೋಜಿಸಿದೆ ಎಂದರು.
ಶೀಘ್ರದಲ್ಲೇ 371 ಸಿಬ್ಬಂದಿ ನೇಮ: ನಿಗಮದಲ್ಲಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಖಾಯಂಗೊಳಿಸಲಾಗಿದೆ. ಅಲ್ಲದೆ ನಿಗಮಕ್ಕೆ ಅಗತ್ಯವಿರುವ 371 ಸಿಬ್ಬಂದಿಯನ್ನು ಶೀಘ್ರದಲ್ಲೇ ನೇಮಕ ಮಾಡಿಕೊಳ್ಳಲಾಗುವುದು. ಕೂಡಲೆ ಈ ಸಿಬ್ಬಂದಿಯನ್ನು ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಐಎಂ) ಮೂಲಕ ನಿಯೋಜಿಸುವಂತೆ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಸ್ವಂತ ಕಟ್ಟಡ ಕಲ್ಪಿಸಲು ಒತ್ತಾಯ: 1975ರಲ್ಲಿ ಸ್ಥಾಪನೆಗೊಂಡ ಅಂಬೇಡ್ಕರ್‌ಅಭಿವೃದ್ಧಿ ನಿಗಮಕ್ಕೆ ಯಾವುದೇ ಜಿಲ್ಲೆಯಲ್ಲೂ ಸ್ವಂತ ಕಟ್ಟಡವಿಲ್ಲ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮಶತಮಾನೋತ್ಸವ ಜ್ಞಾಪಕಾರ್ಥವಾಗಿ ಸ್ವಂತ ಕಟ್ಟಡಗಳನ್ನು ನಿರ್ಮಾಣ ಮಾಡಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿಯನ್ನು ನಗರದ ಎಂ.ಜಿ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ನಿವೇಶನದಲ್ಲೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರಕಾರ ಅನುದಾನ ಬಿಡುಗಡೆ ಮಾಡದೇ ಇರುವುದರಿಂದ ಕೆಲ ಯೋಜನೆಗಳು ತಟಸ್ಥವಾಗಿವೆ. ಹೀಗಾಗಿ ಮುಂದಿನ ಬಜೆಟ್‌ನಲ್ಲಿ ಎಸ್‌ಸಿಪಿ ಟಿಎಸ್‌ಪಿ ಯೋಜನೆಗೆ ಹೆಚ್ಚುವರಿಯಾಗಿ 2,500 ಕೋಟಿ ರೂ.ಗಳ ಅನುದಾನ ನೀಡಲು ಮನವಿ ಮಾಡಲಾಗಿದೆ.
-ಮಲ್ಲಾಜಮ್ಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ







