ರಾಜ್ಯದಲ್ಲಿ ಹುಲಿ ಯೋಜನೆ ಜಾರಿ ಇಲ್ಲ: ಸಚಿವ ರೈ

ಉಡುಪಿ, ಆ.22: ಹುಲಿ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವಂತೆ ಈ ಹಿಂದಿನ ಬಿಜೆಪಿ ಸರಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಆಗ ಕೇಂದ್ರದಲ್ಲಿದ್ದ ಯುಪಿಎ ಸರಕಾರ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈಗ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಹುಲಿ ಯೋಜನೆಗೆ ಒಪ್ಪಿಗೆ ನೀಡಿದರೂ ನಾವು ಜಾರಿಗೆ ತರುವುದಿಲ್ಲ. ಪ್ರತಿಪಕ್ಷಗಳು ಚುನಾವಣೆಗಾಗಿ ಹುಲಿ ಯೋಜನೆ ಬಗ್ಗೆ ಅಪ್ರಪಚಾರ ನಡೆಸುತ್ತಿವೆ ಎಂದು ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ರಮಾನಾಥ ರೈ ಹೇಳಿದ್ದಾರೆ.
ಆದಿಉಡುಪಿಯಲ್ಲಿರುವ ಉಡುಪಿ ವಲಯ ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ನೂತನ ವಾಗಿ ನಿರ್ಮಿಸಲಾದ ಉಪವಲಯ ಅರಣ್ಯಾ ಧಿಕಾರಿಯವರ ವಸತಿಗೃಹವನ್ನು ಸೋಮವಾರ ಉದ್ಘಾಟಿಸಿದ ಬಳಿಕ ಗಿಡ ನೆಟ್ಟು ಅವರು ಮಾತ ನಾಡುತ್ತಿದ್ದರು.
ಕಸ್ತೂರಿ ರಂಗನ್ ವರದಿ ಕುರಿತು ಜನ ವಸತಿಗೆ ತೊಂದರೆ ಆಗದಂತೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ. ಕೇಂದ್ರದಲ್ಲಿ ಯುಪಿಎ ಸರಕಾರ ಆಡಳಿತದಲ್ಲಿದ್ದಾಗ ಈ ವರದಿಯ ಶಿಫಾರಸಿನ ವಿರುದ್ಧ ಬಿಜೆಪಿ ಬೊಬ್ಬೆ ಹಾಕಿತು. ಆದರೆ ಕೆಲ ವೊಂದು ಆಕ್ಷೇಪ ಸಲ್ಲಿಸಿ ಹಲವು ತಿಂಗಳಾದರೂ ಈ ಬಗ್ಗೆ ಕೇಂದ್ರ ಸರಕಾರ ಚಕಾರ ಎತ್ತುತ್ತಿಲ್ಲ. ಆ ಬಗ್ಗೆ ಬಿಜೆಪಿ ಈಗ ಮಾತನಾಡುತ್ತಿಲ್ಲ. ಈ ವರದಿಯ ಜಾರಿ ಹೊಣೆ ಕೇಂದ್ರ ಸರಕಾರದ್ದೇ ಹೊರತು ರಾಜ್ಯದಲ್ಲ ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಬೆಂಗಳೂರು ಅರಣ್ಯ ಪಡೆಯ ಮುಖ್ಯಸ್ಥ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎಸ್.ಸುರೇಶ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮಂಗಳೂರು ವೃತ್ತ ನೋಡೆಲ್ ಅಧಿಕಾರಿ ಜಯನರಸಿಂಹರಾಜ್, ಮಂಗಳೂರು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂಜಯ್ ಎಸ್.ಬಿಜೂರು, ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ.ಅಮರನಾಥ ಮುಖ್ಯ ಅತಿಥಿಗಳಾಗಿದ್ದರು.
ಕುಂದಾಪುರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಬಾಬಾ ರೈ, ಉಡುಪಿ ವಲಯ ಅರಣ್ಯ ಅಧಿಕಾರಿ ರಮೇಶ್ ಎಚ್., ಅರಣ್ಯ ಸಂಚಾರ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸದಾನಂದ ಮೊದಲಾದವರು ಉಪಸ್ಥಿತರಿದ್ದರು.





