ನಗದು ವ್ಯವಹಾರಕ್ಕೆ ಮಿತಿ, ಮೀರಿದ್ದಕ್ಕೆ ನಿಷೇಧ
ಕಪ್ಪುಹಣಕ್ಕೆ ಕಡಿವಾಣ
ಹೊಸದಿಲ್ಲಿ, ಆ.22: ಆರ್ಥಿಕತೆಯಲ್ಲಿ ಕಪ್ಪುಹಣಕ್ಕೆ ಕಡಿವಾಣ ಹಾಕುವ ಸಲುವಾಗಿ 3 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರವನ್ನು ನಿಷೇಧಿಸಲು ಕೇಂದ್ರ ಸರಕಾರ ಮುಂದಾಗಿದೆ. ಸುಪ್ರೀಂಕೋರ್ಟ್ ನೇಮಕ ಮಾಡಿದ ವಿಶೇಷ ತನಿಖಾ ತಂಡದ ಶಿಫಾರಸಿನ ಮೇರೆಗೆ ಈ ಕ್ರಮಕ್ಕೆ ಸರಕಾರ ಒಲವು ತೋರಿದೆ.
15 ಲಕ್ಷಕ್ಕಿಂತ ಅಧಿಕ ಮೊತ್ತದ ನಗದು ಹೊಂದಿರಬಾರದು ಎಂಬ ಎಸ್‌ಐಟಿ ಶಿಫಾರಸಿನ ಜಾರಿಗೆ ವ್ಯಾಪಾರ ಹಾಗೂ ಉದ್ಯಮ ವಲಯದ ವಿರೋಧ ಇರುವ ಹಿನ್ನೆಲೆಯಲ್ಲಿ ಸರಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಇದು ತೆರಿಗೆ ಅಧಿಕಾರಿಗಳಿಂದ ಕಿರುಕುಳ ಎದುರಿಸಲು ಕಾರಣವಾಗಬಹುದು ಎಂಬ ಹಿನ್ನೆಲೆಯಲ್ಲಿ ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಮೂಲಗಳು ಹೇಳಿವೆ.
ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಚೆಕ್ ಅಥವಾ ಡ್ರಾಫ್ಟ್‌ಗಳ ಮೂಲಕ ವ್ಯವಹಾರ ಮಾಡುವಂತೆ ಉತ್ತೇಜಿಸಲು 3 ಲಕ್ಷ ರೂಪಾಯಿ ಮಿತಿ ಪೂರಕವಾಗಲಿದೆ. ಈ ವಿಧಾನದ ಮೂಲಕ ವ್ಯವಹಾರ ನಡೆದರೆ ಅದರ ಜಾಡು ಹಿಡಿಯುವುದು ಸುಲಭ. ಲೆಕ್ಕ ನೀಡದ ಹಣದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸರಕಾರ ಮುಂದಾಗಿದ್ದರೂ ಆಭರಣಗಳ ಖರೀದಿ ಹಾಗೂ ಕಾರುಗಳ ಖರೀದಿಯಲ್ಲಿ ವ್ಯಾಪಕವಾಗಿ ಇನ್ನೂ ನಗದು ವ್ಯವಹಾರ ನಡೆಯುತ್ತಿದೆ. ಸರಕಾರ ಪ್ಲಾಸ್ಟಿಕ್ ಹಣ ಬಳಸುವುದನ್ನು ಉತ್ತೇಜಿಸಲು ಕ್ರಮ ಕೈಗೊಳ್ಳುತ್ತಿದೆ.







