‘ಖಾಸಗಿ ಶಾಲೆಗಳ ವ್ಯಾಮೋಹದಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ’
ಪ್ರತಿಭಾ ಕಾರಂಜಿ ಉದ್ಘಾಟನೆ

ಸೊರಬ, ಆ.22: ಸರಕಾರಿ ಶಾಲಾ ಮಕ್ಕಳಿಗೆ ಸರಕಾರದ ವತಿಯಿಂದ ಅನೇಕ ಸೌಲಭ್ಯಗಳು ನೀಡುತ್ತಿದ್ದು, ಖಾಸಗಿ ಶಾಲೆಗಳ ಮೇಲಿರುವ ವ್ಯಾಮೋಹದಿಂದಾಗಿ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಉರ್ದು ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಅನ್ವರ್ ಬಾಷಾ ಮುಲ್ಲಾ ತಿಳಿಸಿದ್ದಾರೆ.
ಸೋಮವಾರ ಪಟ್ಟಣದ ಕಾನಕೇರಿಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 2016-2017ನೆ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಶಿಕ್ಷಕರು ಕಾರಣರಲ್ಲ. ಇಲಾಖೆ ನಮಗೆ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ. ಸರಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಇಲಾಖೆಯಿಂದ ನೀಡಲ್ಪಡುವ ತರಬೇತಿಗಳನ್ನು ಪಡೆದ ನುರಿತರು. ಮಕ್ಕಳ ಕಲಿಕೆಗಾಗಿ ಶಕ್ತಿಮೀರಿ ಕೆಲಸ ಮಾಡುತ್ತಿದ್ದೇವೆೆ. ಸರಕಾರದ ವತಿಯಿಂದ ಕಲ್ಪಿಸುವ ಸೌಲಭ್ಯಗಳ ಬಗ್ಗೆ ಸರ್ಮಪಕ ಮಾಹಿತಿ ನೀಡುವುದರೊಂದಿಗೆ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಶಾಲಾ ಎಸ್‌ಡಿಎಂಸಿ ಹಾಗೂ ಪೋಷಕರು ಹೆಚ್ಚಿನ ಗಮನ ಹರಿಸಬೇಕು ಅವರೊಂದಿಗೆ ಶಿಕ್ಷಕರು ಸಹ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು.
ತಾಲೂಕು ಶಿಕ್ಷಕರ ಸಂಘದ ಪ್ರ.ಕಾರ್ಯದರ್ಶಿ ನಾಗರಾಜ್ ಗೌಡ ಹುನವಳ್ಳಿ ಮಾತನಾಡಿ, ಅತೀ ಕಡಿಮೆ ಅವಧಿಯಲ್ಲಿ ಕಾರ್ಯಕ್ರಮ ನಡೆಸುವಂತೆ ಇಲಾಖೆ ವತಿಯಿಂದ ಸೂಚನೆ ಬಂದಿರುವುದರಿಂದ ಕಾರ್ಯಕ್ರಮಕ್ಕೆ ಮಕ್ಕಳನ್ನು ತಯಾರಿ ಮಾಡಲು ಸಾಧ್ಯವಾಗದಂತಾಗಿದೆ. ನೀಡಿರುವ ಸಮಯದಲ್ಲಿಯೇ ಮಕ್ಕಳ ತಯಾರಿಯೊಂದಿಗೆ ತಾಲೂಕಿನ ವಿವಿಧ ಶಾಲೆಗಳಿಂದ ಶಿಕ್ಷಕರು ಮಕ್ಕಳೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತೋಷ ತಂದಿದೆ. ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರಲು ಇಲಾಖೆಯ ವತಿಯಿಂದ ನಡೆಸುವ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದರು.
ಪತ್ರಕರ್ತ ಮುಹಮ್ಮದ್ ಆರೀಫ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಹಿದಾಯತ್‌ವುಲ್ಲಾ ವಹಿಸಿದ್ದರು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಎಲ್.ರಾಜೇಶ್ವರಿ, ಎಸ್‌ಡಿಎಂಸಿ ಸದಸ್ಯ ಮುಹಮ್ಮದ್ ಗೌಸ್, ಸಿಆರ್‌ಪಿಗಳಾದ ಅಫ್ಸರ್ ಪಾಷಾ, ಶಫಿ ಅಹ್ಮದ್, ಮುಖ್ಯಶಿಕ್ಷಕರಾದ ಮುಸ್ತಫಾ, ಆಯಿಷಾ ಬಾನು ಪ್ರಮುಖರಾದ ಮಕ್ಬೂಲ್ ಅಹ್ಮದ್ ಅಂಕರವಳ್ಳಿ, ಆಸಿಫ್, ಹುಸೇನ್ ಸಾಬ್ ಶಿಕ್ಷಕರಾದ ಯು.ಅಶ್ಪಾಕ್ ಅಹ್ಮದ್, ಝಬೀವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.







