ರಾಷ್ಟ್ರೀಯ ದಿನದ ಭಾಷಣದ ವೇಳೆ ಮೂರ್ಛೆ ಹೋದ ಸಿಂಗಾಪುರ ಪ್ರಧಾನಿ

ಸಿಂಗಾಪುರ, ಆ. 22: ಸಿಂಗಾಪುರ ಪ್ರಧಾನಿ ಲೀ ಹಸೀನ್ ಲೂಂಗ್ ರವಿವಾರ ರಾಷ್ಟ್ರೀಯ ದಿನದ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಒಮ್ಮೆಲೆ ಮೂರ್ಛೆ ಹೋದರು. ಅವರ ಭಾಷಣವನ್ನು ನೇರ ಟಿವಿ ಪ್ರಸಾರದಲ್ಲಿ ನೋಡುತ್ತಿದ್ದ ಜನರು ಆತಂಕಗೊಂಡರು. ಬಳಿಕ ಅವರ ಸಂಪುಟ ಸಹೋದ್ಯೋಗಿಗಳು ಅವರನ್ನು ವೇದಿಕೆಯಿಂದ ಕೆಳಗೆ ಕರೆದುಕೊಂಡು ಬಂದರು.
ಅವರ ಎಲ್ಲ ವೈದ್ಯಕೀಯ ಪರೀಕ್ಷೆಗಳ ಫಲಿತಾಂಶ ‘ಸಾಮಾನ್ಯ’ವಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.
ಸ್ಥಾಪಕ ಪ್ರಧಾನಿ ದಿವಂಗತ ಲೀ ಕುವಾನ್ ಯೂ ಅವರ ಪುತ್ರ, 64 ವರ್ಷದ ಲೂಂಗ್ ಒಂದು ಗಂಟೆ ಭಾಷಣ ಮಾಡಿದ ಬಳಿಕ ಒಮ್ಮೆಲೆ ಮಾತು ನಿಲ್ಲಿಸಿದರು.
ಸಿಂಗಾಪುರ ರಿಪಬ್ಲಿಕ್ ಆದ 51ನೆ ವರ್ಷದ ಆಚರಣೆಯ ವೇಳೆ ಘಟನೆ ಸಂಭವಿಸಿತು. ಒಂದು ಗಂಟೆಯ ಬಳಿಕ ಮತ್ತೆ ವೇದಿಕೆಗೆ ಬಂದ ಅವರು ತನ್ನ ಭಾಷಣವನ್ನು ಮುಗಿಸಿದರು.
‘‘ನನಗಾಗಿ ಕಾದಿದ್ದಕ್ಕೆ ಧನ್ಯವಾದಗಳು. ನನ್ನಿಂದಾಗಿ ನೀವು ಹೆದರಿದಿರಿ’’ ಎಂದು ಅವರು ಮುಗುಳು ನಗುತ್ತಾ ಹೇಳಿದರು. ‘‘ಈ ಹಿಂದೆ ಎಸ್‌ಎಎಫ್‌ಟಿಐಯಲ್ಲಿನ ಪರೇಡ್ ಚೌಕದಲ್ಲಿಯೂ ಇದು ಸಂಭವಿಸಿತ್ತು. ನಾನು ಮೂರ್ಛೆ ಹೋಗಿದ್ದೆ’’ ಎಂದರು.





