ಪುತ್ತೂರು ಸಂತೆ ಗೊಂದಲ: ನೆಕ್ಕಿಲಾಡಿ ಕಡೆ ಮುಖಮಾಡಿದ ತರಕಾರಿ ವ್ಯಾಪಾರಿಗಳು

ಉಪ್ಪಿನಂಗಡಿ,ಆ.22: ವಾರದ ಪ್ರತಿ ಸೋಮವಾರ ನಡೆಯುತ್ತಿದ್ದ ಪುತ್ತೂರಿನ ವಾರದ ಸಂತೆಯನ್ನು ಪುತ್ತೂರಿನ ಕಿಲ್ಲೆ ಮೈದಾನದಿಂದ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಗೊಂದಲಕ್ಕೀಡಾದ ಕೆಲ ರಖಂ ತರಕಾರಿ ವ್ಯಾಪಾರಸ್ಥರು ಅಲ್ಲಿಂದ ಉಪ್ಪಿನಂಗಡಿ ಬಳಿಯ 34ನೇ ನೆಕ್ಕಿಲಾಡಿಯ ಸಂತೆ ಮಾರುಕಟ್ಟೆಗೆ ಬಂದು ತರಕಾರಿ ವ್ಯಾಪಾರ ನಡೆಸಿದರು. ಹಾಸನ, ಸಕಲೇಶಪುರ, ಚನ್ನರಾಯಪಟ್ಟಣ ಸೇರಿದಂತೆ ಘಟ್ಟ ಪ್ರದೇಶದ ತರಕಾರಿ ವ್ಯಾಪಾರಿಗಳು ಎಂದಿನಂತೆ ಇಂದು ಕೂಡಾ ಪುತ್ತೂರಿನ ಕಿಲ್ಲೆ ಮೈದಾನಕ್ಕೆ ಸಂತೆ ವ್ಯಾಪಾರಕ್ಕೆ ತೆರಳಿದ್ದರು. ಆದರೆ, ಅಲ್ಲಿ ಅವರಿಗೆ ಸಂತೆ ವ್ಯಾಪಾರಕ್ಕೆ ಅವಕಾಶ ನೀಡದೇ, ಅಲ್ಲಿಂದ ಅವರನ್ನು ಪುತ್ತೂರಿನ ಎಪಿಎಂಸಿ ಪ್ರಾಂಗಣಕ್ಕೆ ಕಳುಹಿಸಲಾಯಿತು. ಆದರೆ, ಅಲ್ಲಿ ಸ್ಥಳಾವಕಾಶದ ಕೊರತೆ ಎದುರಾಯಿತ್ತಲ್ಲದೆ, ಸರಿಯಾದ ಜಾಗ ಸಿಗದೇ ಇಲ್ಲಿ ವ್ಯಾಪಾರ ನಡೆಯಲಿಕ್ಕಿಲ್ಲ ಎಂದು ಭ್ರಮಿಸಿದ ಸಂತೆ ವ್ಯಾಪಾರಕ್ಕೆ ಬಂದಿದ್ದ ರಖಂ ತರಕಾರಿ ವ್ಯಾಪಾರಿಗಳು 34ನೇ ನೆಕ್ಕಿಲಾಡಿಯ ಸಂತೆ ಮೈದಾನವನ್ನು ಗುತ್ತಿಗೆಗೆ ಪಡೆದುಕೊಂಡಿದ್ದ ಧರ್ನಪ್ಪ ಹಾಗೂ ಹನೀಫ್ ನೆಲ್ಯಾಡಿ ಅವರನ್ನು ಸಂಪರ್ಕಿಸಿ, ನೆಕ್ಕಿಲಾಡಿಯಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡಲು ಕೇಳಿಕೊಂಡರು. ಅವರು ಅದಕ್ಕೆ ಅವಕಾಶ ನೀಡಿದ ಬಳಿಕ ನೆಕ್ಕಿಲಾಡಿಗೆ ಆಗಮಿಸಿದ ತರಕಾರಿ ವ್ಯಾಪಾರಿಗಳು ರಖಂ ದರದಲ್ಲಿ ತರಕಾರಿ ವ್ಯಾಪಾರ ನಡೆಸಿದರು. ವ್ಯಾಪಾರ ಇಳಿಕೆ: 34ನೇ ನೆಕ್ಕಿಲಾಡಿಯಲ್ಲಿ ತರಕಾರಿ ವ್ಯಾಪಾರ ನಡೆಯುತ್ತಿದೆ ಎಂಬ ಸುದ್ದಿ ತಿಳಿದು ಹೊಟೇಲ್, ಅಂಗಡಿ ವ್ಯಾಪಾರಿಗಳು ನೆಕ್ಕಿಲಾಡಿಗೆ ಆಗಮಿಸಿ ವ್ಯಾಪಾರ ನಡೆಸಿದರಾದರೂ, ಸಂತೆ ವ್ಯಾಪಾರಿಗಳಿಗೆ ಮಾತ್ರ ಎಂದಿನಂತೆ ವ್ಯಾಪಾರ ಆಗಿರಲಿಲ್ಲ. ಪೂರ್ವಾಹ್ನ 11ಗಂಟೆಗೆಯ ತನಕ ಇಲ್ಲಿ ವ್ಯಾಪಾರ ನಡೆಸಿದ ಸಂತೆ ವ್ಯಾಪಾರಿಗಳು ಬಳಿಕ ಇಲ್ಲಿಂದ ತೆರಳಿದರು.





