ವಿದ್ಯಾರ್ಥಿಗಳ ಮಾತನ್ನು ಕಿವಿಗೊಟ್ಟು ಆಲಿಸುತ್ತಿದ್ದ ಅರಸು


ಹಿರಿಯರ ಮಾತಿಗೆ ಮನ್ನಣೆ ಕೊಡುವುದರ ಮೂಲಕ, ಅವರೊಂದಿಗೆ ತಮಗಿದ್ದ ರಾಜಕೀಯ ವೈರತ್ವವನ್ನು ಇಲ್ಲವಾಗಿಸಿಕೊಂಡರು. ಮತ್ತೊಂದು ಕಡೆ ಕನ್ನಡ ನಾಡು ನುಡಿಗೆ ಸಲ್ಲಬೇಕಾದ ನ್ಯಾಯವನ್ನೂ ಸಲ್ಲಿಸಿದರು. ಅರಸು ಮುತ್ಸದ್ದಿ ಅನ್ನಿಸಿಕೊಂಡಿದ್ದು, ಎಲ್ಲರಿಗಿಂತ ಭಿನ್ನವಾಗಿ ಕಾಣುವುದು ಇಲ್ಲಿಯೇ.
ಎಪ್ಪತ್ತರ ಹರೆಯದ ಕೆ.ಎಂ.ನಾಗರಾಜ್ ಎಪ್ಪತ್ತರ ದಶಕದ ವಿದ್ಯಾರ್ಥಿ ನಾಯಕರು. ದೇವರಾಜ ಅರಸರ ಯೂತ್ ಬ್ರಿಗೇಡ್‌ನ ಕಟ್ಟಾಳು. ಬೆಂಗಳೂರಿನ ಸಿದ್ದಾಪುರದ ಕೆ.ಎಂ.ನಾಗರಾಜ್, ರಾಜಕೀಯ ಕುಟುಂಬದಿಂದ ಬಂದವರು. ಆ ಕಾಲಕ್ಕೇ ಅವರ ಮನೆಗೆ ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯನವರು ಬಂದುಹೋಗುತ್ತಿದ್ದರು. ತಂದೆ ಹೇಳಿದವರು ಅಭ್ಯರ್ಥಿಗಳಾಗುತ್ತಿದ್ದರು. ಅಂತಹ ಕುಟುಂಬದಿಂದ ಬಂದ ಕೆ.ಎಂ.ನಾಗರಾಜ್ ಬಾಲ್ಯದಲ್ಲಿ ಆರೆಸ್ಸೆಸ್ ಶಾಖೆಗಳಿಗೆ ಹೋಗುತ್ತಿದ್ದವರು, ಬುದ್ಧಿ ಬೆಳೆದಂತೆ ಎಡಪಂಥೀಯ ವಿಚಾರಧಾರೆಯತ್ತ ವಾಲಿದರು. ರಾಮಮನೋಹರ ಲೋಹಿಯಾ, ನೆಹರೂ, ರಷ್ಯಾದ ಕಮ್ಯುನಿಸ್ಟ್ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡರು. ನಂತರ ಎಸ್‌ಎಫ್‌ಐ ಸೇರಿದರು. ಬಸವನಗುಡಿಯ ನ್ಯಾಷನಲ್ ಕಾಲೇಜ್ ವಿದ್ಯಾರ್ಥಿಯಾಗಿ, ಕಬಡ್ಡಿಗಾಗಿ ಎಪಿಎಸ್ ಕಾಲೇಜ್ ಸೇರಿ, ವಿದ್ಯಾರ್ಥಿ ನಾಯಕನಾಗಿ ಗುರುತಿಸಿಕೊಂಡರು. ಸಂಘಟನೆ, ಪ್ರತಿಭಟನೆ, ಅನ್ಯಾಯಗಳ ವಿರುದ್ಧ ಹೋರಾಟದಲ್ಲಿ ಮುಳುಗಿಹೋದ ನಾಗರಾಜ್, ಬಿಎಸ್ಸಿಯನ್ನು ಪೂರೈಸದೆ ಓದಿನಲ್ಲಿ ಹಿಂದೆ ಬಿದ್ದರು. 1968ರಲ್ಲಿ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿಯಾಗಿ, ಮುಂಚೂಣಿ ನಾಯಕನಾಗಿ ಗುರುತಿಸಿಕೊಂಡವರು, ನಂತರ ಕಾಂಗ್ರೆಸ್ ಪಕ್ಷ ಸೇರಿ ಯೂತ್ ಕಾಂಗ್ರೆಸ್‌ನಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿದರು. ಇಂದಿರಾ ಬ್ರಿಗೇಡ್‌ನ ಮುಂದಾಳುವಾಗಿ ಕುಖ್ಯಾತಿಯನ್ನು ಸಂಪಾದಿಸಿದರು. 1985ರಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ವಿರುದ್ಧ ಹಾಗೂ 1999ರಲ್ಲಿ ಬಿಜೆಪಿಯ ಸುಬ್ಬಾರೆಡ್ಡಿ ವಿರುದ್ಧ ಸ್ಪರ್ಧಿಸಿ ಸೋಲುಂಡರು. ಆ ನಂತರ ಪಕ್ಷದ ಕೆಲಸಕ್ಕಷ್ಟೇ ಸೀಮಿತವಾಗಿ, ಕೆಪಿಸಿಸಿಯಲ್ಲಿ ಜಾಯಿಂಟ್ ಸೆಕ್ರೆಟರಿ, ಜನರಲ್ ಸೆಕ್ರೆಟರಿ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಈಗ ದೇವರಾಜ ಅರಸು ಜನ್ಮಶತಮಾನೋತ್ಸವ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ.
1968ರಿಂದಲೂ ದೇವರಾಜ ಅರಸು ಅವರನ್ನು ಬಲ್ಲ ನಾಗರಾಜ್, ವಿದ್ಯಾರ್ಥಿ ಸಂಘಟನೆಯ ನೇತೃತ್ವ ವಹಿಸಿಕೊಂಡು ನಡೆಸಿದ ಪ್ರತಿಭಟನೆಗಳು, ಹೋರಾಟಗಳ ಮೂಲಕ ಅಧಿಕಾರಸ್ಥ ಅರಸರನ್ನು ಭೇಟಿಯಾದವರು, ನಂತರದ ದಿನಗಳಲ್ಲಿ ಅವರ ಜನಪರ ಕಾರ್ಯಕ್ರಮಗಳಿಗೆ ಮಾರುಹೋಗಿ, ಕಾಂಗ್ರೆಸ್ ಪಕ್ಷ ಸೇರಿ, ಅವರ ಹಿಂಬಾಲಕರಾದರು. 1972ರಿಂದ 1982ರವರೆಗೆ, ಸುಮಾರು 10 ವರ್ಷಗಳ ಕಾಲ ಅರಸರ ನಿಕಟವರ್ತಿಗಳಾಗಿ, ಅವರನ್ನು ಹತ್ತಿರದಿಂದ ಬಲ್ಲವರು. ಅವರು ಕಂಡ ಅರಸು ಇಲ್ಲಿದ್ದಾರೆ.
ವಿದ್ಯಾರ್ಥಿಗಳ ಮಾತಿಗೆ ಬೆಲೆ
ಬೆಂಗಳೂರು ಯೂನಿವರ್ಸಿಟಿ ಸ್ಟೂಡೆಂಟ್ ಆರ್ಗನೈಸೇಷನ್‌ನ ಸೆಕ್ರೆಟರಿಯಾಗಿದ್ದಾಗ, ಹಾಸನದಲ್ಲಿ ವಿದ್ಯಾರ್ಥಿಯೊಬ್ಬ ಲಾಕಪ್‌ನಲ್ಲಿ ಸತ್ತಿದ್ದನ್ನು ಕೈಗೆತ್ತಿಕೊಂಡ ನಮ್ಮ ವಿದ್ಯಾರ್ಥಿ ಸಂಘಟನೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಿಳಿದು ಧರಣಿ ಉಪವಾಸಕ್ಕೆ ಕೂತಿತ್ತು. ಆಗ ಮುಖ್ಯಮಂತ್ರಿ ದೇವರಾಜ ಅರಸರು ನನ್ನನ್ನು ಕರೆಸಿ ಮಾತನಾಡಿ, ‘‘ನಿಮ್ಮ ನಾಯಕರೊಂದಿಗೆ ವಿಧಾನಸೌಧಕ್ಕೆ ಬನ್ನಿ, ಮಾತನಾಡೋಣ’’ ಎಂದಿದ್ದರು. ನಮ್ಮ ನಾಯಕ ಎಚ್.ಎಂ.ರೇವಣ್ಣರ ಜೊತೆ ವಿಧಾನಸೌಧದಲ್ಲಿ ಅರಸರನ್ನು ಭೇಟಿ ಮಾಡಿದೆ. ಎಲ್ಲವನ್ನು ತಾಳ್ಮೆಯಿಂದ ಕೇಳಿದ ಅರಸು, ವಿದ್ಯಾರ್ಥಿಗಳು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಕೈ ಬಿಡುವಂತೆ ತಿಳಿಸಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ವೆರಿ ನೆಕ್ಟ್ಸ್ ಡೇ... ಹಾಸನದ ಎಸ್ಪಿಯನ್ನು ವರ್ಗಾವಣೆ ಮಾಡಿ, ಪೊಲೀಸ್ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಕೈಗೊಂಡಿದ್ದರು. ತನಿಖೆಗೆ ಆಯೋಗವನ್ನು ರಚಿಸಲು ಆದೇಶಿಸಿದ್ದರು. ಅರಸರನ್ನು ಮೆಚ್ಚಲು, ಅವರನ್ನು ಹಿಂಬಾಲಿಸಲು, ನಾಯಕನನ್ನಾಗಿ ಒಪ್ಪಲು ಕಾರಣ ಸಿಕ್ಕಿತ್ತು.
ಬೂಸಾಗೆ ಬಸವಲಿಂಗಪ್ಪ ಬಲಿ
ಪೌರಾಡಳಿತ ಸಚಿವ ಬಿ.ಬಸವಲಿಂಗಪ್ಪನವರು ಮೈಸೂರಿನ ಸಮಾರಂಭವೊಂದರಲ್ಲಿ ವಿದ್ಯಾರ್ಥಿಗಳನ್ನು ಕುರಿತು, ‘‘ಕನ್ನಡ ಸಾಹಿತ್ಯವನ್ನು ಓದಬೇಡಿ, ಅದು ಬರಿ ಬೂಸಾ ಸಾಹಿತ್ಯ, ಇಂಗ್ಲಿಷ್ ಓದಿ’’ ಎಂದು ಹೇಳಿಕೆ ಕೊಟ್ಟಿದ್ದರು. ನಾವು ವಿದ್ಯಾರ್ಥಿಗಳನ್ನು ಸಂಘಟಿಸಿ, ಮಂತ್ರಿಗಳ ಹೇಳಿಕೆ ತಪ್ಪು, ವಾಪಸ್ ಪಡೆಯಲು ಆಗ್ರಹಿಸಿ, ಕಪ್ಪು ಪಟ್ಟಿಯ ಪ್ರತಿಭಟನೆ ರೂಪಿಸಿದೆವು. ಮಂತ್ರಿ ಬಸವಲಿಂಗಪ್ಪನವರು, ‘‘ಇದಕ್ಕೆಲ್ಲ ಬಗ್ಗುವುದಿಲ್ಲ ನಾನು’’ ಎಂದರು. ನಂತರ ದೇಜಗೌ, ಚಿದಾನಂದಮೂರ್ತಿ, ಜಿಎಸ್‌ಎಸ್, ಕೋ.ಚೆಯವರು ನಮ್ಮನ್ನು ಬೆಂಬಲಿಸಿ ಹೇಳಿಕೆ ಕೊಟ್ಟರು. ಅದಕ್ಕೂ ಕೇರ್ ಮಾಡಲಿಲ್ಲ. ಕೊನೆಗೆ ನಗರದ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಒಂದುಗೂಡಿಸಿ, ವಿಧಾನಸೌಧದ ಮುಂದೆ ಭಾರೀ ಪ್ರತಿಭಟನೆಯನ್ನು ಹಮ್ಮಿಕೊಂಡೆವು. ಸುಮಾರು 50 ಸಾವಿರ ವಿದ್ಯಾರ್ಥಿಗಳು ಅದರಲ್ಲಿ ಭಾಗವಹಿಸಿ, ಬಸವಲಿಂಗಪ್ಪನವರ ಪ್ರತಿಕೃತಿ ದಹನ ಮಾಡಿ, ಅವರನ್ನು ಮಂತ್ರಿ ಸ್ಥಾನದಿಂದ ಕಿತ್ತುಹಾಕಬೇಕು ಎಂದು ಮುಖ್ಯಮಂತ್ರಿ ದೇವರಾಜ ಅರಸರನ್ನು ಭೇಟಿ ಮಾಡಿ ಮನವಿ ಅರ್ಪಿಸಿದೆವು. ಅರಸರು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ಕೊಟ್ಟರು. ಅವತ್ತೇ ಕ್ಯಾಬಿನೆಟ್ ಮೀಟಿಂಗ್ ಕರೆದು, ಎಲ್ಲ ಮಂತ್ರಿಗಳ ರಾಜೀನಾಮೆ ಪಡೆದರು. ಒಂದೆರಡು ದಿನದಲ್ಲಿ ಬಸವಲಿಂಗಪ್ಪನವರನ್ನು ಬಿಟ್ಟು ಸಂಪುಟ ಪನರ್ರಚನೆ ಮಾಡಿದರು.
ಅದು ನಮ್ಮ ಗೆಲುವಾಯಿತು, ಅರಸರನ್ನು ಮೆಚ್ಚಲು ಕಾರಣವಾಯಿತು. ಅದಾದ ನಂತರ ಸ್ಟೂಡೆಂಟ್ ಕೌನ್ಸಿಲ್ ಚುನಾವಣೆ ಎದುರಾಗಿ ನಾನು ಕಾರ್ಯದರ್ಶಿಯಾಗಿ ಆಯ್ಕೆಯಾದೆ. ನಮ್ಮ ಕೌನ್ಸಿಲ್ ಉದ್ಘಾಟನಾ ಸಮಾರಂಭ ಜೋರಾಗಿರಬೇಕೆಂದು ಯೋಚಿಸಿ, ಅದರ ಉದ್ಘಾಟನೆಗೆ ಮುಖ್ಯಮಂತ್ರಿ ದೇವರಾಜ ಅರಸರನ್ನು ಕರೆಯಬೇಕೆಂದು ತೀರ್ಮಾನಿಸಿದೆವು. ಅರಸು ಯಾವಾಗಲೂ ಯುವಕರ ಪರ, ವಿದ್ಯಾರ್ಥಿಗಳ ಪರವಿದ್ದವರು. ಈ ದೇಶದಲ್ಲಿ ಏನಾದರೂ ಬದಲಾವಣೆಯಾಗಬೇಕಾದರೆ ಅದು ಯುವಕರಿಂದಲೇ ಎಂದು ಬಲವಾಗಿ ನಂಬಿದ್ದರು. ಅದಕ್ಕಾಗಿ ಅವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ನಮ್ಮ ಕೌನ್ಸಿಲ್ ಉದ್ಘಾಟನಾ ಸಮಾರಂಭಕ್ಕೂ ಬಂದರು. ಜೊತೆಗೆ ರಾಜ್ಯಪಾಲರಾದ ಮೋಹನ್‌ಲಾಲ್ ಸುಖಾಡಿಯಾ, ಶಿಕ್ಷಣ ಮಂತ್ರಿ ಮಲ್ಲಿಕಾರ್ಜುನ ಸ್ವಾಮಿಯವರನ್ನು ಕರೆತಂದು, ಅದ್ದೂರಿ ಸಮಾರಂಭವಾಗುವಂತೆ ನೋಡಿಕೊಂಡರು.
ದಿಗ್ಗಜರ ಸಮಾಗಮ
1973ರಲ್ಲಿ ಕರ್ನಾಟಕ ಎಂದು ನಾಮಕರಣ ಮಾಡಿದ ಮುಖ್ಯಮಂತ್ರಿ ದೇವರಾಜ ಅರಸರನ್ನು ಸಾರಿಗೆ ಸಂಸ್ಥೆಯ ನೌಕರರ ಕನ್ನಡ ಸಂಘದವರು ಸನ್ಮಾನ ಮಾಡಬೇಕೆಂದುಕೊಂಡರು. ಆ ಸಂಘದಲ್ಲಿ ನಾನೂ ಇದ್ದೆ. ನಾನೇ ಮುಂದೆ ನಿಂತು ಅತಿಥಿಗಳನ್ನು ಆಹ್ವಾನಿಸಿದೆ. ರಾಜ್ಯಪಾಲ ಮೋಹನ್‌ಲಾಲ್ ಸುಖಾಡಿಯಾ, ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪ್ಪನವರ ಜೊತೆಗೆ ಹಾಲಿ ಮುಖ್ಯಮಂತ್ರಿ ದೇವರಾಜ ಅರಸರನ್ನು ಕರೆಸಿದೆವು. ಅದೊಂದು ಅವಿಸ್ಮರಣೀಯ ಸಭೆ. ಏಕೆಂದರೆ ಕಾಂಗ್ರೆಸ್ ಇಬ್ಭಾಗವಾಗಿ ಕೇವಲ ನಾಲ್ಕು ವರ್ಷವಾಗಿತ್ತು. ಅರಸು ಇಂದಿರಾ ಪರವಿದ್ದು, ಅಧಿಕಾರಕ್ಕೇರಿದರೆ; ಇಂದಿರಾ ವಿರೋಧವಿದ್ದ ನಿಜಲಿಂಗಪ್ಪನವರು ಮತ್ತೊಂದು ಗುಂಪಿನ ನಾಯಕರಾಗಿ, ಅಧಿಕಾರ ಕಳೆದುಕೊಂಡಿದ್ದರು. ನಿಜಲಿಂಗಪ್ಪ ಮತ್ತು ಇಂದಿರಾ ಗಾಂಧಿ ಎಂಬ ದಿಗ್ಗಜರ ನಡುವೆ ಇದ್ದದ್ದು ದೇವರಾಜ ಅರಸು. ಇಬ್ಬರಿಗೂ ಭಿನ್ನವಾದ ರಾಜಕಾರಣ ಮಾಡಿ, ನಾಯಕನಾಗಿ ರೂಪುಗೊಂಡಿದ್ದರು. ಕರ್ನಾಟಕದ ರಾಜಕಾರಣದಲ್ಲಿದ್ದ ಮೇಲ್ಜಾತಿಯ ಹಿಡಿತವನ್ನು ಸಡಿಲಿಸಿದ್ದರು. ಭಿನ್ನ ಬಗೆಯ ರಾಜಕಾರಣಕ್ಕೆ ನಾಂದಿ ಹಾಡಿದ್ದರು. ಇಂತಹ ಸಂದರ್ಭದಲ್ಲಿ, ರಾಜಕೀಯ ಎದುರಾಳಿಗಳನ್ನು ಒಂದೇ ವೇದಿಕೆಯಲ್ಲಿರುವಂತೆ ನೋಡಿಕೊಂಡಿದ್ದೆವು. ಈ ಸಭೆಯ ಮಹತ್ವವೇನೆಂದರೆ, ಮೊದಲಿಗೆ ಕೆಂಗಲ್ ಮತ್ತು ನಿಜಲಿಂಗಪ್ಪನವರು ಮಾತನಾಡಿದರು. ಕನ್ನಡ ಆಡಳಿತ ಭಾಷೆಯನ್ನಾಗಿ ಮಾಡಬೇಕು, ಕಲೆ-ಸಂಸ್ಕೃತಿಗೆ ಪ್ರೋತ್ಸಾಹ ನೀಡಬೇಕು, ಕನ್ನಡ ಸಾಹಿತ್ಯ ಪರಿಷತ್ತಿಗೆ ಸಹಕಾರ ಹಸ್ತ ಚಾಚಬೇಕು, ಕನ್ನಡ ನಾಡು ನುಡಿಗೆ ಸರಕಾರ ಸ್ಪಂದಿಸಬೇಕು....ಹೀಗೆ ಕನ್ನಡಕ್ಕೆ ಸಂಬಂಧಿಸಿದಂತೆ ಇಬ್ಬರೂ ತುಂಬಾ ಮಹತ್ವದ ಮಾತುಗಳನ್ನು ಸಲಹಾ ರೂಪದಲ್ಲಿ ನೀಡಿದ್ದರು. ಹಿರಿಯರ ಮಾತುಗಳನ್ನು ಕಿವಿಗೊಟ್ಟು ಕೇಳಿದ ಮುಖ್ಯಮಂತ್ರಿ ದೇವರಾಜ ಅರಸು, ಅವರು ಹೇಳಿದ್ದನ್ನೆಲ್ಲ ನೀಟಾಗಿ ನೋಟ್ಸ್ ಮಾಡಿಕೊಂಡರು.
ನಿಜಲಿಂಗಪ್ಪನವರು ಮತ್ತು ಕೆಂಗಲ್ ಕೊಟ್ಟ ಸಲಹೆಗಳನ್ನು ಒಂದೊಂದಾಗಿ ಅನುಷ್ಠಾನಕ್ಕೆ ತಂದರು. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿದರು. ಕಲೆ-ಸಂಸ್ಕೃತಿ ಪ್ರೋತ್ಸಾಹದ ದ್ಯೋತಕವಾಗಿ ಕರ್ನಾಟಕ ಚಿತ್ರಕಲಾ ಪರಿಷತ್ತಿಗೆ ಕುಮಾರಕೃಪಾ ಗೆಸ್ಟ್ ಹೌಸ್ ಪಕ್ಕ ಜಾಗ ಕೊಟ್ಟರು. ಅಲ್ಲಿಯವರೆಗೆ ಭಿಕ್ಷೆ ಬೇಡಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ತಿಗೆ, ಇನ್ನುಮುಂದಿನ ಎಲ್ಲ ಕೆಲಸ ಕಾರ್ಯಗಳಿಗೆ ಸರಕಾರವೇ ಹಣಕಾಸಿನ ನೆರವು ನೀಡಲಾಗುವುದು ಎಂದರು.
ಹಿರಿಯರ ಮಾತಿಗೆ ಮನ್ನಣೆ ಕೊಡುವುದರ ಮೂಲಕ, ಅವರೊಂದಿಗೆ ತಮಗಿದ್ದ ರಾಜಕೀಯ ವೈರತ್ವವನ್ನು ಇಲ್ಲವಾಗಿಸಿಕೊಂಡರು. ಮತ್ತೊಂದು ಕಡೆ ಕನ್ನಡ ನಾಡು ನುಡಿಗೆ ಸಲ್ಲಬೇಕಾದ ನ್ಯಾಯವನ್ನೂ ಸಲ್ಲಿಸಿದರು. ಅರಸು ಮುತ್ಸದ್ದಿ ಅನ್ನಿಸಿಕೊಂಡಿದ್ದು, ಎಲ್ಲರಿಗಿಂತ ಭಿನ್ನವಾಗಿ ಕಾಣುವುದು ಇಲ್ಲಿಯೇ.
ಬಡ ಬಾಲಕೃಷ್ಣೇಗೌಡನಿಗೆ ಕೆಲಸ
ಸರಕಾರಿ ನೌಕರಿಗೆ ಆಗ ವಯಸ್ಸು 28ಕ್ಕೆ ಸೀಮಿತಗೊಳಿಸಿದ್ದರು. ನನ್ನ ಸ್ನೇಹಿತ ಬಾಲಕೃಷ್ಣೇಗೌಡನಿಗೆ ಇನ್ನು ಕೆಲವೇ ದಿನಗಳಲ್ಲಿ 28 ತುಂಬಿ, ಸರಕಾರಿ ನೌಕರಿ ಸಿಗುವುದಿಲ್ಲ ಎಂಬುದು ಖಾತ್ರಿಯಾಗಿತ್ತು. ಆಗ ಅಳುತ್ತ ಬಂದ ಬಾಲಕೃಷ್ಣೇಗೌಡನನ್ನು ನಾನು ಮುಖ್ಯಮಂತ್ರಿ ಅರಸರಲ್ಲಿಗೆ ಕರೆದುಕೊಂಡುಹೋಗಿದ್ದೆ. ಆಗ ಸಮಯ 11:30. ಅರಸರು ವಿಧಾನಸೌಧಕ್ಕೆ ಎಂಟ್ರಿಯಾಗುವ ಸಮಯಕ್ಕೆ ಸರಿಯಾಗಿ ಬಾಗಿಲಲ್ಲಿ ನಾವು ಕಾದು ನಿಂತೆವು. ಅರಸು ಬರುತ್ತಿದ್ದಂತೆ, ಅವರಿಗೆ ಬಾಲಕೃಷ್ಣೇಗೌಡನ ಕತೆ ಹೇಳಿ, ‘‘ಬಡವ ಸರ್, ಕೆಲಸವಿಲ್ಲವೆಂದರೆ ಕುಟುಂಬಕ್ಕೆ ಕಷ್ಟವಾಗಲಿದೆ’’ ಎಂದೆ. ಹಾಗೆ ಹೇಳುತ್ತಿದ್ದಂತೆಯೇ ಬಾಲಕೃಷ್ಣೇಗೌಡ ಅರಸರ ಕಾಲಿಗೆ ಬಿದ್ದ. ದೇವರಾಜ ಅರಸರಿಗೆ ಏನನ್ನಿಸಿತು, ಆ ತಕ್ಷಣವೇ ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಫೋನ್ ಮಾಡಿಸಿ, ಆತನಿಗೊಂದು ಕೆಲಸ ಕೊಡಿಸಿದರು. ನಾವು ಆ ತಕ್ಷಣವೇ ಬೆಂಗಳೂರು ವಿಶ್ವವಿದ್ಯಾನಿಲಯಕ್ಕೆ ಹೋಗಿ, ರಿಜಿಸ್ಟ್ರಾರ್ ಸೂರ್ಯಪ್ರಸಾದ್‌ರನ್ನು ಕಂಡು, ಮುಖ್ಯಮಂತ್ರಿಗಳ ವೌಖಿಕ ಆದೇಶವನ್ನು ತಿಳಿಸಿದೆವು. ಸಂಜೆ 4:30ರ ವೇಳೆಗೆ ಬಾಲಕೃಷ್ಣೇಗೌಡನ ಕೈಯಲ್ಲಿ ಅಪಾಯಿಂಟ್‌ಮೆಂಟ್ ಆರ್ಡರ್ ಇತ್ತು. ಬೆಳಗ್ಗೆ ಅರಸು ಹೇಳಿದ್ದು ಸಂಜೆ ವೇಳೆಗೆ ಕಾರ್ಯರೂಪಕ್ಕೆ ಬಂದಿತ್ತು. ಬಡವರ ಕಂಡರೆ ಅರಸರಿಗೆ ಆ ಪರಿಯ ಕಾಳಜಿ. ಬರಿ ಕಾಳಜಿಯಲ್ಲ, ಕಾರ್ಯರೂಪದಲ್ಲೂ ಕಾಣುತ್ತಿತ್ತು. ಅದು ಅರಸು ಸ್ಟೈಲ್ ಆಫ್ ವರ್ಕಿಂಗ್.
ಚುನಾವಣೆ ಕೇಸ್-ಅರಸು ನಿರ್ಲಿಪ್ತ
1978ರ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಕೆಲಸ ಮಾಡಲು 100 ಜನರಿದ್ದ ತಂಡ ಬೆಂಗಳೂರಿನಿಂದ ಹೋಗಿತ್ತು. ನಮ್ಮ ತಂಡಕ್ಕೆ ಖಾಂಡ್ಯ ಹೋಬಳಿಯ ಕಡಬಗೆರೆಯ 19 ಬೂತ್‌ಗಳ ಉಸ್ತುವಾರಿ ವಹಿಸಿದರು. ಡಿ.ಬಿ.ಚಂದ್ರೇಗೌಡರು ಎಲೆಕ್ಷನ್ ಏಜೆಂಟ್ ಆಗಿದ್ದರು. ಆಗ ಅಲ್ಲಿ ಪ್ಲಾಂಟೇಷನ್‌ಗಳಲ್ಲಿದ್ದ ಕೂಲಿ ಕಾರ್ಮಿಕರಿಗೆ ಡಬಲ್ ಸಂಬಳದ ಆಸೆ ತೋರಿಸಿ, ಹೊರಗೆ ಹೋಗಿ ಕಾಂಗ್ರೆಸ್‌ಗೆ ಓಟು ಹಾಕದಂತೆ ತಡೆಹಿಡಿದಿದ್ದರು. ನಮ್ಮ ತಂಡ 10-15 ಪ್ಲಾಂಟೇಷನ್‌ಗಳಿಗೆ ನುಗ್ಗಿ ಕೂಲಿ ಕಾರ್ಮಿಕರನ್ನು ಹೊರ ತಂದೆವು. ಈ ಗಲಾಟೆಯಲ್ಲಿ ನಮಗೂ ಜನತಾ ಪಾರ್ಟಿಯವರಿಗೂ ಜಗಳಗಳಾದವು. ನಮ್ಮ ಎದುರಾಳಿ ತಂಡದಲ್ಲಿ ಜಾರ್ಜ್ ಫೆರ್ನಾಂಡಿಸ್ ಸಹೋದರ ಮೈಕಲ್ ಫೆರ್ನಾಂಡಿಸ್ ಇದ್ದರು. ಅವರು ಕೇಂದ್ರ ಸರಕಾರದ ನೆರವು ಪಡೆದು ನಮ್ಮ ಮೇಲೆ ಕೇಸು ದಾಖಲಿಸಿದರು. ಆರೋಪಿ ನಂಬರ್ ಒನ್ ಡಿ.ಬಿ.ಚಂದ್ರೇಗೌಡ, ಆರೋಪಿ ನಂಬರ್ ಟೂ ನಾನು. ಇಲ್ಲೊಂದು ಚಮತ್ಕಾರ ನಡೆಯಿತು. ಇಂದಿರಾ ಗಾಂಧಿಯವರಿಗೆ ಜಾಗ ಬಿಟ್ಟುಕೊಟ್ಟ ಡಿ.ಬಿ.ಚಂದ್ರೇಗೌಡರಿಗೆ ಎಂಎಲ್ಸಿ ಮಾಡಿ, ಮಂತ್ರಿ ಮಾಡುವ ಭರವಸೆ ನೀಡಲಾಗಿತ್ತು. ಹಾಗಾಗಿ ದೇವರಾಜ ಅರಸರ ಆದೇಶದಂತೆ, ಅವರ ಹೆಸರನ್ನು ಎಫ್‌ಐಆರ್‌ನಿಂದ ತೆಗೆಸಲಾಯಿತು. ಹಾಗಾಗಿ ನಾನು ನಂಬರ್ ಒನ್ ಆರೋಪಿಯಾದೆ. ಆಮೇಲೆ ನಾನೂ-ಮೈಕೆಲ್ ಇಬ್ಬರೂ ಬೆಂಗಳೂರಿನವರು. ಕೋರಿಕೆ ಮೇರೆಗೆ ಕೇಸು ಇಲ್ಲಿಗೆ ವರ್ಗವಾಯಿತು. ಸುಮಾರು ದಿನ ಅಲೆದಾಟವಾಯಿತು. ಇದಕ್ಕೊಂದು ಕೊನೆ ಕಾಣಿಸಬೇಕೆಂದು ನಿರ್ಧರಿಸಿ, ಚಂದ್ರೇಗೌಡರಿಗೆ ಮಾಡಿದ್ದನ್ನೇ ಮಾನದಂಡವನ್ನಾಗಿಟ್ಟುಕೊಂಡು ಅರಸರನ್ನು ಕಾಣಲು ಬಾಲಬ್ರೂಯಿಗೆ ಹೋದೆ. ಆದರೆ ಅದೇಕೋ ನನ್ನ ಬಗ್ಗೆ, ನನ್ನ ಕೇಸಿನ ಬಗ್ಗೆ ಅಷ್ಟೊಂದು ಕಾಳಜಿ ತೋರಿಸಲಿಲ್ಲ. ಅರಸರ ನಿರ್ಲಿಪ್ತತೆ, ನಿರಾಸಕ್ತಿ ನನ್ನಲ್ಲಿ ಕಸಿವಿಸಿಯುಂಟಾಯಿತು, ಬೇಸರವೂ ಆಯಿತು.
ಅಪ್ಪಾಜಿಯಿಂದ ಎಂದ ಚಂದ್ರಪ್ರಭಾ
ಚಿಕ್ಕಮಗಳೂರು ಉಪಚುನಾವಣೆಯ ಫಲಿತಾಂಶದ ದಿನ ನಾನು ಮತ್ತು ಎಚ್.ಎಂ.ರೇವಣ್ಣ ಕಲ್ಲಳ್ಳಿಯಲ್ಲಿದ್ದೆವು. ರೇಡಿಯೋನಲ್ಲಿ ಆಗಾಗ ಬರುತ್ತಿದ್ದ ಫಲಿತಾಂಶದತ್ತಲೇ ನಮ್ಮೆಲ್ಲರ ಗಮನ, ಚರ್ಚೆ, ಮಾತುಕತೆ. ನಮ್ಮ ಜೊತೆ ಅಂದು ಕೆಂಪರಾಜ್ ಅರಸು ಮತ್ತು ಚಂದ್ರಪ್ರಭಾ ಅರಸು ಇದ್ದರು. ಹೀಗೇ ಮಾತನಾಡುತ್ತ ನಾನು, ‘‘ಮೇಡಂ ಹೆಸರಿನಲ್ಲಿಯೇ ಎಷ್ಟೋ ಜನ ಗೆದ್ದುಬಿಟ್ಟರು...’’ ಎಂದೆ. ಏಕೆಂದರೆ ಅದನ್ನು ನಾನು ಕಣ್ಣಾರೆ ಕಂಡಿದ್ದೆ. ಯಾರ್ಯಾರೋ, ಹೆಸರೇ ಇಲ್ಲದವರು, ರಾಜಕಾರಣಕ್ಕೆ ಹೊಸಬರು, ಜಾತಿ ಬಲವಾಗಲಿ, ಹಣಬಲವಾಗಲಿ ಇಲ್ಲದವರು- 1978 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದುಬಂದರು. ಆನೇಕಲ್‌ನ ಶಾಸಕನೊಬ್ಬ ಇಂದಿರಾ ಗಾಂಧಿಯವರ ದೊಡ್ಡ ಕಟೌಟ್ ಹಾಕಿಕೊಂಡೇ ಗೆದ್ದಿದ್ದರು. ನಾನು ಹಾಗೆಂದದ್ದೆ ತಡ ಪಕ್ಕದಲ್ಲಿ ಕೂತಿದ್ದ ಅರಸರ ಪುತ್ರಿ ಚಂದ್ರಪ್ರಭಾ ಅರಸು ‘‘ಫ್ಲೇರ್‌ಅಪ್’’ ಆದರು. ಎಲ್ಲ ಅಪ್ಪಾಜಿಯಿಂದ ಎಂದರು. ಅವರ ಕೋಪ, ಸಿಟ್ಟು, ಏರು ಧ್ವನಿ ನಮ್ಮ ಸದ್ದಡಗಿಸಿತ್ತು.
ನಾನು ಎಂಬ ಅಹಂ
ಅರಸರು ಚಿಕ್ಕಮಗಳೂರಿನ ಉಪಚುನಾವಣೆಯ ಗೆಲುವಿನ ನಂತರ, ಇಂದಿರಾ ಗೆದ್ದಿದ್ದು ನನ್ನಿಂದ ಎಂಬ ಭ್ರಮೆಗೊಳಗಾದರು. ಇದಕ್ಕೂ ಹಿಂದೆ ನಡೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಬಹುಮತ ಸಿಕ್ಕಿತ್ತು. ಹೀಗಾಗಿ ಅರಸರು ಎಲ್ಲವೂ ನನ್ನಿಂದಲೇ ಎಂಬ ಅಹಂಗೆ ಒಳಗಾದರು. ಸುತ್ತಲಿದ್ದ ಭಟ್ಟಂಗಿಗಳಿಗೆ ಕಿವಿ ಕೊಟ್ಟು ಉಬ್ಬಿಹೋದರು. ದಿಲ್ಲಿಯಲ್ಲಿ ಚರಣ್‌ಸಿಂಗ್ ಜೊತೆ ಗುರುತಿಸಿಕೊಂಡು ರಾಷ್ಟ್ರೀಯ ನಾಯಕರಂತೆ ಪೋಸು ಕೊಡತೊಡಗಿದರು. ಇಂದಿರಾ ಗಾಂಧಿಯವರ ಕಾಂಗ್ರೆಸ್ ಪಕ್ಷ ದೇಶದಾದ್ಯಂತ ಸೋತು, ಅಧಿಕಾರವಿಲ್ಲದೆ ಸೊರಗಿರುವಾಗ ದೇವರಾಜ ಅರಸರು ಅವರ ಪರ ನಿಂತು ನೈತಿಕ ಸ್ಥೈರ್ಯ ತುಂಬಬೇಕಿತ್ತು. ಆದರೆ ವಿರೋಧಿಗಳ ಜೊತೆ ಕೈಜೋಡಿಸಿ, ಇಂದಿರಾರನ್ನು ಕಡೆಗಣಿಸಿದರು. ಇದರಿಂದ ಮನನೊಂದ ಇಂದಿರಾ ಗಾಂಧಿಯವರು, ಅರಸು ನಮ್ಮ ವಿರೋಧಿಗಳೊಂದಿಗೆ ಗುರುತಿಸಿಕೊಳ್ಳುತ್ತಿದ್ದಾರೆ, ಅವರು ಹಾಗೇ ಮುಂದುವರಿದರೆ, ಮುಂದೊಂದು ದಿನ ಕಾಂಗ್ರೆಸ್ ಪಕ್ಷವೇ ನಿರ್ನಾಮವಾಗಬಹುದು, ನಾವು ನಮ್ಮ ಪಕ್ಷವನ್ನಾದರೂ ಉಳಿಸಿಕೊಳ್ಳೋಣವೆಂಬ ತೀರ್ಮಾನಕ್ಕೆ ಬಂದು, ಮುಖ್ಯಮಂತ್ರಿ ಸ್ಥಾನಕ್ಕೆ ಭಂಗ ತರದೆ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಎಸ್.ಬಂಗಾರಪ್ಪನವರನ್ನು ನೇಮಕ ಮಾಡಿದರು. ಈ ನೇಮಕವನ್ನೇ ನೆಪ ಮಾಡಿಕೊಂಡು, ಅದನ್ನೇ ಅವರಿಗೆ ಮಾಡಿದ ಅವಮಾನವೆಂದು ಭಾವಿಸಿದ ಅರಸು, ಇಂದಿರಾ ಗಾಂಧಿ ವಿರುದ್ಧ ಸೆಟೆದು ನಿಂತರು, ಅರಸು ಪಕ್ಷ ಕಟ್ಟಿದರು. ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತು ರಾಜೀನಾಮೆ ಕೊಟ್ಟು ಅಧಿಕಾರದಿಂದ ಕೆಳಗಿಳಿದರು.
ಇಷ್ಟೆಲ್ಲ ಆದದ್ದು ಅರಸು ಅವರ ನಾನು ಎಂಬ ಅಹಂನಿಂದಲೇ ಹೊರತು, ಇಂದಿರಾ ಗಾಂಧಿಯಿಂದಲ್ಲ. ನನ್ನ ಪ್ರಕಾರ ಇಂದಿರಾ ಗಾಂಧಿಯವರು ದೇವರಾಜ ಅರಸರಿಗೆ ಯಾವ ದ್ರೋಹವನ್ನು ಬಗೆಯಲಿಲ್ಲ. ಬದಲಿಗೆ ನಿರಂತರವಾಗಿ ಬೆಂಬಲಿಸುತ್ತಲೇ ಬಂದರು. 1969ರಲ್ಲಿ ಕಾಂಗ್ರೆಸ್ ಇಬ್ಭಾಗವಾದಾಗ, ಇಂದಿರಾ ಗಾಂಧಿಯವರ ಕಾಂಗ್ರೆಸ್‌ನಲ್ಲಿ ಬಲಾಢ್ಯ ಜಾತಿಗೆ ಸೇರಿದ ನಾಯಕರು ಹಲವರಿದ್ದರು. ಆದರೆ ಮೇಡಂ, ಅವರನ್ನೆಲ್ಲ ಬಿಟ್ಟು ಅತ್ಯಂತ ಕಡಿಮೆ ಜನಸಂಖ್ಯೆಯುಳ್ಳ ಜಾತಿಯ ದೇವರಾಜ ಅರಸರನ್ನು ಅಡ್ಹಾಕ್ ಸಮಿತಿಯ ಕನ್ವೀನರ್ ಮಾಡಿದರು. ಅಷ್ಟೇ ಅಲ್ಲ, ಕೇಂದ್ರ ರೇಷ್ಮೆ ಬೋರ್ಡ್‌ನ ಚೇರ್ಮನ್ ಮಾಡಿದರು. ಅಭ್ಯರ್ಥಿಗಳ ಆಯ್ಕೆಯ ಸ್ವಾತಂತ್ರ ಕೊಟ್ಟರು. ಎರಡು ಸಲ ಮುಖ್ಯಮಂತ್ರಿಯಾಗುವ ಅವಕಾಶ ಕಲ್ಪಿಸಿಕೊಟ್ಟರು. ಪಕ್ಷದ ನಾಯಕರಿಂದ ಬಂದ ದೂರುಗಳನ್ನು ನಿರ್ಲಕ್ಷಿಸಿದರು. ಬಲಾಢ್ಯ ಜಾತಿಯ ನಾಯಕರು ಬಂಡಾಯವೆದ್ದರೂ, ಅರಸು ವಿರುದ್ಧ ಸೆಟೆದುನಿಂತ ಎಸ್.ಎಂ.ಕೃಷ್ಣ 70 ಶಾಸಕರ ಸಹಿ ಸಂಗ್ರಹಿಸಿದ್ದರೂ, ಅವರಿಗೆ ಸೊಪ್ಪು ಹಾಕದೆ ತಣ್ಣಗಾಗಿಸಿದರು. ಅರಸರೂ 20 ಅಂಶದ ಕಾರ್ಯಕ್ರಮಗಳ ಜೊತೆಗೆ ಕೆಲವು ಕ್ರಾಂತಿಕಾರಿ ಕ್ರಮಗಳ ಮೂಲಕ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಬೆಳೆದರು. ಬೆಳೆದ ನಂತರ ಇಂದಿರಾರನ್ನು ನಿರ್ಲಕ್ಷಿಸಿದರು. ನನ್ನ ಪ್ರಕಾರ ಇದು ದೇವರಾಜ ಅರಸರ ದೊಡ್ಡ ತಪ್ಪು. ಇದು ಮನುಷ್ಯ ಸಹಜ ತಪ್ಪು ಎಂದುಕೊಂಡರೂ, ಇದರಿಂದಾದ ಪರಿಣಾಮ ಚಿಂತನೆಗೆ ಯೋಗ್ಯವಾದುದು.







