ಮದ್ಯ ಬಾಟ್ಲಿಗಳಿಂದ ಶಿಲ್ಪ : ಯುವ ಜನಾಂಗಕ್ಕೆ ಮುನ್ನೆಚ್ಚರಿಕೆಗಾಗಿ ಜಾಗೃತಿ

ಕಾಸರಗೋಡು,ಆ.22 : ಮದ್ಯದ ಬಾಟಲಿಯಿಂದ ಶಿಲ್ಪ ನಿರ್ಮಿಸುವ ಮೂಲಕ ಮದ್ಯದಿಂದ ಉಂಟಾಗುವ ವಿಪತ್ತಿನ ಕುರಿತು ಜಾಗೃತಿ ಮೂಡಿಸಲು ಶಾಲಾ ವಿದ್ಯಾರ್ಥಿಗಳ ಸಹಕಾರದೊಂದಿಗೆ ಚೆರ್ವತ್ತೂರಿನ ಶಿಲ್ಪಿ ಯೋರ್ವರು ಮುಂದೆ ಬಂದಿದ್ದಾರೆ. ಕೇವಲ ಮದ್ಯ ಬಾಟ್ಲಿ ಯಿಂದ ಈ ಶಿಲ್ಪ ತಯಾರಿಸಲಾಗಿದ್ದು , ಎಲ್ಲರ ಗಮನ ಸೆಳೆಯುತ್ತಿದೆ.
ಪಿಲಿಕ್ಕೋಡ್ ಸರಕಾರಿ ಹಯರ್ ಸೆಕಂಡರಿ ಶಾಲೆಯಲ್ಲಿ ಸುರೇಂದ್ರನ್ ಕೂಕನತ್ ಈ ಶಿಲ್ಪವನ್ನು ರಚಿಸಿದ್ದು , ಎನ್ ಎಂ ಎಸ್ ವಿದ್ಯಾರ್ಥಿಗಳ ಸಹಕಾರ ಇವರಿಗೆ ಲಭಿಸಿದೆ.
ಮದ್ಯ ಸೇವಿಸಿ ಅಲ್ಲಲ್ಲಿ ಎಸೆಯುವ ಬಾಟಲಿಗಳನ್ನು ಸಂಗ್ರಹಿಸಿ ಮೂರ್ತಿ ಸ್ಥಾಪನೆ ಮಾಡಿರುವುದು ಇದೆ ಮೊದಲು.
ಮದ್ಯ ಸೇವನೆಯಿಂದ ಜನತೆ ಹಿಂದೆ ಸರಿಯಬೇಕು, ಯುವ ಜನಾಂಗ ಹಾದಿ ತಪ್ಪದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಈ ಶಿಲ್ಪ ನಿರ್ಮಿಸಲಾಗಿದೆ.
ಈ ಶಿಲ್ಪ ವನ್ನು ನಾಳೆ ( ಮಂಗಳವಾರ ) ರಾಜ್ಯ ಅಬಕಾರಿ ಆಯುಕ್ತ ಹೃಷಿರಾಜ್ ಸಿಂಗ್ ಅನಾವರಣಗೊಳಿಸುವರು.
ಅಲ್ಲಲ್ಲಿ ಎಸೆಯುವ ಬಾಟಲಿಗಳಿಂದ ಪರಿಸರಕ್ಕೆ ಹಾನಿ ಧಕ್ಕೆ ಉಂಟಾಗುತ್ತಿದೆ . ಈ ನೈಜತೆಯನ್ನು ವಿಶ್ವದ ಗಮನ ಸೆಳೆಯುವ ನಿಟ್ಟಿನಲ್ಲಿ ಶಾಲೆಯ ವಿದ್ಯಾರ್ಥಿಗಳು ಮದ್ಯ ಬಾಟಲಿ ಗಳನ್ನು ಸಂಗ್ರಹಿಸಿ ಸುರೇಂದ್ರನ್ ಕೂಕನತ್ ರವರ ನೇತೃತ್ವದಲ್ಲಿ ಶಿಲ್ಪ ನಿರ್ಮಿಸಲಾಗಿದೆ. ಇದಕ್ಕಾಗಿ ಮಾದಕ ವಸ್ತು ವಿರೋಧಿ ದಿನದಂದು ಶಾಲೆಯಿಂದ ಒಂದು ಕಿ . ಮೀ ವ್ಯಾಪ್ತಿಯಲ್ಲಿ ೨೫ ಸಾವಿರದಷ್ಟು ಬಾಟಲಿಗಳನ್ನು ವಿದ್ಯಾರ್ಥಿಗಳು ಸಂಗ್ರಹಿಸಿದ್ದರು.
ಬಳಿಕ ಶಾಲೆಯ ದ್ವಾರದ ಬಳಿ ಶಿಲ್ಪ ವನ್ನು ನಿರ್ಮಿಸಿ ಮದ್ಯ ಪಾನದ ವಿಪತ್ತಿನ ಬಗ್ಗೆ ಜಾಗೃತಿ ಮೂಡಿಸುವಂತೆ ಮಾಡಿದೆ.







