ವರದಕ್ಷಿಣೆ ತಾರದುದಕ್ಕಾಗಿ ಮಹಿಳೆಯ ಮೇಲೆ ಆ್ಯಸಿಡ್ ದಾಳಿ
ಸಂಭಾಲ್(ಉ.ಪ್ರ.), ಆ.22: ವರದಕ್ಷಿಣೆ ನೀಡಲು ನಿರಾಕರಿಸಿದ 25ರ ಹರೆಯದ ಮಹಿಳೆಯೊಬ್ಬಳ ಮೇಲೆ ಆಕೆಯ ಗಂಡ ಹಾಗೂ ಆತನ ಕುಟುಂಬಿಕರು ಆ್ಯಸಿಡ್ ದಾಳಿ ನಡೆಸಿದ ಪೈಶಾಚಿಕ ಕೃತ್ಯವೊಂದು ಕೊತ್ವಾಲಿ ಪ್ರದೇಶದಲ್ಲಿ ನಡೆದಿದೆಯೆಂದು ಪೊಲೀಸರಿಂದು ತಿಳಿಸಿದ್ದಾರೆ.
ಈ ಬಗ್ಗೆ ಫರ್ಝಾನಾ ಎಂಬ ಮಹಿಳೆ ದೂರು ನೀಡಿದ್ದು, ನಿನ್ನೆ ಸಂಜೆ ತನ್ನ ಕುಟುಂಬ ಸದಸ್ಯರೊಂದಿಗೆ ನಡೆದ ಮಾತುಕತೆಯ ವೇಳೆ, ತನ್ನ ಮಾವ ಇಕ್ಬಾಲ್, ಗಂಡ ಅಕ್ರಂ, ಆತನ ಸೋದರ ಲಯಿಕ್ ಅಹ್ಮದ್ ಹಾಗೂ ಸೋದರಿ ಕೇಸರ್ ಜಹಾನ್ ಎಂಬವರು ತನ್ನ ಮೇಲೆ ಆ್ಯಸಿಡ್ ಎರಚಿದರೆಂದು ಆರೋಪಿಸಿದ್ದಾಳೆ.
ಫರ್ಝಾನಾ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಳು. ಮದುವೆಯಾದಾಗಿನಿಂದ ಆಕೆಯ ಗಂಡನ ಮನೆಯವರು ಕಾರು ಹಾಗೂ ನಗದಿಗಾಗಿ ಒತ್ತಾಯಿಸುತ್ತಿದ್ದುದರಿಂದ ಸಂತ್ರಸ್ತೆ ಗಂಡನ ಮನೆಯನ್ನು ತ್ಯಜಿಸಿದ್ದಳೆಂದು ಪೊಲೀಸ್ ನಿರೀಕ್ಷಕ ಯಶ್ಪಾಲ್ ಸಿಂಗ್ ಯಾದವ್ ತಿಳಿಸಿದ್ದಾರೆ.
ಸುಮಾರು ಒಂದೂವರೆ ವರ್ಷದ ಹಿಂದೆ ಫರ್ಝಾನಾ ಹಾಗೂ ಅಕ್ರಂರ ಮದುವೆ ನಡೆದಿತ್ತು. ಅಕ್ರಂ ಹಾಗೂ ಆತನ ಕುಟುಂಬಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಫರ್ಝಾನಾಳನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದೆಯೆಂದು ಯಾದವ್ ಹೇಳಿದ್ದಾರೆ.





