ಇಬ್ಬರಿಗೆ ಮರಣದಂಡನೆ-ಒಬ್ಬನಿಗೆ ಜೀವಾವಧಿ ಶಿಕ್ಷೆ
ಜಿಗಿಶಾ ಕೊಲೆ ಪ್ರಕರಣ
ಹೊಸದಿಲ್ಲಿ, ಆ.22: ಕಳೆದ 2009ರಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಐಟಿ ಕಾರ್ಯವಾಹಿ ಜಿಗಿಶಾ ಘೋಷ್ ಎಂಬಾಕೆಯ ಕೊಲೆ ಪ್ರಕರಣದ ಇಬ್ಬರು ಅಪರಾಧಿಗಳಿಗೆ ಮರಣದಂಡನೆ ಹಾಗೂ ಇನ್ನೊಬ್ಬನಿಗೆ ಜೀವಾವಧಿ ಕಾರಾಗೃಹ ವಾಸದ ಶಿಕ್ಷೆ ವಿಧಿಸಲಾಗಿದೆ.
ಸಲಹಾ ಸಂಸ್ಥೆಯೊಂದರಲ್ಲಿ ಕಾರ್ಯವಾಹಿ ವ್ಯವಸ್ಥಾಪಕಿಯಾಗಿದ್ದ 28ರ ಹರೆಯದ ಜಿಗಿಶಾ ತನ್ನ ಕಚೇರಿಯ ಕ್ಯಾಬ್‌ನಿಂದ ದಕ್ಷಿಣ ದಿಲ್ಲಿಯ ವಸಂತ ವಿಹಾರ್‌ನ ತನ್ನ ಮನೆಯ ಸಮೀಪ ಇಳಿದ ಬಳಿಕ, ಆಕೆಯನ್ನು ಅಪಹರಿಸಿ ಕೊಲೆ ಮಾಡಲಾಗಿತ್ತು. ಜಿಗಿಶಾಳ ಮೃತದೇಹ ಮೂರು ದಿನಗಳ ಬಳಿಕ, ದಿಲ್ಲಿಯ ಹೊರವಲಯದ, ಹರ್ಯಾಣದ ಸೂರಜ್‌ಕುಂಡ್‌ನ ಬಳಿ ಪತ್ತೆಯಾಗಿತ್ತು.
ರವಿ ಕಪೂರ್, ಬಲಜೀತ್ ಹಾಗೂ ಅಮಿತ್ ಶುಕ್ಲಾ ಎಂಬವರು ಆಕೆಯನ್ನು ಕೊಂದು, ಅವಳ ಡೆಬಿಟ್ ಕಾರ್ಡ್ ಉಪಯೋಗಿಸಿ ರಾಜಧಾನಿಯ ಜನಪ್ರಿಯ ಮಾರುಕಟ್ಟೆಯೊಂದರಲ್ಲಿ ಭರ್ಜರಿ ಖರೀದಿ ನಡೆಸಿದ್ದರು.
ಅವರು ಯಾವುದೇ ಪಶ್ಚಾತ್ತಾಪದ ಛಾಯೆಯಿಲ್ಲದೆ, ವಾಚು, ಶೂ ಹಾಗೂ ತಂಪು ಕನ್ನಡಕಗಳನ್ನು ಖರೀದಿಸುತ್ತಿದ್ದುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಕಪೂರ್, ಶುಕ್ಲಾ ಹಾಗೂ ಬಲಜೀತ್, ಜಿಗಿಶಾಳನ್ನು ಕೊಂದುದು ನಿಸ್ಸಂಶಯವಾಗಿ ಸ್ಪಷ್ಟವಾಗಿದೆ. ಕೊಲೆ ನಡೆಸಿದ ಬಳಿಕ ಅವರು ಮೃತದೇಹವನ್ನು ಪೊದೆಯೊಳಗೆ ಎಸೆದಿದ್ದರು. ಈ ಮೂವರೇ ಅಪರಾಧ ನಡೆಸಿದ್ದಾರೆಂಬುದು ಸಾಂದರ್ಭಿಕ ಸಾಕ್ಷಗಳಿಂದ ರುಜುವಾತಾಗಿದೆಯೆಂದು ನ್ಯಾಯಾಲಯ ಹೇಳಿದೆ.
ರವಿ ಕಪೂರ್ ಹಾಗೂ ಅಮಿತ್ ಶುಕ್ಲಾರಿಗೆ ಮರಣದಂಡನೆ ವಿಧಿಸಿರುವ ನ್ಯಾಯಾಲಯ ಬಲಜೀತ್‌ಗೆ ಆಜೀವ ಕಾರಾಗೃಹ ಶಿಕ್ಷೆಯ ತೀರ್ಪು ನೀಡಿದೆ.





