ಬಿ.ಎ ಮೊಹಿದಿನ್‌ರ ವೆಚಾರಿಕ ಸಂಪನ್ನತೆಗೆ ಸಂದ ಗೌರವ
ಮಾನ್ಯರೆ, ರಾಜಕೀಯ ಲಾಬಿ,ಕಪ್ಪಕಾಣಿಕೆಗಳ ಸಂದಾಯವಾಗದೆ,ಅರ್ಹತೆಯ ಆಧಾರದಲ್ಲಿ ಸಚಿವ ಹುದ್ದೆಯನ್ನಲಂಕರಿಸಿದ ಪ್ರತಿಭಾವಂತ ಚಿಂತಕ ಬಿ.ಎ.ಮೊಹಿದಿನ್. ರಾಜಕಾರಣದ ವಿವಿಧ ಪಟ್ಟುಗಳನ್ನು ಪ್ರಯೋಗಿಸಿ, ಮಂತ್ರಿಯಾಗಲೇಬೇಕೆಂದು ಮಾಡು ಮಡಿ ಎಂಬಂತೆ ಕಂಡು ಬರುತ್ತಿದ್ದ ವಿಧಾನಸಭಾ ಸದಸ್ಯರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಯಾವ ಫಲಾಪೇಕ್ಷೆಯನ್ನೂ ಬಯಸದೆ,ನಂಬಿದ ತತ್ವಗಳಿಗಾಗಿ ತನ್ನನ್ನು ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದ ವಿಧಾನ ಪರಿಷತ್‌ನ ಸದಸ್ಯರಾದ ಬಿ.ಎ.ಮೊಹಿದಿನ್‌ರನ್ನು ಸಂಪುಟ ದರ್ಜೆಯ ಸಚಿವನಾಗಿ ಆರಿಸಿಕೊಂಡಿರುವ ಮುಖ್ಯಮಂತ್ರಿ ಜೆ.ಎಚ್.ಪಾಟೀಲ್‌ರ ನಿರ್ಧಾರ ಅಂದು ರಾಜಕೀಯ ವಿಶ್ಲೇಷಕರನ್ನು ಅಚ್ಚರಿಯಲ್ಲಿ ಕೆಡವಿತ್ತು.
ಬಿ.ಎ.ಮೊಹಿದಿನ್‌ರಿಗೂ ಇದು ಅನಿರೀಕ್ಷಿತ ವಾರ್ತೆಯಾಗಿತ್ತು. ಮನೆ ಬಾಗಿಲಿಗೇ ಬಂದ ಆಹ್ವಾನವನ್ನು ನಾಡ ಜನರ ಸೇವೆಗಾಗಿ ಒದಗಿದ ಅವಕಾಶ ಎಂದಷ್ಟೇ ಮೊಹಿದಿನ್ ವಿನಯದಿಂದ ಸ್ವೀಕರಿಸಿದ್ದರು. ಸಚಿವ ಪದವಿಯ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಸಾವಿರ ಸಾವಿರ ಪೇಯ್ಡ್ ಬೆಂಬಲಿಗರನ್ನು ಕರೆದುಕೊಂಡು ಹೋಗದೆ ಸರಳವಾಗಿಯೇ ಪಾಲ್ಗೊಂಡು ಸಚಿವ ಸಂಪುಟ ಸೇರಿದ್ದರು
ಬಿ.ಎ.ಮೊಹಿದಿನ್ ಜೆ.ಎಚ್.ಪಾಟೀಲ್‌ರ ಸಂಪುಟಕ್ಕೆ ಕಳಶ ಪ್ರಾಯ ಎಂದು ನೇರ ನಡೆ ನುಡಿಯ ಪಿ.ಲಂಕೇಶ್ ಅವರು ‘ಲಂಕೇಶ್ ಪತ್ರಿಕೆ’ಯಲ್ಲಿ ಬರೆದು ಸಂಭ್ರಮಿಸಿದ್ದು ಮೊಹಿದಿನ್‌ರ ಮುತ್ಸದ್ಧಿತನಕ್ಕೆ ದೊರೆತ ಪಾರಿತೋಷಕ ಎಂದೇ ಇತಿಹಾಸದಲ್ಲಿ ಪರಿಗಣಿತವಾಗಿದೆ. ಮನುಷ್ಯ ಬದುಕಿನ ಅಗ್ರಮಾನ್ಯ ಸಿದ್ದಿ ಎಂದೆನ್ನಬಹುದಾದ ಶೈಕ್ಷಣಿಕ,ಸಾಮಾಜಿಕ,ರಾಜಕೀಯ ಪಕ್ವತೆಯ ಪ್ರತ್ಯಕ್ಷ ಉದಾಹರಣೆಯಾಗಿರುವ ಬಿ.ಎ.ಮೊಹಿದಿನ್‌ರಿಗೆ ದೇವರಾಜ ಅರಸು ಪ್ರಶಸ್ತಿ ಅರ್ಹ ಗೌರವವಾಗಿದೆ.
ಅರಸು ಅವರ ಆದರಾಭಿಮಾನಕ್ಕೆ ಪಾತ್ರರಾದ ಆಪ್ತರೂ ಆಗಿದ್ದರು ಮೊಹಿದಿನ್. ಇವತ್ತಿಗೂ ಜ್ಞಾನದ ದೀವಟಿಗೆಯಂತೆ ಸ್ವಸ್ಥ,ಸ್ವಾಭಿಮಾನಿ,ಸದೃಢ ಸಮಾಜಕ್ಕೆ ಹೊಂಬೆಳಕಿನಂತೆ ಪ್ರಜ್ವಲಿಸುತ್ತಿರುವ ನನ್ನ ಪ್ರೀತಿ ಯ ಮೊಹಿದಿನ್ ಸಾಹೇಬರಿಗೆ ಎದೆ ತುಂಬಿ ಹಾರೈಸುವೆ. ಆಯುರಾರೋಗ್ಯವನ್ನೂ ದೇವರು ಅವರಿಗೆ ಕರುಣಿಸಲಿ.





